ADVERTISEMENT

ಪೊಗರು ಚಿತ್ರದ ವಿವಾದ | ಬೇಷರತ್‌ ಕ್ಷಮೆ ಕೇಳುತ್ತೇನೆ: ಧ್ರುವ ಸರ್ಜಾ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 14:03 IST
Last Updated 24 ಫೆಬ್ರುವರಿ 2021, 14:03 IST
ಧ್ರುವ ಸರ್ಜಾ
ಧ್ರುವ ಸರ್ಜಾ   

ಬೆಂಗಳೂರು: ಪೊಗರು ಚಿತ್ರದ ವಿವಾದವು ತಿಳಿಯಾದ ಬೆನ್ನಲ್ಲೇ ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಧ್ರುವ ಸರ್ಜಾ ಬೇಷರತ್‌ ಕ್ಷಮೆ ಕೋರಿದ್ದಾರೆ.

ಈ ಕುರಿತು ಟ್ವೀಟರ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ‘ನಮ್ಮ ಇಡೀ ಕುಟುಂಬ ಹನುಮಭಕ್ತರು...ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ಧತಿಯನ್ನು ಆಚರಿಸುತ್ತಾ ಗೌರವಿಸುತ್ತಾ ಬದುಕುತ್ತಿದೆ. ತಾತನವರ ಕಾಲದಿಂದಲೂ ಹಿಂದುತ್ವದ ಪ್ರತಿಪಾದಕರಾಗಿಯೇ ಬದುಕಿದ್ದೇವೆ. ಕಲೆಯೇ ಧರ್ಮ..ನಾವು ಎಲ್ಲ ಧರ್ಮಗಳನ್ನು ಗೌರವಿಸಿದ್ದೇವೆ. ಚಿತ್ರದ ಕಥೆ, ಪಾತ್ರಪೋಷಣೆಯಲ್ಲಿ ಸಮುದಾಯವೊಂದಕ್ಕೆ ನೋವಾಗಿದೆ ಎನ್ನುವಂತಹ ಮಾತು ನಿಜಕ್ಕೂ ನಮ್ಮ ತಂಡಕ್ಕೆ ಬೇಸರ ತಂದಿದೆ. ಈ ಕಾರಣಕ್ಕಾಗಿಯೇ ಬೇಷರತ್‌ ಕ್ಷಮೆ ಕೇಳುತ್ತೇನೆ. ನಿಮಗೆ ಬೇಸರವಾಗಿರೋ ದೃಶ್ಯಗಳನ್ನು ಕತ್ತರಿಸಿದ್ದೇವೆ. ಮತ್ತೆ ಸೆನ್ಸಾರ್‌ ಆದ ಮೇಲೆ ನಿಮ್ಮೆದುರು ಮಾತಾಡೋಣ ಎಂದು ನಾನೇ ನಿರ್ಧರಿಸಿದ್ದೆ. ಈಗ ಅದನ್ನು ಸರಿಪಡಿಸಲು ತಂತ್ರಜ್ಞರ ತಂಡ ಸಿದ್ಧವಾಗಿದೆ. ನನ್ನ ಮನವಿಯನ್ನು ಪುರಸ್ಕರಿಸಿ ಎಂದಿನಂತೆ ನಿಮ್ಮ ಆಶೀರ್ವಾದವಿರಲಿ. ಜೈ ಹನುಮಾನ್‌...’ ಎಂದು ಧ್ರುವ ಸರ್ಜಾ ಟ್ವೀಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಭಿಮಾನಿಗಳಿಂದ ಮುತ್ತಿಗೆ

ADVERTISEMENT

ಚಿತ್ರದಲ್ಲಿನ ವಿವಾದಿತ ದೃಶ್ಯ ಸಂಬಂಧಿಸಿ ನಿರ್ದೇಶಕರೇ ಕ್ಷಮೆ ಕೇಳಿದ್ದರೂ ಚಿತ್ರದ ಪುಟ್ಟ ತುಣುಕು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ದ್ರುವ ಸರ್ಜಾ ಅಭಿಮಾನಿಗಳು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿದರು. ‘ಸಿನಿಮಾ ಸಂಬಂಧಿಸಿದ ವಿವಾದಗಳೆಲ್ಲಾ ಮುಗಿದಿವೆ. ಆದರೆ ಯೂಟ್ಯೂಬರ್‌ ಚಿರುಭಟ್‌ ಎಂಬುವವರು ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.