ತಿರುವನಂತಪುರಂ: ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ಚಲಿಸುತ್ತಿದ್ದ ಕಾರಿನಲ್ಲಿ ಅಪಹರಿಸಿ, ಹಲ್ಲೆ ನಡೆಸಿ ಇಂದಿಗೆ ಐದು ವರ್ಷಗಳಾಗಿವೆ. ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ನಟ ದಿಲೀಪ್ ವಿರುದ್ಧ ಹೊಸ ಪ್ರಕರಣ ದಾಖಲಾದ ಬಳಿಕ ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ದಿಲೀಪ್ ಸಹೋದರ ಅನೂಪ್ ಮತ್ತು ಸೋದರ ಮಾವ ಸೂರಜ್ ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ವಿಚಾರಣಾಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕೇರಳ ಪೊಲೀಸರ ಅಪರಾಧ ವಿಭಾಗವು ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಿದೆ.
ಇತ್ತೀಚೆಗೆ ಟಿವಿ ವಾಹಿನಿಯೊಂದು ಬಿಡುಗಡೆ ಮಾಡಿದ ದಿಲೀಪ್ ಅವರ ಆಡಿಯೋ ಕ್ಲಿಪ್ ಆಧರಿಸಿ ತನಿಖಾಧಿಕಾರಿ ನೀಡಿದ ದೂರಿನ ಮೇರೆಗೆ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಿಕೊಂಡಿದ್ದು, ಆಡಿಯೋದಲ್ಲಿ ನಟ ತನಿಖಾಧಿಕಾರಿಗಳ ಮೇಲೆ ಹಲ್ಲೆಗೆ ಸಂಚು ರೂಪಿಸಿದ್ದನ್ನು ಕೇಳಲಾಗಿತ್ತು.
ಅಲ್ಲದೆ ಇತ್ತೀಚೆಗಷ್ಟೇ ಮಾಧ್ಯಮಗಳ ಮೂಲಕ ನಿರ್ದೇಶಕ ಬಾಲಚಂದ್ರ ಕುಮಾರ್, ದಿಲೀಪ್ ಮತ್ತು ಅವರ ಸಿಬ್ಬಂದಿ, ತನಿಖಾ ಅಧಿಕಾರಿಗಳ ಜೀವಕ್ಕೆ ಅಪಾಯವನ್ನುಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು. ಬಳಿಕ ಕ್ರೈಂ ಬ್ರಾಂಚ್‌ಗೆ ಕೆಲವು ಸಮರ್ಥನೀಯ ಹೇಳಿಕೆಯನ್ನು ನೀಡಿದ್ದರು. ಇವರ ಸ್ಫೋಟಕ ಹೇಳಿಕೆ ನಂತರ, ದಿಲೀಪ್ ಮತ್ತು ಇತರ ಐವರು ವ್ಯಕ್ತಿಗಳ ವಿರುದ್ಧ ಪಿತೂರಿ ಮತ್ತು ಬೆದರಿಕೆಯ ಆರೋಪದ ಮೇಲೆ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧನದ ಸಾಧ್ಯತೆಯ ಹಿನ್ನೆಲೆಯಲ್ಲಿ ದಿಲೀಪ್, ಅವರ ಸಹೋದರ ಅನೂಪ್ ಮತ್ತು ಅವರ ಸೋದರ ಮಾವ ಸೂರಜ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ತನಿಖಾಧಿಕಾರಿಗೆ ತಾನು ಬೆದರಿಕೆ ಹಾಕಿಲ್ಲ. ಕಪೋಲಕಲ್ಪಿತ ಸಾಕ್ಷ್ಯವನ್ನು ಆಧರಿಸಿ ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಕೂಡ ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ದಿಲೀಪ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ನಟಿಯ ಅಪಹರಣ ಮತ್ತು ಹಲ್ಲೆ ಪ್ರಕರಣ ನಡೆದು ಇಂದಿಗೆ ಐದು ವರ್ಷವಾಗಿರುವ ಬೆನ್ನಲ್ಲೇ, ಇದೇ ಮೊದಲ ಬಾರಿಗೆ ಸಂತ್ರಸ್ತ ನಟಿಯು ತನ್ನ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಇತ್ತೀಚಿನ ಬೆಳವಣಿಗೆಗಳ ಆಧಾರದ ಮೇಲೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಕೂಡ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.