ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೀಗ ‘ಮಾರ್ಟಿನ್’ ಅಂಗಳದಿಂದ ‘KD’ ಮೈದಾನಕ್ಕೆ ಜಿಗಿದಿದ್ದಾರೆ. ಮಾರ್ಟಿನ್ ಚಿತ್ರಕ್ಕಾಗಿ ಸದೃಢವಾಗಿ ಬೆಳೆಸಿದ್ದ ದೇಹವನ್ನ ಇದೀಗ ‘ಕಾಳಿದಾಸ’ನಿಗಾಗಿ ಕೊಂಚ ಇಳಿಸಿಕೊಂಡಿದ್ದಾರೆ. ಕೇವಲ 30 ದಿನಗಳ ಅಂತರದಲ್ಲಿ 18 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ ಧ್ರುವ ಸರ್ಜಾ.
‘ಏಕ್ ಲವ್ ಯಾ’ ಸಿನಿಮಾ ಬಳಿಕ ಧ್ರುವ ಸರ್ಜಾ ಜೊತೆಗೆ ಹೊಸ ಪ್ರೊಜೆಕ್ಟ್ ಒಂದನ್ನು 2022ರ ಏಪ್ರಿಲ್‌ನಲ್ಲೇ ನಿರ್ದೇಶಕ ‘ಜೋಗಿ’ ಪ್ರೇಮ್ ಕೈಗೆತ್ತಿಕೊಂಡಿದ್ದರು. ಅಕ್ಟೋಬರ್‌ನಲ್ಲಿ ಚಿತ್ರದ ಶೀರ್ಷಿಕೆ ಘೋಷಣೆಯಾಗಿತ್ತು. ಆ ಸಂದರ್ಭದಲ್ಲಿ ಎ.ಪಿ.ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ತೊಡಗಿಸಿಕೊಂಡಿದ್ದರು. ಈ ಚಿತ್ರಕ್ಕಾಗಿ ಹೆವಿ ವರ್ಕ್‌ಔಟ್ ಕೂಡಾ ಮಾಡಿದ್ದರು. ಅದ್ಧೂರಿಯಾಗಿ ನಿರ್ಮಾಣವಾಗಲಿರುವ ‘KD’(ಕಾಳಿದಾಸ) ಚಿತ್ರ ಇದೀಗ ಸೆಟ್ಟೇರಿದ್ದು, ಚಿತ್ರದಲ್ಲಿನ ಪಾತ್ರಕ್ಕಾಗಿ ಧ್ರುವ ತೂಕ ಇಳಿಸಿಕೊಂಡಿದ್ದಾರೆ.
ಕೆ.ಜಿ.ಎಫ್. ಎರಡನೇ ಭಾಗದಲ್ಲಿ ‘ಅಧೀರ’ನಾಗಿ ತೆರೆ ಮೇಲೆ ಮಿಂಚಿದ್ದ ಬಾಲಿವುಡ್‌ನ ನಟ ಸಂಜಯ್ ದತ್, ‘KD’ ಸಿನಿಮಾದಲ್ಲೂ ಬಣ್ಣಹಚ್ಚಲಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಾಣದ ನಾಲ್ಕನೇ ಚಿತ್ರ ಇದಾಗಿದೆ. ಇದು ಪ್ರೇಮ್ ಅವರ ನಿರ್ದೇಶನದ 9ನೇ ಚಿತ್ರ. ಅರ್ಜುನ್ ನಿರ್ದೇಶನದ ‘ಅದ್ದೂರಿ’ ಸಿನಿಮಾ ಮುಖಾಂತರ 2012ರಲ್ಲಿ ಚಂದನವನಕ್ಕೆ ಪ್ರವೇಶಿಸಿದ್ದ ಧ್ರುವ ಸರ್ಜಾ, ನಂತರ ‘ಬಹದ್ಧೂರ್’, ‘ಭರ್ಜರಿ’, ‘ಪೊಗರು’ ಚಿತ್ರದಲ್ಲಿ ಮಿಂಚಿದ್ದರು. ಪ್ರೇಮ್ ಆ್ಯಕ್ಷನ್ ಕಟ್ ಹೇಳಲಿರುವ ‘KD’ ಚಿತ್ರವು ಧ್ರುವ ಸರ್ಜಾ ಅವರ ಆರನೇ ಸಿನಿಮಾ ಆಗಿರಲಿದೆ.
‘KD’ ಸಿನಿಮಾವು 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದೆ. ಬೆಂಗಳೂರಿನಲ್ಲಿ ನಡೆದ ಈ ಕಥೆ ರೋಚಕವಾಗಿದ್ದು, ನೈಜವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಲಿದ್ದೇನೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ ಎಂದಿದ್ದರು ಪ್ರೇಮ್. ಈ ಚಿತ್ರದಲ್ಲಿ ಧ್ರುವ ರೆಟ್ರೋ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, ಚಿತ್ರವು ಮಾಸ್ ಆ್ಯಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ‘ವಿಕ್ರಾಂತ್ ರೋಣ’ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣವಿರಲಿದೆ. ಬಹುತೇಕ ಸೆಟ್‌ನಲ್ಲೇ ಚಿತ್ರದ ಚಿತ್ರೀಕರಣ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.