ADVERTISEMENT

‘ಬಯಲಾಟದ ಭೀಮಣ್ಣ’ನ ಧೃಗಾಂತರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 19:30 IST
Last Updated 28 ನವೆಂಬರ್ 2019, 19:30 IST
ನಟ ರಂಜಿತ್‌ಗೌಡ
ನಟ ರಂಜಿತ್‌ಗೌಡ   

ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಬಯಲಾಟದ ಭೀಮಣ್ಣ’ ಚಿತ್ರದಲ್ಲಿ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ನಟ ರಂಜಿತ್‌ಗೌಡ ಎರಡನೇ ಸಿನಿಮಾಕ್ಕೆ ಅಣಿಯಾಗಿದ್ದಾರೆ.

ರಂಜಿತ್‌ ನಟನೆ ಮತ್ತು ನಿರ್ಮಾಣದ ‘ಧೃಗಾಂತರ’ ಸಿನಿಮಾ ಸದ್ಯಲ್ಲೇ ಸೆಟ್ಟೇರಲಿದ್ದು, ಡಿಸೆಂಬರ್‌ 6ರಂದು ಚಿತ್ರದ ಮುಹೂರ್ತ ರಾಜರಾಜೇಶ್ವರಿ ನಗರದಲ್ಲಿ ವೆಂಕಟ್ರಮಣಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ. ಚಿತ್ರೀಕರಣ ಡಿ.18ರಿಂದ ಶುರುವಾಗಲಿದೆ.

ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ ಪದವಿ ಪಡೆದು ತಂದೆಯ ಮಾಲೀಕತ್ವದ ಫ್ಯಾಕ್ಟರಿಯ ಉಸ್ತುವಾರಿಯ ಜತೆಗೆ, ತನ್ನದೇ ಸ್ವಂತ ಸಾಫ್ಟ್‌ವೇರ್‌ ಕಂಪನಿ ನಡೆಸುತ್ತಿದ್ದ ರಂಜಿತ್‌, ನಟನೆಯಲ್ಲಿದ್ದ ಆಸಕ್ತಿಯಿಂದಾಗಿ ಚಿತ್ರರಂಗದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಹೊರಟಿದ್ದಾರೆ.

ADVERTISEMENT

ಅವರ ನಟನೆಯ ಮೊದಲ ಚಿತ್ರ‘ಬಯಲಾಟದ ಭೀಮಣ್ಣ’ ಇನ್ನಷ್ಟೇ ತೆರೆ ಕಾಣಬೇಕಿದ್ದು, ಈ ಚಿತ್ರ ಈಗಾಗಲೇ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಈ ಚಿತ್ರವನ್ನು ನಟ ರಂಜಿತ್‌ ಅವರತಾಯಿ ಧನಲಕ್ಷ್ಮಿ ಎಂ. ಮತ್ತು ತಂದೆ ಎಸ್‌.ಪಿ. ಕೃಷ್ಣಪ್ಪ ಅವರ ಸ್ನೇಹಿತ ನಂಜಪ್ಪ ಕಾಳೇಗೌಡರ ಪತ್ನಿ ಕೃಷ್ಣವೇಣಿ ಕಾಳೇಗೌಡ ನಂಜಪ್ಪ ನಿರ್ಮಿಸಿದ್ದಾರೆ.

ನಟನೆಯ ಜತೆಗೆ ಚಿತ್ರ ನಿರ್ಮಾಣದಲ್ಲೂ ಆಸಕ್ತಿ ಹೊಂದಿರುವ ರಂಜಿತ್‌ ‘ಧೃಗಾಂತರ’ ಸಿನಿಮಾಕ್ಕೆ ಬಂಡವಾಳ ಹೂಡಿ, ನಿರ್ಮಾಪಕನಾಗಿಯೂ ಗುರುತಿಸಿಕೊಳ್ಳಲು ಹೊರಟಿದ್ದಾರೆ.

ಯಾವುದೇ ವಿಚಾರವನ್ನು ಯಾವ ರೀತಿನೋಡುತ್ತೇವೆ ಮತ್ತು ಗ್ರಹಿಸುತ್ತೇವೆ ಎನ್ನುವುದನ್ನು ಚುಟುಕಾಗಿ ‘ಧೃಗಾಂತರ’ ಎನ್ನಬಹುದು. ಸೈಕೋ ಥ್ರಿಲ್ಲರ್‌, ಭಾವುಕ ಸನ್ನವೇಶಗಳಿರುವ ಇರುವ ಕಥೆ ಇದು. ಸ್ನೇಹಿತರೆಲ್ಲರೂ ಸೇರಿ ಈ ಚಿತ್ರ ಮಾಡುತ್ತಿದ್ದೇವೆ.ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು,ಕನ್ನಡದ ಇಬ್ಬರು ನಟಿಯರೊಂದಿಗೆ ಮಾತುಕತೆ ನಡೆಯುತ್ತಿದೆ.ಸಂಭಾವನೆ ವಿಷಯದಲ್ಲಿ ಇನ್ನೂ ಚರ್ಚೆ ಮುಂದುವರಿದಿದ್ದು, ಆಯ್ಕೆ ಅಂತಿಮವಾದ ನಂತರ ಅವರ ಹೆಸರುಗಳನ್ನು ಬಹಿರಂಗಪಡಿಸುತ್ತೇವೆ. ಬೆಂಗಳೂರು, ಮಡಿಕೇರಿ ಹಾಗೂ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ರಂಜಿತ್‌.

ಚಿತ್ರದ ಕಥೆಯನ್ನು ಸ್ನೇಹಿತ ಗೌತಮ್‌ ಹೆಣೆದಿದ್ದರೆ,ಅಂಕಿತ್‌ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.ಛಾಯಾಗ್ರಹಣ ಗೋವಿಂದ್‌, ಸಂಗೀತ ನವೀನ್‌ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.