ADVERTISEMENT

‘ಬಿಗಿಲ್‘ ಖ್ಯಾತಿಯ ಪ್ರತಿಭಾವಂತ ಯುವ ನಿರ್ದೇಶಕ ಅಟ್ಲಿಗೆ 35 ನೇ ಜನ್ಮದಿನದ ಸಂಭ್ರಮ

ಇಂದು ರಿವೀಲ್ ಮಾಡ್ತಾರಾ ಹೊಸ ಸಿನಿಮಾ ಟೈಟಲ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2021, 14:32 IST
Last Updated 22 ಸೆಪ್ಟೆಂಬರ್ 2021, 14:32 IST
ನಟ ವಿಜಯ್ ಜೊತೆ ನಿರ್ದೇಶಕ ಅಟ್ಲಿ
ನಟ ವಿಜಯ್ ಜೊತೆ ನಿರ್ದೇಶಕ ಅಟ್ಲಿ   

ಬೆಂಗಳೂರು: ನಿರ್ದೇಶಿಸಿದ್ದು ನಾಲ್ಕೇ ನಾಲ್ಕು ಸಿನಿಮಾಗಳಾದರೂ ಕೇವಲ 35 ನೇ ವಯಸ್ಸಿನಲ್ಲೇ ಭಾರತೀಯ ಚಿತ್ರರಂಗದ ಪ್ರಸ್ತುತ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ತಮಿಳಿನ ಪ್ರತಿಭಾವಂತ ಯುವ ನಿರ್ದೇಶಕ ಅಟ್ಲಿ ಅವರಿಗೆ (ಆಟ್ಲಿ ಕುಮಾರ್) ಇಂದು ಮೂವತ್ತೈದನೇ ಜನ್ಮದಿನದ ಸಂಭ್ರಮ.

ಖ್ಯಾತ ನಿರ್ದೇಶಕ ಎಸ್ ಶಂಕರ್ ಗರಡಿಯಲ್ಲಿ ಪಳಗಿರುವ ಅಟ್ಲಿ ಜನ್ಮದಿನಕ್ಕೆ ಸಿನಿರಂಗದ ಗಣ್ಯರು, ನಟ–ನಟಿಯರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಪ್ರಸ್ತುತ ಮುಂಬೈನಲ್ಲಿರುವ ಅಟ್ಲಿ ಜನ್ಮದಿನವನ್ನು ಪತ್ನಿ ಕೃಷ್ಣ ಪ್ರಿಯಾ ಹಾಗೂ ಸ್ನೇಹಿತರೊಡನೆ ಸರಳವಾಗಿ ಆಚರಿಸಿಕೊಂಡಿದ್ದಾರೆ.

ADVERTISEMENT

1986 ರಲ್ಲಿ ತಮಿಳುನಾಡಿನ ಮದುರೈನಲ್ಲಿ ಜನಿಸಿರುವ ಅಟ್ಲಿ, ಆರಂಭದಲ್ಲಿ ಕಿರುಚಿತ್ರಗಳನ್ನು ಮಾಡುತ್ತಿದ್ದರು. ತಮ್ಮ ಪ್ರತಿಭೆಯಿಂದ ಶಂಕರ್ ನಿರ್ದೇಶನದ ಬ್ಲಾಕ್‌ಬಸ್ಟರ್ ಎಂದಿರನ್ ಹಾಗೂ ನನ್‌ಬನ್ ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದರು. ಮುಂದೆ ಅವರು ನಿರ್ದೇಶಿಸಿದ ನಾಲ್ಕೂ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡವು.

2013 ರಲ್ಲಿ ತೆರೆಗೆ ಬಂದ ಆರ್ಯ, ನಯನತಾರಾ ಅಭಿನಯದ ಸೂಪರ್ ಹಿಟ್ ‘ರಾಜಾ–ರಾಣಿ‘ ಅಟ್ಲಿ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು. 2016 ರಲ್ಲಿ ತೆರೆಗೆ ಬಂದ ವಿಜಯ್–ಆಮಿ ಜಾಕ್ಸನ್ ಅಭಿನಯದ ‘ತೇರಿ‘ ಅಟ್ಲಿ ಅವರಿಗೆ ಒಬ್ಬ ಮಾಸ್ ನಿರ್ದೇಶಕ ಎಂಬ ಖ್ಯಾತಿ ತಂದು ಕೊಟ್ಟಿತು. ನಂತರ 2017 ರಲ್ಲಿ ಬಂದ ವಿಜಯ್ ಅಭಿನಯದ ‘ಮರ್ಸಲ್‘ ಹಾಗೂ 2019 ರಲ್ಲಿ ಬಂದ ‘ಬಿಗಿಲ್‘ ಸಿನಿಮಾಗಳಂತೂ ಅಟ್ಲಿ ಅವರನ್ನು ಒಬ್ಬ ಸ್ಟಾರ್ ನಿರ್ದೇಶಕರನ್ನಾಗಿ ಮಾಡಿದವು. ಅಟ್ಲಿ ತಮ್ಮ ಸಿನಿಮಾಗಳ ಮೂಲಕ ಕಥೆ ಹೇಳುವ ರೀತಿ ಸಿನಿಪ್ರಿಯರಿಗೆ ಬೆರಗು ಹುಟ್ಟಿಸುವಂತಾಯಿತು.

ಅಟ್ಲಿ ಎರಡು ಸಿನಿಮಾಗಳನ್ನು ಸಹ ನಿರ್ಮಾಣ ಕೂಡ ಮಾಡಿದ್ದಾರೆ. ಅವರು ನಿರ್ಮಿಸಿದ ತಮಿಳಿನ ಸಾಂಗಿಲಿ ಬುಂಗಿಲಿ ಖಾಂಡವ್ ತೋರೆ ಹಾಗೂ ಅಂಧಗಾರಂ ಸಿನಿಮಾಗಳು ಕೂಡ ಯಶಸ್ವಿಯಾಗಿವೆ.

ಅಟ್ಲಿ ಇದೀಗ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದು, ಶಾರೂಖ್ ಖಾನ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದರಲ್ಲಿ ನಯನತಾರಾ ಪ್ರಿಯಾಮಣಿ ಬಣ್ಣ ಹಚ್ಚಿದ್ದಾರೆ ಎನ್ನಲಾಗಿದ್ದು ಆ ಸಿನಿಮಾದ ಟೈಟಲ್ ಹಾಗೂ ಇತರೆ ವಿವರಗಳನ್ನು ಆಟ್ಲಿ ಇದುವರೆಗೆ ಬಿಟ್ಟು ಕೊಟ್ಟಿಲ್ಲ. ದೊಡ್ಡ ಬಜೆಟ್‌ನ ಸಿನಿಮಾ ಇದಾಗಿದ್ದು ತೀವ್ರ ನಿರೀಕ್ಷೆ ಹುಟ್ಟಿಹಾಕಿದೆ. ಅವರ ಜನ್ಮದಿನದ ಪ್ರಯುಕ್ತ ಈ ಸಿನಿಮಾದ ಟೈಟಲ್ ರಿವೀಲ್ ಆಗಬಹುದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.