ಕೊರೊನಾ ಸೋಂಕಿನ ಪರಿಣಾಮ ಇಡೀ ವಿಶ್ವದ ಚಿತ್ರೋದ್ಯಮದ ಚಟುವಟಿಕೆಯೇ ಅಕ್ಷರಶಃ ನೆಲಕಚ್ಚಿದೆ. ಬಾಲಿವುಡ್ ಕೂಡ ಇದರಿಂದ ಹೊರತಲ್ಲ. ದುಡಿಯುವ ಲಕ್ಷಾಂತರ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಈ ನಡುವೆಯೇ ಬಿಟೌನ್‌ನಲ್ಲಿ ಬೇರುಬಿಟ್ಟಿರುವ ಸ್ವಜನಪಕ್ಷಪಾತದ ವಿರುದ್ಧ ಹಲವು ಕಲಾವಿದರು ಧ್ವನಿ ಎತ್ತಿ ಅಸಮಾಧಾನವನ್ನು ಹೊರಹಾಕಿದ್ದಾರೆ.
ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಇನ್ನು ಹಸಿರಾಗಿಯೇ ಇದೆ. ಮತ್ತೊಂದೆಡೆ ಬಾಲಿವುಡ್‌ನ ಕರಾಳಮುಖ ಕಂಡು ಸಿನಿಪ್ರಿಯರು ಬೇಸರಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ‘ದಬಾಂಗ್’ ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್ ಅವರು ನಟ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರವಾದ ಆರೋಪಗಳ ಸುರಿಮಳೆ ಸುರಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈಗ ಅನುಭವ್ ಸಿನ್ಹ ಅವರಿಗೆ ಬಾಲಿವುಡ್ ಮೇಲೆ ಬೇಸರ ಮೂಡಿದೆಯಂತೆ. ‘ಮುಲ್ಕ್’, ‘ಆರ್ಟಿಕಲ್ 15’ ಮತ್ತು ‘ಥಪ್ಪಡ್’ನಂತಹ ಸೂಕ್ಷ್ಮ ಸಂವೇದನೆಯ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಅವರು. ‘ಎನಫ್... ಬಾಲಿವುಡ್‌ಗೆ ರಾಜೀನಾಮೆ ಕೊಡುವುದಕ್ಕೆ ನಾನು ನಿರ್ಧರಿಸಿದ್ದೇನೆ’ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಅಷ್ಟಕ್ಕೆ ಅವರು ಸುಮ್ಮನಾಗಿಲ್ಲ. ತಮ್ಮದೇ ಟ್ವಿಟರ್ ಹ್ಯಾಂಡಲ್‌ನಲ್ಲಿ ತಮ್ಮ ಹೆಸರಿನ ಜತೆಗೆ ‘ನಾಟ್ ಬಾಲಿವುಡ್’ ಎಂದೂ ಬರೆದುಕೊಂಡಿದ್ದಾರೆ. ಅವರು ದಿಢೀರ್ ಆಗಿ ಬಾಲಿವುಡ್‌ಗೆ ಗುಡ್‌ಬೈ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಹಿಂದಿ ಚಿತ್ರರಂಗವೆಂದರೆ ಬಾಲಿವುಡ್ ಎಂದು ಕರೆಯುವುದು ಸರ್ವೇ ಸಾಮಾನ್ಯ. ಹೀಗೆ ಕರೆಯುವುದಕ್ಕೆ ಬಹಳಷ್ಟು ಜನರಿಗೆ ಬೇಸರವೂ ಇದೆ. ಅನುಭವ್ ಸಿನ್ಹ ಅವರಿಗೂ ಈ ಬಗ್ಗೆ ಆಕ್ಷೇಪವಿದೆಯಂತೆ. ಹಾಗಾಗಿಯೇ, ಅವರು ಬಿಟೌನ್ ವಿರುದ್ಧ ಧಿಕ್ಕಾರದ ಕಹಳೆ ಮೊಳಗಿದ್ದಾರೆ’ ಎಂದು ವಿಶ್ಲೇಷಿಸಲಾಗುತ್ತಿದೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿರುವ ಅನುಭವ್ ಸಿನ್ಹ ಪ್ರಯೋಗಮುಖಿ. ತೊಂಬತ್ತರ ದಶಕದಲ್ಲಿಯೇ ಸಿನಿಮಾ ನಿರ್ದೇಶನದ ಕನಸು ಹೊತ್ತುಕೊಂಡು ಮುಂಬೈಗೆ ಬಂದರು. ಸ್ಪೈ ಥ್ರಿಲ್ಲರ್, ಥ್ರಿಲ್ಲರ್, ಸೈನ್ಸ್–ಫಿಕ್ಷನ್ ಥ್ರಿಲ್ಲರ್ ಸಿನಿಮಾಗಳ ಮೂಲಕ ಜನರಿಗೆ ರಂಜನೆ ಉಣಬಡಿಸಿದವರು.
ಬಿಟೌನ್‌ನ ಬಹುತೇಕ ನಿರ್ದೇಶಕರು ಮನರಂಜನೆಯ ಉಮೇದಿಗೆ ಗಂಟುಬಿದ್ದವರೇ. ಆದರೆ, ಅನುಭವ್ ಸಿನ್ಹ ಇದಕ್ಕೆ ಅಪವಾದ. ಸಮಕಾಲೀನ ಸಮಸ್ಯೆಯನ್ನು ಅದರ ಹಲವು ಮಗ್ಗಲುಗಳಿಂದ ನೋಡುವ ಗುಣ ಅವರದು. ಅದನ್ನು ಅಷ್ಟೇ ಜಾಣ್ಮೆಯಿಂದ ತೆರೆಯ ಮೇಲೆ ನಿರೂಪಿಸುವುದರಲ್ಲಿ ಅವರು ಸಿದ್ಧಹಸ್ತರು. ಈಗ ದಿಢೀರ್ ಎಂದು ಬಾಲಿವುಡ್‌ಗೆ ಗುಡ್‌ಬೈ ಹೇಳಿರುವುದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.