ಮಂಗಳೂರು ಶೈಲಿಯ ‘ಕರಿಮಣಿ ಸರ’, ವಜ್ರದ ಪುಟಾಣಿ ಪದಕ... ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯ ಮದುಮಗಳ ಲುಕ್ ಹೆಚ್ಚಿಸಿರುವ ಈ ಮಂಗಲಸೂತ್ರದ ಚಿತ್ರವೂ ಸುದ್ದಿಯೂ ಈಗ ಅತಿ ಹೆಚ್ಚು ಚರ್ಚೆಗೊಳಗಾಗುತ್ತಿದೆ.
ಇಟಲಿಯ ಕೊಮೊ ಸರೋವರ ಪ್ರದೇಶದ ಮದುವೆ ಸಭಾಂಗಣದಲ್ಲಿ ನಡೆದ ಕೊಂಕಣಿ ಶೈಲಿಯ ಸಂಪ್ರದಾಯಗಳ ವೇಳೆ ರಣವೀರ್ ಸಿಂಗ್ ದೀಪಿಕಾಗೆ ಈ ಮಂಗಲಸೂತ್ರವನ್ನು ಕಟ್ಟಿದ್ದರು. ಮಂಗಳೂರು, ಉಡುಪಿ ಭಾಗದಲ್ಲಿ ಕರಿಮಣಿ ಎಂದೇ ಕರೆಸಿಕೊಳ್ಳುವ ಮಂಗಲಸೂತ್ರ ಎರಡೆಳೆಗಳಲ್ಲಿ ಇರುವುದು ಸಾಮಾನ್ಯ. ಇದನ್ನು ‘ಶೃಂಗಾರ ಮಣಿ’, ‘ಜೀರೊ ಬೀಡ್ಸ್’ ಕರಿಮಣಿ ಎಂದೇ ಕರೆಯಲಾಗುತ್ತದೆ. ಆದರೆ ಈಗ ಒಂದೆಳೆಯ ಕರಿಮಣಿ ಧರಿಸುವುದು ಫ್ಯಾಷನ್. ದೀಪಿಕಾಗೆ ಗೃಹಿಣಿಯ ನೋಟವನ್ನು ನೀಡಿರುವ ಈ ಕರಿಮಣಿ ಸರದೊಂದಿಗೆ ವಜ್ರದ ಪದಕವನ್ನು ಖುದ್ದು ಅವರೇ ಆಯ್ಕೆ ಮಾಡಿರುವುದು. ಸುಮಾರು ₹ 20 ಲಕ್ಷ ಮೌಲ್ಯದ ಈ ಪದಕವನ್ನು ನಂತರ ರಣವೀರ್ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
ರಣವೀರ್ ಸಿಂಗ್ ಜೊತೆಗೆ ಮದುವೆ, ಆರತಕ್ಷತೆಗಳು ಮುಗಿದಿವೆ. ಆದರೆ ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬಂತೆ ಈ ಸೂಪರ್ ಜೋಡಿಯ ಮದುವೆ ಫೋಟೊಗಳನ್ನು ಅಂತರ್ಜಾಲದಲ್ಲಿ ಇನ್ನೂ ಕೆದಕುತ್ತಲೇ ಇದ್ದಾರೆ ಅವರ ಅಭಿಮಾನಿಗಳು.
ಬೆಂಗಳೂರಿನ ಲೀಲಾ ಪ್ಯಾಲೆಸ್ ಹೋಟೆಲ್‌ನಲ್ಲಿ ಬುಧವಾರ ನಡೆದ ಆರತಕ್ಷತೆಗೆ ಕೆನೆ ಬಣ್ಣದ ಸೆಲ್ಫ್ ಚಿತ್ತಾರವಿದ್ದ ಬಂಗಾರದ ಬಣ್ಣದ ಸೀರೆ, ಪಚ್ಚೆ ಮತ್ತು ಮುತ್ತಿನ ಭಾರಿ ಆಭರಣಗಳನ್ನು ಧರಿಸಿದ್ದರು. ಹೋಟೆಲ್‌ನ ಮಹಡಿಯಿಂದ ದಂಪತಿ ಇಳಿದುಬರುತ್ತಿದ್ದರೆ ದೀಪಿಕಾ ಸೆರಗು ಮೆಟ್ಟಿಲುಗಳನ್ನು ಸವರುತ್ತಾ ಬರುತ್ತಿತ್ತು. ಕ್ಯಾಮೆರಾಗಳಿಗೆ ಮುಖವೊಡ್ಡುವ ಮೊದಲು ಆ ಸೆರಗನ್ನು ತಮ್ಮಿಬ್ಬರಿಂದ ನಾಲ್ಕಡಿ ದೂರಕ್ಕೆ ಹರಡಿಕೊಳ್ಳುವಂತೆ ಮಾಡಿದ್ದು ರಣವೀರ್. ದೀಪಿಕಾ ಕೆನ್ನೆಗುಳಿಯಲ್ಲಿಯೂ ಕೆಂಪನೆ ರಂಗು ಚಿಮ್ಮುತ್ತಾ ನಸುನಗುತ್ತಾ ನಿಂತಿದ್ದರು. ಮುದ್ದಿನ ಮಗಳಿಗಾಗಿ ತಾಯಿ ಉಜ್ಜಲಾ ಪಡುಕೋಣೆ ಆರಿಸಿದ ಸೀರೆ ಅದಾಗಿತ್ತು.
ಬೆಂಗಳೂರಿನ ಈ ಆರತಕ್ಷತೆಯಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿರುವುದು ಪರಿಸರಸ್ನೇಹಿ ನಡೆ. ಮರುಬಳಕೆ ಮಾಡಬಹುದಾದ ಕಾಗದದ ಹೂವುಗಳ ಅಲಂಕಾರ, ಡೈನಿಂಗ್ ಟೇಬಲ್ ಮತ್ತು ಡೈನಿಂಗ್ ಸೆಟ್‌ಗಳು ಕಬ್ಬಿನ ಫೈಬರ್‌ನಿಂದ ತಯಾರಿಸಿದ ವಸ್ತುಗಳಾಗಿದ್ದವು. ಇದು ಅತಿಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ತರಪ್ರದೇಶ ಮೂಲದ ಚುಕ್ ಎಂಬ, ಟೇಬಲ್‌ವೇರ್ ಪ್ರಾಡಕ್ಟ್ಸ್ ಕಂಪನಿ ಇವುಗಳನ್ನು ಪೂರೈಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.