ADVERTISEMENT

ಸಮಂತಾ–ನಾಗ ಚೈತನ್ಯ ವಿಚ್ಛೇದನ ಕುರಿತ ಹೇಳಿಕೆ: ಸುರೇಖಾ ವಿರುದ್ಧ ನಾಗಾರ್ಜುನ ದೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2024, 13:39 IST
Last Updated 3 ಅಕ್ಟೋಬರ್ 2024, 13:39 IST
ನಾಗ ಚೈತನ್ಯ ಮತ್ತು ಸಮಂತಾ ಜತೆ ನಾಗಾರ್ಜುನ
ನಾಗ ಚೈತನ್ಯ ಮತ್ತು ಸಮಂತಾ ಜತೆ ನಾಗಾರ್ಜುನ    

ಹೈದರಾಬಾದ್: ತಮ್ಮ ಮಗ, ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ವಿಚ್ಛೇದನ ಪಡೆಯಲು ಬಿಆರ್‌ಎಸ್ ನಾಯಕ ಕೆ.ಟಿ. ರಾಮರಾವ್ ಕಾರಣ ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದ ತೆಲಂಗಾಣ ಪರಿಸರ ಸಚಿವೆ ಕೊಂಡಾ ಸುರೇಖಾ ವಿರುದ್ಧ ತೆಲುಗಿನ ಹಿರಿಯ ನಟ ನಾಗಾರ್ಜುನ ದೂರು ದಾಖಲಿಸಿದ್ದಾರೆ.

‘ಆಕೆಯ ಹೇಳಿಕೆಗಳ ಸುಳ್ಳು ಸ್ವರೂಪದ ಬಗ್ಗೆ ಸಂಪೂರ್ಣ ಅರಿವಿದೆ. ನಮ್ಮ ವೈಯಕ್ತಿಕ, ವೃತ್ತಿಪರ ಮತ್ತು ಕೌಟುಂಬಿಕ ಖ್ಯಾತಿಗೆ ಹಾನಿ ಮಾಡುವ ಏಕೈಕ ದುರುದ್ದೇಶಪೂರ್ವಕವಾಗಿ ಈ ಆರೋಪಗಳನ್ನು ಮಾಡಲಾಗಿದೆ’ ಎಂದು ನಾಗಾರ್ಜುನ ನಾಂಪಲ್ಲಿ ಜಿಲ್ಲೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ರಾಜಕೀಯ ಲಾಭ ಮತ್ತು ಸೆನ್ಸೇಷನ್‌ಗಾಗಿ ನನ್ನ ಮತ್ತು ಕುಟುಂಬದ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುವ ದುರುದ್ದೇಶಪೂರಿತ ಹೇಳಿಕೆ ನೀಡಲಾಗಿದೆ. ಇದು ಕ್ರಿಮಿನಲ್ ಅಪರಾಧವಾಗಿದೆ’ಎಂದೂ ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

‘ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ನಟಿ ಸಮಂತಾ ರುತ್‌ ಪ್ರಭು ಅವರು ವಿಚ್ಛೇದನ ಪಡೆದುಕೊಳ್ಳಲು ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್‌ ಕಾರಣ’ ಎಂದು ತೆಲಂಗಾಣ ಅರಣ್ಯ ಮತ್ತು ಪರಿಸರ ಸಚಿವೆ ಕೊಂಡಾ ಸುರೇಖಾ ಬುಧವಾರ ನೀಡಿರುವ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದತ್ತು. ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಸುರೇಖಾ ತಮ್ಮ ಹೇಳಿಕೆ ಹಿಂಪಡೆದಿದ್ದಾರೆ.

ಸುರೇಖಾ ಹೇಳಿದ್ದು..

‘ಕೆ.ಟಿ.ರಾಮ ರಾವ್‌ ಡ್ರಗ್ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್‌ ಪಾರ್ಟಿ ಆಯೋಜಿಸುತ್ತಿದ್ದರು. ಅವರ ದೌರ್ಜನ್ಯ ಸಹಿಸದೇ ಅನೇಕ ನಟಿಯರು ನಟನೆಯನ್ನೇ ಬಿಟ್ಟಿದ್ದಾರೆ. ಕೆಲವರು ಮದುವೆಯಾಗಿ, ಚಿತ್ರರಂಗದಿಂದ ದೂರ ಉಳಿದಿದ್ದಾರೆ. ನಾಗಾರ್ಜುನ ಒಡೆತನದ ಎನ್‌–ಕನ್ವೆನ್ಷನ್‌ ಸೆಂಟರ್‌ ನೆಲಸಮಗೊಳಿಸು ವುದು ಬೇಡ ಎಂದಾದಲ್ಲಿ, ತನ್ನ ಬಳಿ ಸಮಂತಾ ಅವರನ್ನು ಕಳುಹಿಸುವಂತೆ ರಾಮ ರಾವ್‌ ಬೇಡಿಕೆ ಇಟ್ಟಿದ್ದರು. ರಾಮ ರಾವ್‌ ಬಳಿ ಹೋಗುವಂತೆ ಸಮಂತಾ ಅವರಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಆಕೆ ಒಪ್ಪಿಕೊಂಡಿರಲಿಲ್ಲ. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯಿತು’ಎಂದು ಸಚಿವೆ ಸುರೇಖಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.