ADVERTISEMENT

ಪಂಚ ಭಾಷೆಯಲ್ಲಿ ಧೂಮ್‌ ಎಗೈನ್‌

ನಾಯಕ ನಟನಾಗಿ ಶ್ರೀಶಾಂತ್‌ ಎಂಟ್ರಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:45 IST
Last Updated 30 ಜುಲೈ 2019, 19:45 IST
ಧೂಮ್‌ ಎಗೈನ್‌ ಚಿತ್ರದಲ್ಲಿ ಜನಿರಾ ಐದರ್‌
ಧೂಮ್‌ ಎಗೈನ್‌ ಚಿತ್ರದಲ್ಲಿ ಜನಿರಾ ಐದರ್‌   

ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿದ್ದ ಧೂಮ್‌ ಸರಣಿಯ ಚಿತ್ರಗಳು ಚಿತ್ರರಸಿಕರಿಗೆ ನೆನಪಿರಬಹುದು. ಈಗ ಅದೇ ಹೆಸರಿನಲ್ಲಿ, ಧೂಮ್ ಸರಣಿಯ ಚಿತ್ರಗಳ ನೆನಪು ಮರುಕಳಿಸುವಂತೆ ‘ಧೂಮ್‌ ಎಗೈನ್’ ಎನ್ನುವ ಚಿತ್ರ ಹಿಂದಿ, ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ಬರಲು ಸಜ್ಜಾಗುತ್ತಿದೆ. ಈ ಚಿತ್ರದ ವಿಶೇಷವೆನೆಂದರೆ ಪ್ರಧಾನ ಪಾತ್ರದಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್‌ ಮತ್ತು ಅಂತರರಾಷ್ಟ್ರೀಯ ರೂಪದರ್ಶಿ ಸ್ಪೇನ್‌ನ ಜನಿರಾ ಐದರ್‌ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಧೂಮ್‌ ಎಗೈನ್‌’ಗೆ ಹಿಂದಿಯಲ್ಲಿ ಮಾತ್ರ ‘ಸ್ಪೀಡ್ ಬಾಯ್ಸ್‌’ ಶೀರ್ಷಿಕೆ ಇಟ್ಟಿದ್ದು, ‘ಧೂಮ್ ಮಚಾಲೆ..’ ಟ್ಯಾಗ್‌ಲೈನ್‌ ಕೊಡಲಾಗಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಧೂಮ್‌ ಎಗೈನ್‌ ಎಂದೇ ಉಳಿಸಿಕೊಳ್ಳಲಾಗಿದೆ.

ಶ್ರೀಶಾಂತ್ ಅಲ್ಲದೆ, ನಾಲ್ವರು ನಾಯಕ ನಟರನ್ನು ಈ ಚಿತ್ರದಲ್ಲಿ ಪರಿಚಯಿಸಲಾಗುತ್ತಿದೆ. ಅದರಲ್ಲಿ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ‍ಪ್ರವೀಣ್‌ ಶೆಟ್ಟಿಯವರ ಪುತ್ರ ಪರ್ವೀರ್‌ ಶೆಟ್ಟಿ ಕೂಡ ಒಬ್ಬರು. ಇನ್ನು ಮಾಸ್ಟರ್‌ ಮೈಂಡ್‌ ವಾಸು, ಅರ್ಜುನ್‌ ಶೆಟ್ಟಿ ಮತ್ತು ರಾಕೇಶ್‌ ನಾಯಕ ನಟರಾಗಿದ್ದಾರೆ. ಟೀಸರ್‌ ಬಿಡುಗಡೆಗೂ ಮೊದಲುನಾಲ್ವರು ನಟರು ಸೂಪರ್‌ ಬೈಕ್‌ನಲ್ಲೇ ವೇದಿಕೆಗೆ ಬಂದು, ಗಮನ ಸೆಳೆದರು.

ADVERTISEMENT

‘ಶ್ರೀಶಾಂತ್‌ ಭಾರತ ತಂಡಕ್ಕೆ ಆಡಿರುವ ಅದ್ಭುತ ಕ್ರಿಕೆಟಿಗ. ಒಳ್ಳೆಯ ಡಾನ್ಸರ್‌ ಕೂಡ ಹೌದು. ಸೂಪರ್‌ ಬೈಕ್‌ ಸಾಹಸ ಮತ್ತು ಭರಪೂರ ಡಾನ್ಸ್‌ ಅನ್ನುಈ ಚಿತ್ರದಲ್ಲಿ ನಿರೀಕ್ಷಿಸಬಹುದಾಗಿದೆ. ಹೊಸ ನಟಿ ಜನಿರಾ ಕೂಡ ಪ್ರೇಕ್ಷಕರಿಗೆ ಕುತೂಹಲ ಮೂಡಿಸುವಂತೆ ಇದ್ದು, ಸಾಕಷ್ಟು ಮನರಂಜನೆ ನೀಡುವ ವಿಶ್ವಾಸವಿದೆ.ಹೊಸಬರ ತಂಡಕ್ಕೆ ಯಶಸ್ಸು ಸಿಗಲಿ’ ಎಂದು ನಟ ಪುನೀತ್‌ ರಾಜಕುಮಾರ್‌ ಹಾರೈಸಿದರು.

ಕ್ರಿಕೆಟ್‌ನಲ್ಲಿ ಸಚಿನ್‌, ಗಾವಾಸ್ಕರ್‌ ಹೇಗೆ ದಂತಕಥೆ ಎನಿಸಿದ್ದಾರೊ ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಪುನೀತ್‌ ರಾಜಕುಮಾರ್‌ ಲೆಜೆಂಡ್‌ ಆಗಿದ್ದಾರೆ ಎಂದುಶ್ರೀಶಾಂತ್‌ ಕೂಡ ಪುನೀತ್‌ ಬಗ್ಗೆ ಮೆಚ್ಚುಗೆಯ ಮಾತು ಆಡಿದರು.

‘ನಾನು ನಟಿಸಿರುವ ಕೆಂಪೇಗೌಡ–2 ಸಿನಿಮಾ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ’ ಎಂದ ಶ್ರೀಶಾಂತ್‌, ‘ಧೂಮ್‌ ಎಗೈನ್‌ನಲ್ಲಿ ನಾನು ಎಸಿಪಿ ಪಾತ್ರದಲ್ಲಿ ಅಭಿನಯಿಸಿದ್ದೇನೆ.ಸೂಪರ್‌ ಬೈಕ್‌ ಬೆನ್ನು ಬೀಳುವುದಷ್ಟೇ ಅಲ್ಲ, ಸುಂದರ ನಾಯಕಿಯ ಬೆನ್ನುಬೀಳುತ್ತೇನೆ’ ಎಂದು ನಗೆಚಟಾಕಿ ಹಾರಿಸಿದರು.

‘ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಸಂತಸ ನೀಡಿದೆ. ತುಂಬಾ ಖುಷಿಯಲ್ಲಿದ್ದೇನೆ’ ಎಂದು ಜನಿರಾ ಚುಟುಕಾಗಿ ಮಾತನಾಡಿದರು.

ಚಿತ್ರದ ನಿರ್ದೇಶಕ ರಾಜೇಶ್‌ ವರ್ಮ, ಹಿಂದಿ ಅವತರಣಿಕೆಯಲ್ಲಿ ಒಂದು ಹಂತದ ಚಿತ್ರೀಕರಣ ಮುಂಬೈ, ಬಲ್ಗೇರಿಯಾ, ಯು.ಕೆ.ಯಲ್ಲಿ ನಡೆಸಲಾಗಿದೆ. ಮುಂದಿನ ಚಿತ್ರೀಕರಣ ಆಗಸ್ಟ್‌ನಲ್ಲಿ ಶುರುವಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಇದು ಹೊಸ ಪ್ರಯತ್ನ. ಸೂಪರ್‌ ಬೈಕ್‌ಗಳ ರೇಸ್‌, ಚೇಸಿಂಗ್‌ ಮತ್ತು ಸಾಹಸ ದೃಶ್ಯಗಳು ರೋಚಕವಾಗಿರಲಿವೆ ಎಂದರು.

ಪರಮಾತ್ಮ ಕ್ರಿಯೇಷನ್ಸ್‌ನಡಿ ನಿರ್ಮಿಸುತ್ತಿರುವಈ ಚಿತ್ರಕ್ಕೆ ಗುರುಕಿರಣ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಜಿತ್‌ ಶೆಟ್ಟಿ ಮತ್ತು ರಾಜ್‌ ಸೆಟಿಯಾ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.