ಬೆಂಗಳೂರು: ಕನ್ನಡ ಚಲನಚಿತ್ರ ‘ಕಾಂತಾರ’ ಯಶಸ್ಸು ಸಾಧಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ನಟ ‘ಆ ದಿನಗಳು’ ಖ್ಯಾತಿಯ ಚೇತನ್, ನಟ ರಿಷಬ್ ಶೆಟ್ಟಿ ಅವರ ಹೇಳಿಕೆಯೊಂದನ್ನು ಅಲ್ಲಗಳೆದಿದ್ದಾರೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಅವರು, ‘ನಮ್ಮ ಕನ್ನಡ ಚಿತ್ರ ‘ಕಾಂತಾರ’ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಆದರೆ, ಭೂತಕೋಲ ಹಿಂದೂ ಸಂಸ್ಕೃತಿ ಎಂದು ಹೇಳಿರುವ ರಿಷಬ್ ಶೆಟ್ಟಿ ಅವರ ಮಾತು ಸುಳ್ಳು. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.
ಕರಾವಳಿ ಭಾಗದ ದೈವಗಳ ಆರಾಧನೆ, ತುಳು ಸಂಸ್ಕೃತಿಯನ್ನು ಕಾಂತಾರ ಸಿನಿಮಾದಲ್ಲಿ ಪ್ರಧಾನವಾಗಿ ಬಿಂಬಿಸಲಾಗಿದೆ. ಪ್ರಕೃತಿಗೂ, ಮನುಷ್ಯನಿಗೂ ಇರುವ ಸಂಬಂಧ, ಭೂತಾರಾಧನೆ, ಈ ಆಚರಣೆ ನ್ಯಾಯದ ವೇದಿಕೆಯಾಗಿ ಹೇಗೆ ಮಹತ್ವ ಪಡೆದಿದೆ ಎನ್ನುವುದನ್ನು ಸಿನಿಮಾದಲ್ಲಿ ವಿವರಿಸಲಾಗಿದೆ.
ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿರುವ ‘ಕಾಂತಾರ’ವನ್ನು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.