ಮುಂಬೈ: ಡ್ರಗ್ಸ್ ಜಾಲ ಸಂಬಂಧ ತನ್ನ ವಿರುದ್ಧ ಕೇಳಿಬಂದಿರುವ ಆರೋಪಗಳನ್ನುನಿರಾಕರಿಸಿರುವ ಬಾಲಿವುಡ್ ನಟಿ ದಿಯಾ ಮಿರ್ಜಾ, 'ತನ್ನ ಜೀವನದಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿಲ್ಲ ಅಥವಾ ಸೇವಿಸಿಲ್ಲ' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಜಾಲದ ಜಾಡು ಹಿಡಿದು ಮಾದಕ ದ್ರವ್ಯ ನಿಯಂತ್ರಣ ತನಿಖಾ ಸಂಸ್ಥೆ (ಎನ್‌ಸಿಬಿ) ತನಿಖೆ ನಡೆಸುತ್ತಿದ್ದು, ಮೂಲಗಳ ಪ್ರಕಾರ, ದಿಯಾ ಅವರ ಹೆಸರು ಎನ್‌ಸಿಬಿ ಪಟ್ಟಿಯಲ್ಲಿದ್ದು, ಶೀಘ್ರದಲ್ಲೇ ವಿಚಾರಣೆಗೆ ಕರೆಸಿಕೊಳ್ಳಬಹುದು ಎನ್ನಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ದಿಯಾ, ಈ ಸುದ್ದಿಯು ಸುಳ್ಳು, ಆಧಾರ ರಹಿತ ಎಂದು ಬಲವಾಗಿ ನಿರಾಕರಿಸುತ್ತೇನೆ ಮತ್ತು ಇದು ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಅಂತಹ ಕ್ಷುಲ್ಲಕ ವರದಿಗಾರಿಕೆಯು ನನ್ನ ಖ್ಯಾತಿಗೆ ಧಕ್ಕೆ ತರುತ್ತದೆ ಮತ್ತು ಹಲವು ವರ್ಷಗಳ ಕಠಿಣ ಪರಿಶ್ರಮದೊಂದಿಗೆ ಶ್ರಮಿಸಿರುವ ನನ್ನ ವೃತ್ತಿ ಜೀವನಕ್ಕೆ ಅದು ಹಾನಿಯನ್ನುಂಟು ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ನನ್ನ ಜೀವನದಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ನಾನು ಎಂದಿಗೂ ಸಂಗ್ರಹಿಸಿಲ್ಲ ಅಥವಾ ಸೇವಿಸಿಲ್ಲ. ಕಾನೂನನ್ನು ಪಾಲಿಸುವ ಭಾರತದ ಪ್ರಜೆಯಾಗಿ ನನಗೆ ಲಭ್ಯವಿರುವ ಪೂರ್ಣ ಪ್ರಮಾಣದ ಕಾನೂನು ಹೋರಾಟಗಳನ್ನು ನಡೆಸಲು ನಾನು ತೀರ್ಮಾನಿಸಿದ್ದೇನೆ. ನನ್ನ ಪರವಾಗಿ ನಿಂತಿದ್ದಕ್ಕಾಗಿ ನನ್ನ ಬೆಂಬಲಿಗರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನಟನ ಮ್ಯಾನೇಜರ್ ಆಗಿದ್ದ ಜಯ ಸಾಹ ಅವರೊಂದಿಗಿನ ರಿಯಾ ಚಕ್ರವರ್ತಿಯ ವಾಟ್ಸಾಪ್ ಚಾಟ್‌ಗಳು ಬಹಿರಂಗಗೊಂಡ ನಂತರ ಎನ್‌ಸಿಬಿ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಜಾಲದ ತನಿಖೆ ಮಾಡಲು ಪ್ರಾರಂಭಿಸಿತು. ಚಾಟ್‌ಗಳಲ್ಲಿ ರಿಯಾ ಮತ್ತು ಜಯ ಸಾಹ ಡ್ರಗ್ಸ್ ಬಗ್ಗೆ ಮಾತನಾಡಿದ್ದನ್ನು ಕಂಡ ಜಾರಿ ನಿರ್ದೇಶನಾಲಯವು (ಇಡಿ) ಡ್ರಗ್ಸ್ ಜಾಲದ ದೃಷ್ಟಿಕೋನದಲ್ಲಿ ತನಿಖೆ ನಡೆಸುವಂತೆ ಎನ್‌ಸಿಬಿಗೆ ಪತ್ರ ಬರೆದಿತ್ತು.
ಈವರೆಗೂ ಎನ್‌ಸಿಬಿಯು ರಿಯಾ ಚಕ್ರವರ್ತಿ, ಆಕೆಯ ಸೋದರ ಶೋವಿಕ್, ಸುಶಾಂತ್ ಮನೆಯ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡ ಮತ್ತು ಮನೆಗೆಲಸದ ಸಹಾಯಕ ದೀಪೇಶ್ ಮಿರಾಂಡ ಅವರನ್ನೊಳಗೊಂಡಂತೆ 18 ಜನರನ್ನು ಬಂಧಿಸಿದೆ. ರಿಯಾ ಮತ್ತು ಶೋವಿಕ್ ಅವರನ್ನು ಅಕ್ಟೋಬರ್ 6ರವರೆಗೂ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.
ಈ ಮಧ್ಯೆ ಎನ್‌ಸಿಬಿ ತನಿಖೆಯಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಮತ್ತು ಫ್ಯಾಷನ್ ಡಿಸೈನರ್ ಸಿಮೋನೆ ಕಂಬಟ್ಟ ಸೇರಿ ಹಲವರ ಹೆಸರು ಕೇಳಿಬಂದಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.