ಮುಂಬೈ: ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದ ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಅವರ ಅಂತ್ಯಕ್ರಿಯೆ ಇಂದು (ಜು.7) ಸಂಜೆ 4.30ರ ಸುಮಾರಿಗೆ ಮುಂಬೈ ಸಾಂತಾಕ್ರೂಜ್‌ನ ಜುಹು ಕಬರ್‌ಸ್ತಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದು, ಅವರ ಕೊನೆ ಗಳಿಗೆಯಲ್ಲಿ ಪತ್ನಿ ಸೈರಾ ಬಾನು ಅವರು ಜೊತೆಯಲ್ಲಿದ್ದರು ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಆಸ್ಪತ್ರೆ ಸುತ್ತಾ ಜಮಾಯಿಸಿದ್ದರು. ಬಳಿಕ ಪೊಲೀಸರ ಕಾವಲಿನಲ್ಲಿ ದಿಲೀಪ್ ಅವರ ಮೃತದೇಹವನ್ನು ಅವರ ಬಾಂದ್ರಾ ನಿವಾಸಕ್ಕೆ ತರಲಾಯಿತು.
ದಿಲೀಪ್ ಅವರ ಸಾವಿಗೆ ಬಾಲಿವುಡ್‌ನ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರು ಕಳೆದ ವಾರವಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ದಿಲೀಪ್ ಕುಮಾರ್ ಅವರ ಕುಟುಂಬದ ಆಪ್ತ ಫೈಸಲ್ ಫಾರೂಕಿ ಎಂಬುವವರು ದಿಲೀಪ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ಇಂದು ಸಂಜೆ 5ಗಂಟೆಗೆ ದಿಲೀಪ್ ಕುಮಾರ್ ಅವರ ಅಂತಿಮ ಸಂಸ್ಕಾರ ಮುಂಬೈ ಸಾಂತಾಕ್ರೂಜ್‌ನ ಜುಹು ಕಬರ್‌ಸ್ತಾನದಲ್ಲಿ ನೆರವೇರಲಿದೆ' ಎಂದು ಪ್ರಕಟಿಸಿದ್ದಾರೆ.
ದಿಲೀಪ್ ಕುಮಾರ್ ಅವರು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಬುಧವಾರ ಸಾವಿಗೀಡಾಗಿದ್ದು, ಸಾವಿನ ಕುರಿತು ದಿಲೀಪ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. 'ಭಾರವಾದ ಹೃದಯ ಮತ್ತು ದುಃಖದಿಂದ ಕೆಲವು ನಿಮಿಷಗಳ ಹಿಂದೆಯಷ್ಟೇ ನಮ್ಮ ಪ್ರೀತಿಯ ದಿಲೀಪ್ ಸಾಬ್ ಅವರು ನಿಧನರಾದರೆಂದು ನಾನು ಘೋಷಿಸುತ್ತೇನೆ. ದೇವರಿಂದಲೇ ಬಂದವರು ನಾವು ಹಾಗೂ ಅವರಲ್ಲಿಯೇ ಮರಳುವೆವು' ಎಂದು ದಿಲೀಪ್ ಕುಮಾರ್ ಅವರ ಕುಟುಂಬದ ಆಪ್ತ ಫೈಸಲ್ ಫಾರೂಕಿ ಪ್ರಕಟಿಸಿದ್ದರು.
ದಿಲೀಪ್ ನಟನೆಯ ಪ್ರಮುಖ ಚಿತ್ರಗಳು
ಜುಗ್ನು (1947), ಶಹೀದ್ (1948), ಮೇಲಾ (1948), ಅಂದಾಜ್ (1949), ಬಾಬುಲ್ (1950) ದೀದಾರ್ (1951), ದಾಗ್ (1952), ಫುಟ್‌ಪಾತ್ (1953), ಆನ್ (1953), ದೇವದಾಸ್ (1955), ನಯಾ ದೌರ್ (1957), ಮುಸಾಫಿರ್ (1957) ಯಹೂದಿ (1958), ಮಧುಮತಿ (1958),ಕೋಹಿನೂರ್ (1960) ಗಂಗಾ ಜಮುನಾ (1961), ರಾಮ್ ಔರ್ ಶ್ಯಾಮ್ (1967)
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.