ADVERTISEMENT

'ದಿಲ್‌ ತೊ ಪಾಗಲ್‌ ಹೈ'ಗೆ 25 ವರ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2022, 6:44 IST
Last Updated 30 ಅಕ್ಟೋಬರ್ 2022, 6:44 IST
   

ಬಾಲಿವುಡ್‌ ಸಿನಿಮಾ ಜಗತ್ತು ಉತ್ತುಂಗದಲ್ಲಿದ್ದ ಕಾಲವದು. ಖಾನ್‌ಗಳು ಬಾಲಿವುಡ್‌ ಆಳುತ್ತಿದ್ದ ದಿನಗಳು. ಶಾರುಕ್‌ ಖಾನ್, ಮಾಧುರಿ ದೀಕ್ಷಿತ್‌ ಮತ್ತು ಕರೀಷ್ಮಾಕಪೂರ್‌ ಈ ಮೂವರನ್ನು ಸುಮ್ಮನೆ ಕಣ್ಣೆದುರಿಗೆ ಕಲ್ಪಿಸಿಕೊಂಡ್ರೆ ನೆನಪಾಗುವ ಚಿತ್ರ ‘ದಿಲ್‌ ತೊ ಪಾಗಲ್‌ ಹೈ’. ಚಿತ್ರದ ಹಾಡುಗಳ ಈಗಲೂ ಕಿವಿಯಲ್ಲಿ ಗುಂಯ್‌ ಎನ್ನುತ್ತಿವೆ. ಇಂತಹ ಚಿತ್ರ ತೆರೆಗೆ ಬಂದು 25 ವರ್ಷ ಪೂರ್ಣಗೊಂಡಿದೆ. 1997ರ ಅ.30ರಂದು ತೆರೆಗೆ ಬಂದ ಸಿನಿಮಾ ಬಾಲಿವುಡ್‌ನಲ್ಲೊಂದು ಹೊಸ ಇತಿಹಾಸವನ್ನೇ ಬರೆದಿತ್ತು. ಯಶ್‌ರಾಜ್‌ ಫಿಲಂಸ್‌ ಬ್ಯಾನರ್‌ನಲ್ಲಿ ದಿವಂಗತ ಯಶ್‌ ಚೋಪ್ರಾ ನಿರ್ಮಿಸಿ, ನಿರ್ದೇಶಿಸಿದ್ದ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಧೂಳಿಪಟವೆಬ್ಬಿಸಿತ್ತು.

‘ದಿಲ್‌ ತೊ ಪಾಗಲ್‌ ಹೈ’, ‘ಅರೆರೆ, ಅರೆರೆ’‘ಕೋಯಿ ಲಡ್‌ಕಿ ಹೈ’ ಸೇರಿದಂತೆ ಚಿತ್ರದ ಹಾಡುಗಳು ಇಂದಿಗೂ ಚಿರಪರಿಚಿತ. ಶಾರುಕ್‌ ಖಾನ್‌ ಎಂಬ ಮೋಹಕ ನಟನನ್ನು ಇನ್ನೊಂದು ಎತ್ತರಕ್ಕೆ ಏರಿಸಿದ ಚಿತ್ರವಿದು. ಲವರ್‌ ಬಾಯ್‌ ಆಗಿ ಶಾರುಕ್‌ ಖಾನ್‌ ಅವರು ಇಷ್ಟವಾದಷ್ಟು ಬೇರೆ ಪಾತ್ರಗಳಲ್ಲಿ ಇಷ್ಟವಾಗಲಿಕ್ಕಿಲ್ಲ. ಅಷ್ಟು ಅದ್ಬುತವಾಗಿ ನಟಿಸುತ್ತಿದ್ದರು ಪ್ರೀತಿಯನ್ನು ಹೊಂದಿರುವ ಪಾತ್ರಗಳಲ್ಲಿ.

ತ್ರಿಕೋನ ಪ್ರೇಮ ಕಥೆಗೊಂದು ಮಾದರಿ ಎನ್ನುವಂತಹ ಚಿತ್ರವಿದು. ರಾಹುಲ್‌, ನಿಶಾ, ಅವರಿಬ್ಬರ ಡ್ಯಾನ್ಸ್‌ ಜಗತ್ತು. ಡ್ಯಾನ್ಸ್‌ನ ಕನಸು. ಅವರಿಬ್ಬರ ನಡುವೆ ಬರುವ ಪೂಜಾ ಕಥೆಯನ್ನು ಇನ್ನೊಂದು ದಿಕ್ಕಿಗೆ ತೆಗೆದುಕೊಂಡು ಹೋಗುತ್ತದೆ. ಪ್ರೀತಿ ಎಂಬುದು ವ್ಯಕ್ತಿಯನ್ನುಇಷ್ಟಪಡುವುದು ಮಾತ್ರವಲ್ಲ. ಅವರನ್ನು ಮರೆತುಬಿಡಲು ಬರಬೇಕು ಎಂಬ ಪಾಠವನ್ನು ಕಲಿಸುವ ಸಿನಿಮಾವಿದು.

ADVERTISEMENT

ವಾಟ್ಸಪ್‌, ಫೇಸ್‌ಬುಕ್‌, ನೂರೆಂಟು ಡೇಟಿಂಗ್‌ ಆ್ಯಪ್‌ಗಳಲ್ಲಿಂದು ಪ್ರೀತಿಯ ಪರಿಭಾಷೆ ಬದಲಾಗಿದೆ. ಸಂಬಂಧಗಳ ವ್ಯಾಖ್ಯಾನಕ್ಕೆ ಹೊಸ ರೂಪ ಸಿಕ್ಕಿದೆ. ಆದಾಗ್ಯೂ ಪ್ರೀತಿಯನ್ನು ಪ್ರೀತಿಸುವವರು ಈ ಸಿನಿಮಾವನ್ನು ಈಗೊಮ್ಮೆ ತಣ್ಣಗೆ ಕುಳಿತು ನೋಡಬೇಕು. ಈ ಸಿನಿಮಾ ಕಟ್ಟಿಕೊಡುವ ಪ್ರೀತಿಯ ಭಾವನೆ, ನಮ್ಮನ್ನು ಆವರಿಸಿಕೊಳ್ಳುವ ಮೌನವನ್ನು ವರ್ಣಿಸಲು ಸಾಧ್ಯವಿಲ್ಲ.

ಆಗಿನ ಕಾಲಕ್ಕೆ ₹60 ಕೋಟಿ ಗಳಿಕೆ ಮಾಡಿದ್ದ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ ಕೂಡ ನಟಿಸಿದ್ದರು. ಉತ್ತಮ್‌ ಸಿಂಗ್‌ ಸಂಗೀತ, ಮನ್‌ಮೋಹನ್‌ ಸಿಂಗ್‌ ಛಾಯಾಗ್ರಹಣ ಚಿತ್ರಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.