ಪ್ಪತ್ತೈದು ನಿಮಿಷದ ಫುಟೇಜ್ ನೋಡಿದ ಅಮ್ಮ ಶ್ರೀದೇವಿ, ಮಗಳು ಜಾಹ್ನವಿ ಎದುರು ಕೂತರು. ಮರಾಠಿಯ ‘ಸೈರಾಟ್’ ಸಿನಿಮಾದ ಹಿಂದಿ ರಿಮೇಕ್ ‘ಧಡಕ್’. ಅದರ ನಾಯಕಿ ಜಾಹ್ನವಿ. ಶ್ರೀದೇವಿ ಫೆಬ್ರುವರಿಯಲ್ಲಿ ಕೊನೆಯುಸಿರೆಳೆಯುವ ಮೊದಲು ಮಗಳನ್ನು ತೆರೆಮೇಲೆ ನೋಡಿದ ಅವಧಿ ಅಷ್ಟೇ. ಮೊದಲು ಅವರು ಹೇಳಿದ್ದು- ‘ಮಸ್ಕರಾ ಹರಡಿಕೊಂಡುಬಿಟ್ಟಿದೆ. ಹೊರಾಂಗಣದಲ್ಲಿ ಶೂಟಿಂಗ್ ಇರುವಾಗ ಮುಖದ ತುಂಬಾ ಏನೇನೋ ಮೇಕಪ್ ಹಾಕಿಕೊಳ್ಳಬೇಡ’. ಮಗಳು ಆಯಿತೆನ್ನುವಂತೆ ತಲೆಯಾಡಿಸಿದಳು. ಸಿನಿಮಾದ ಎರಡನೇ ಅರ್ಧದ ಚಿತ್ರಕತೆ ಇನ್ನಷ್ಟು ಬದಲಾಗಿದ್ದರೆ ಚೆನ್ನಾಗಿತ್ತೆಂಬ ಕಿವಿಮಾತನ್ನೂ ಅವರು ಹೇಳಿದ್ದರು.
ಹಾಗೆ ನೋಡಿದರೆ, ಶ್ರೀದೇವಿಗೆ ಈ ಮಗಳು ನಟಿಯಾಗುವುದು ಏನೇನೂ ಇಷ್ಟವಿರಲಿಲ್ಲ. ಚಿಕ್ಕಮಗಳು ಖುಷಿಯನ್ನು ಅವರು ತೆರೆಮೇಲೆ ಕಾಣಬಯಸಿದ್ದರು. ನಟಿಯಾಗುವವರಿಗೆ ದಪ್ಪ ಚರ್ಮ ಇರಬೇಕು ಎನ್ನುವುದು ಅವರ ನಂಬಿಕೆಯಾಗಿತ್ತು. ದೊಡ್ಡ ಮಗಳು ನಾಜೂಕು ಎಂದೇ ಅವರು ಕಾಳಜಿ ಮಾಡುತ್ತಿದ್ದರು.
ಜಾಹ್ನವಿ ಅತಿ ಸಂರಕ್ಷಿತ ಮಗಳು. ಒಮ್ಮೆ ಲ್ಯಾಕ್ಮೆ ಸಮಾರಂಭಕ್ಕೆ ಹೋದಾಗ ಕ್ಯಾಮೆರಾ ಕಣ್ಣುಗಳು ಪಟಪಟನೆ ಹೊಡೆಯತೊಡಗಿದವು. ಆಗ ಶ್ರೀದೇವಿ ಮಗಳ ಪಕ್ಕದಲ್ಲಿ ಕದಲದೆ ನಿಂತರು. ಮಗಳದ್ದೇ ಒಂದು ಸಿಂಗಲ್ ಫೋಟೊ ಬೇಕೆಂದು ಫೋಟೊಗ್ರಾಫರ್‌ಗಳು ಪಟ್ಟು ಹಿಡಿದಾಗ ಅದಕ್ಕೆ ಅವರು ಒಪ್ಪಲಿಲ್ಲ. ಜಾಹ್ನವಿ ವಿನಂತಿಸಿಕೊಂಡರೂ ಕರಗಲಿಲ್ಲ. ಮನೆಗೆ ಹೋದಮೇಲೆ ಅವರು ಅಲ್ಲಿ ಫೋಟೊ ತೆಗೆಸಿಕೊಳ್ಳುವುದು ಬೇಡ ಎಂದು ಹೇಳಿದ್ದು ಯಾಕೆ ಎಂದು ಮಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಜಾಹ್ನವಿ ಶಾಲೆಯಲ್ಲಿ ತುಂಬಾ ಜಾಣ ವಿದ್ಯಾರ್ಥಿನಿಯೇನೂ ಆಗಿರಲಿಲ್ಲ. ಅಟೆಂಡೆನ್ಸ್ ಸದಾ ಮೂವತ್ತು ಪರ್ಸೆಂಟ್ ಇರುತ್ತಿತ್ತಷ್ಟೆ. ಅಪ್ಪ-ಅಮ್ಮನ ಜೊತೆ ಸದಾ ಪ್ರವಾಸದಲ್ಲಿರುತ್ತಿದ್ದರಿಂದ ಹೀಗಾಗುತ್ತಿತ್ತು. ಆದರೆ, ಇತಿಹಾಸದಲ್ಲಿ ಆಸಕ್ತಿ. ಫ್ಲಾರೆನ್ಸ್‌ನಲ್ಲಿ ಕಲಾ ಇತಿಹಾಸದ ಅಧ್ಯಯನ ಮಾಡಬೇಕು, ಲಂಡನ್‌ನಲ್ಲಿ ಫ್ಯಾಷನ್ ಕುರಿತು ಓದಬೇಕು, ಲಾಸ್ ಏಂಜಲೀಸ್‌ನಲ್ಲಿ ಅಭಿನಯ ಕಲಿಯಬೇಕು ಎನ್ನುವುದು ಜಾಹ್ನವಿ ಹದಿನಾರರ ಹರೆಯಕ್ಕೆ ಬಂದಾಗ ಚೆಲ್ಲಿದ ಕನಸುಗಳು. ಒಲ್ಲದ ಮನಸ್ಸಿನಿಂದಲೇ ಮಗಳ ಅಭಿನಯಾಸಕ್ತಿಗೆ ಅಮ್ಮ ಮಣಿದರು.
ಲಾಸ್ ಏಂಜಲೀಸ್‌ಗೆ ಕರೆದುಕೊಂಡು ಹೋಗಿ ಬಿಟ್ಟು ಬರುವಾಗ, ‘ಮಗಳೇ, ಕಮಲವನ್ನು ಕೆಸರಿನಲ್ಲಿ ಹಾಕುತ್ತಿದ್ದೇನೆ. ಅದು ಹಾಗೇ ನಗು ನಗುತ್ತಾ ಅರಳಿರಲೆಂದು ಬಯಸುವೆ’ ಎಂದು ಹೇಳಿದ್ದರು. ಆ ಮಾತು ದಿನಗಟ್ಟಲೆ ಜಾಹ್ನವಿ ಕಿವಿಯಲ್ಲಿ ಗುನುಗುತ್ತಿತ್ತು.
ಅಮ್ಮ ಅಗಲಿದ ಮೇಲೆ ಜಾಹ್ನವಿ ಭಾವುಕ ಪತ್ರವೊಂದನ್ನು ಬರೆದರು. ತಮ್ಮ ಹುಟ್ಟುಹಬ್ಬದ ದಿನ ಇಲ್ಲವಾದ ಅಮ್ಮನ ಕುರಿತ ಬಿಕ್ಕಳಿಕೆ ಅದು.
ಶ್ರಿದೇವಿ ಬಾಲ್ಯದಿಂದಲೂ ಮಗಳಿಗೆ ತಮ್ಮದೇ ಕಥೆಗಳನ್ನು ಹೇಳಿದ್ದಿದೆ. ಮಲಗುವಾಗ ಅವರು ಅರುಹಿದ ಅಂಥ ಒಂದು ಸತ್ಯ ಕಥೆ ಇದು- ‘ನಾವು 1980, 1990ರ ದಶಕದಲ್ಲಿ ಏಕಕಾಲದಲ್ಲಿ ಎರಡು ಮೂರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೆವು. ಒಂದು ಸಿನಿಮಾದ ನಾಯಕ, ಇನ್ನೊಂದರ ನಿರ್ದೇಶಕರೂ ಹೌದು. ನಾವು ಎರಡೂ ಸಿನಿಮಾಗಳ ಚಿತ್ರೀಕರಣವನ್ನು ಊಟಿಯಲ್ಲಿ ನಿಗದಿ ಮಾಡಿದೆವು. ಒಂದು ಶಾಟ್ ಓಕೆ ಆದಮೇಲೆ ಇಡೀ ತಂಡ ನಾಯಕನನ್ನು ಫಾಲೋ ಮಾಡುತ್ತಿತ್ತು.
ಮರದ ಹಿಂದಕ್ಕೆ ಹೋಗಿ ಮೂತ್ರ ವಿಸರ್ಜನೆ ಮಾಡಿ ಆ ನಟ ಮರಳಿ ತಲೆಮೇಲೆ ಬೇರೆ ವಿಗ್ ಹಾಕಿಕೊಂಡರೆ, ಅದು ಇನ್ನೊಂದು ಸಿನಿಮಾ ಶಾಟ್‌ಗೆ ಸಿದ್ಧವಾಗಬೇಕು ಎನ್ನುವುದರ ಇಶಾರೆ ಆಗಿರುತ್ತಿತ್ತು. ವಿಗ್‌ಗಳನ್ನು ನೋಡಿಯೇ ನಾವು ಯಾವ ಸಿನಿಮಾ ಎಂದು ಅಂದಾಜು ಮಾಡುತ್ತಿದ್ದೆವು. ಆಗ ನಾವೆಲ್ಲ ಎರಡು, ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದೆವು’.
ಮಗಳಿಗೆ ತಾವು ಪಟ್ಟ ಹಲವು ಕಷ್ಟಗಳ ಕಥೆಗಳನ್ನು ಶ್ರೀದೇವಿ ಹೇಳಿದ್ದು ಅವಳು ಸುತರಾಂ ಸಿನಿಮಾ ಪ್ರವೇಶಿಸುವುದು ಬೇಡ ಎಂಬ ಉಮೇದಿನಿಂದ. ಈಗ ಮಗಳು ಅವೇ ಕಥೆಗಳಿಂದ ಸ್ಫೂರ್ತಿ ಪಡೆದು ತೆರೆಮೇಲೆ ತನ್ನನ್ನು ತಾನೇ ನೋಡಿಕೊಂಡು ಪುಳಕಗೊಳ್ಳುತ್ತಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.