ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಯಾರೊಂದಿಗೂ ಹಂಚಿಕೊಳ್ಳದ ಸತ್ಯವೊಂದನ್ನು ಜನರೆದುರು ಬಿಚ್ಚಿಟ್ಟಿದ್ದಾರೆ. ‘ಚಿತ್ರಮಂದಿರಗಳಲ್ಲಿ ಬ್ಲ್ಯಾಕ್ ಟಿಕೆಟ್ ಮಾರುತ್ತಿದ್ದೆ’ ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ನಟ ಡಾರ್ಲಿಂಗ್ ಕೃಷ್ಣ ಅವರ ಹೊಸ ಚಿತ್ರ ‘ದಿಲ್‌ಪಸಂದ್’ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ನಾನು ಇದೇ ಮೊದಲ ಬಾರಿಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದೇನೆ. ಎಲ್ಲೂ ಹೇಳದ ಸತ್ಯವೊಂದನ್ನು ಇಲ್ಲಿ ಹೇಳುತ್ತೇನೆ. ನಾನು ಗದಗ್‌ನಲ್ಲಿಮಹಾಲಕ್ಷ್ಮಿ, ಶಾಂತಿ ಹಾಗೂ ಕರ್ನಾಟಕ ಚಿತ್ರಮಂದಿರದಲ್ಲಿ ಬ್ಲ್ಯಾಕ್ ಟಿಕೆಟ್ ಮಾರುತ್ತಿದ್ದೆ’ ಎಂದಿದ್ದಾರೆ.
‘ನಾನು ಸಾಂಸ್ಕೃತಿಕ ನಂಟನ್ನು ಹೊಂದಿದ್ದೇನೆ. ನಮ್ಮಲ್ಲಿರುವ ಆಶೋತ್ತರಗಳನ್ನು ಹೊರಹಾಕುವ ಮಾಧ್ಯಮ ಬರವಣಿಗೆ. ಸಿನಿಮಾವೂ ಇದೆ ರೀತಿ. ಸಿನಿಮಾ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಡಾ.ರಾಜ್‌ಕುಮಾರ್ ಅವರ ‘ಮಯೂರ’ ಸಿನಿಮಾದಿಂದ ನಾನು ಪ್ರೇರಿತನಾಗಿದ್ದೆ. ‘ಲವ್‌ಮಾಕ್ಟೇಲ್’ ಸಿನಿಮಾವನ್ನು ಹೆಂಡತಿಯ ಒತ್ತಾಯಕ್ಕೆ ನೋಡಿದೆ. ಬಹುಶಃ ಅವರಿಬ್ಬರೂ ಮನಸ್ಸಿನಿಂದ ಮಾಡಿದ ಸಿನಿಮಾ ಅದು. ಹೀಗಾಗಿ ಅತ್ಯುತ್ತಮವಾಗಿ ನಟಿಸಿದ್ದಾರೆ’ ಎಂದು ಶ್ಲಾಘಿಸಿದರು.
‘ನಮ್ಮ ಚಂದನವನ ಯಾವುದೇ ಭಾಷೆಯ ಯಾವುದೇ ಚಿತ್ರಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸುತ್ತಿರುವುದು ಹೆಮ್ಮೆಯ ವಿಷಯ. ನಾನು ಅಪ್ಪಟ ಕನ್ನಡ ಪ್ರೇಮಿ. ಈ ಭಾಷೆ ಜಗದೆತ್ತರಕ್ಕೆ ಬೆಳೆಯಲಿ’ ಎಂದರು.
....
‘ಲವ್ ಮಾಡುತ್ತಿದ್ದೆ ಅದನ್ನೇ ಸಿನಿಮಾ ಮಾಡಿದೆ’
ಡಾರ್ಲಿಂಗ್ ಕೃಷ್ಣ ಮಾತನಾಡಿ, ‘ನನಗೆ ಪೊಲೀಸ್ ಇಲಾಖೆ ಮೇಲೆ ಬಹಳ ಪ್ರೀತಿ. ಏಕೆಂದರೆ ನನ್ನ ತಂದೆ ಇದೇ ಇಲಾಖೆಯಲ್ಲಿದ್ದರು. ನನಗೆ ಐಪಿಎಸ್ ಮಾಡು ಎಂದು ಒತ್ತಡ ಹಾಕುತ್ತಿದ್ದರು. ನನಗೆ ಓದಲು ಇಷ್ಟವಿಲ್ಲದ ಕಾರಣ ಸಿನಿಮಾಗೆ ಬಂದೆ. ಲೈಫ್‌ನಲ್ಲಿ ಲವ್ ಮಾಡಿಕೊಂಡು ಇದ್ದೆ. ಕೊನೆಗೆ ಅದನ್ನೇ ಸಿನಿಮಾ ಮಾಡಿದೆ. ಮಿಲನಾ ನನ್ನ ಜೀವನಕ್ಕೆ ಬಂದ ಮೇಲೆ ಆಗಿದ್ದ ತಿಳಿವಳಿಕೆಗಳನ್ನು ಸಿನಿಮಾ ಮಾಡಿದೆ. ‘ದಿಲ್‌ಪಸಂದ್’ ಇಡೀ ಕಥೆ ಕೇಳುವಾಗ ಮುಖದ ತುಂಬಾ ನಗುವಿತ್ತು. ಒಳ್ಳೆಯ ಸಿನಿಮಾ ಕೊಡುವ ಪ್ರಯತ್ನ ನಮ್ಮದು’ ಎಂದರು.
ಶಿವತೇಜಸ್ ನಿರ್ದೇಶನದ ಈ ಚಿತ್ರಕ್ಕೆ ನಿಶ್ವಿಕ ನಾಯ್ಡು ಹಾಗೂ ಮೇಘ ಶೆಟ್ಟಿ ನಾಯಕಿಯರು. ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ ಮುಂತಾದ ಕಲಾವಿದರಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯರ ಸಂಗೀತ ನಿರ್ದೇಶನವಿದ್ದು, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.