ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಕ್ಷಣದಿಂದ ಆರಂಭವಾದ ಸ್ವಜನಪಕ್ಷಪಾತದ ಮಾತು ಬಾಲಿವುಡ್ ಅಂಗಳದಲ್ಲಿ ಮತ್ತೆ ಮರುಜೀವ ಪಡೆದುಕೊಂಡಿದೆ. ನಟಿ ಕಂಗನಾ ರನೋಟ್ ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿಕೆ ನೀಡಿದ್ದಾರೆ.
ಸುಶಾಂತ್ ಸಾವಿಗೂ ಬಾಲಿವುಡ್‌ನಲ್ಲಿನ ಸ್ವಜನಪಕ್ಷಪಾತವೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಅವರ ಆತ್ಮಹತ್ಯೆಗೆ ಇಲ್ಲಿಯವರೆಗೂ ಯಾವುದೇ ಅಧೀಕೃತ ಕಾರಣ ತಿಳಿದು ಬಂದಿಲ್ಲ. ಆದರೆ ಬಾಲಿವುಡ್‌ನ ಕೆಲ ಸೆಲೆಬ್ರಿಟಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಇವರ ಸಾವಿಗೆ ಸ್ವಜನಪಕ್ಷಪಾತವೇ ಕಾರಣ ಎನ್ನುತ್ತಿವೆ.
ಇತ್ತೀಚೆಗೆ ನಟಿ ಕಂಗನಾ ಸ್ವಜನಪಕ್ಷಪಾತ ಹಾಗೂ ಮೂವಿ ಮಾಫಿಯಾದ ಕುರಿತು ತಮ್ಮ ಅನುಭವನ್ನು ಇಂಚಿಚಾಗಿ ಬಿಚ್ಚಿಟ್ಟಿದ್ದರು. ಅಲ್ಲದೇ ಕರಣ್ ಜೋಹರ್ ಅನ್ನು ಸ್ವಜನಪಕ್ಷಪಾತದ ಮುಖ್ಯಸ್ಥ ಎಂದು ಕರೆದಿದ್ದರು. ಅಲ್ಲದೇ ಸುಶಾಂತ್ ಸಾವಿಗೂ ಕರಣ್ ನೇರ ಸಂಬಂಧವಿದೆ ಎಂದೂ ಹೇಳಿದ್ದರು.
ಇದೇ ಸಂದರ್ಶನದಲ್ಲಿ ತಾಪ್ಸಿ ಪನ್ನು ಹಾಗೂ ಸ್ವರ ಭಾಸ್ಕರ್ ಅವರನ್ನು ದ್ವಿತೀಯ ದರ್ಜೆ ನಟರು ಹಾಗೂ ಹೊರಗಿನಿಂದ ಬಂದವರು ಎಂದು ಉಲ್ಲೇಖಿಸಿದ್ದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಉತ್ತರ ನೀಡಿರುವ ತಾಪ್ಸಿ ‘ಹೌದು ಮೊದಲು ಚಿತ್ರರಂಗದಲ್ಲಿ ಒಡೆದು ಆಳುವ ನೀತಿ ಇತ್ತು. ಕೆಲವೊಂದು ನಿರ್ದಿಷ್ಟತೆಯೊಂದಿಗೆ ಬದುಕಿದ ಜನರ ನಡುವೆ ವ್ಯತ್ಯಾಸಗಳಿರುತ್ತವೆ. ನಾವು ಹೊರಗಿನವರು ಒಬ್ಬರಿಗೊಬ್ಬರು ಹೊಡೆದಾಡುತ್ತಿಲ್ಲ. ಬದಲಾಗಿ ನಾವು ಹೋರಾಟ ನಡೆಸುತ್ತಿರುವುದು ಒಂದು ಉತ್ತಮ ವ್ಯವಸ್ಥೆಗಾಗಿಯೇ ಹೊರತು ಸಹ ಅಸ್ಥಿತ್ವ ಅಥವಾ ಹೆಸರಿಗಾಗಿ ಅಲ್ಲ’ ಎಂದಿದ್ದಾರೆ.
ಕಂಗನಾ ಸಂದರ್ಶನದಲ್ಲಿ ನೀಡಿದ ದಿಟ್ಟ ಉತ್ತರಗಳಿಗೆ ಶ್ಲಾಘನೆ ಮಾಡಿರುವ ಸಿಮಿ ಗ್ರೆವಾಲ್ ‘ಕಂಗನಾಳ ಧೈರ್ಯವನ್ನು ನಾನು ಮೆಚ್ಚಿದ್ದೇನೆ. ಆಕೆ ನನಗಿಂತಲೂ ಧೈರ್ಯವಂತಳು. ನನ್ನ ವೃತ್ತಿಜೀವನವನ್ನು ಹಾಳು ಮಾಡಲು ಪ್ರಭಾವಿ ವ್ಯಕ್ತಿಯೊಬ್ಬರು ಪ್ರಯತ್ನಿಸಿದ್ದರು. ಆಗ ನಾನು ಮೌನವಾಗಿದ್ದೆ. ಯಾಕೆಂದರೆ ನನ್ನಲ್ಲಿ ಧೈರ್ಯ ಇರಲಿಲ್ಲ. ಕಂಗನಾ ಸಂದರ್ಶನ ನೋಡಿದ ಮೇಲೆ ನಿಮಗೆಲ್ಲಾ ಯಾವ ರೀತಿಯ ಭಾವನೆ ಮೂಡಿದೆ ನನಗೆ ಅರಿವಿಲ್ಲ. ಆದರೆ ನಾನಂತೂ ಕೊಂಚ ಖಿನ್ನತೆಗೆ ಒಳಗಾಗಿದ್ದೇನೆ. ಸುಶಾಂತ್ ಸಿಂಗ್ ಈ ಸಿನಿರಂಗದಲ್ಲಿ ಸಹಿಸಿಕೊಂಡ ವಿಷಯಗಳು ಹಾಗೂ ಹೊರಗಿನಿಂದ ಬಂದವರು ಬಾಲಿವುಡ್‌ನಲ್ಲಿ ಪಡುವ ಕಷ್ಟಗಳನ್ನು ನೆನೆದು ಬೇಸರಗೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
‘ನೀವು ದೇವರು ಹಾಗೂ ಸೃಜನಶೀಲತೆಯೊಂದಿಗೆ ಪ್ರಯಾಣಿಸಲು ಬಯಸಿದರೆ ಪ್ರತಿಯೊಂದು ಹೆಜ್ಜೆಯನ್ನು ಭಕ್ತಿಯಿಂದ ಇರಿಸಬೇಕು. ದೇವರದಯೆಯಿಂದ ಒಂದಲ್ಲ ಒಂದು ದಿನ ನಾನು ಪಾನಿ ಸಿನಿಮಾ ಮಾಡುತ್ತೇನೆ. ಈ ಸಿನಿಮಾವನ್ನು ನಾನು ಸುಶಾಂತ್‌ಗೆ ಅರ್ಪಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ ನಿರ್ದೇಶಕ ಶೇಖರ್ ಕಪೂರ್. ಪಾನಿ ಸಿನಿಮಾದಲ್ಲಿ ಸುಶಾಂತ್ ಸಿಂಗ್ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ.
ಕಂಗನಾ ಪರವಾಗಿ ಮಾತನಾಡಿರುವ ನಟಿ ಪಾಯಲ್ ಘೋಷ್ ’ಕೊನೆಗೆ ಸ್ವರ್ಗಸ್ಥರಾಗಿರುವ ಸುಶಾಂತ್ ಸಿಂಗ್ ವಿಷಯದೊಂದಿಗೆ ಸ್ವಜನಪಕ್ಷಪಾತದ ವಿಷಯ ಹೊರಬಂದಿದೆ. ಕಂಗನಾ ತಂಡ ಈ ವಿಷಯವನ್ನು ಹೊರ ಹಾಕಿದೆ. ಎಲ್ಲಾ ಸಿನಿಮಾ ಹಿನ್ನೆಲೆ ಇಲ್ಲದೇ ಬಂದವರ ಪರವಾಗಿ ಅವರು ಮಾತನ್ನಾಡಿದ್ದಾರೆ. ಅವರು ನಿಜವಾಗಿಯೂ ಬಾಲಿವುಡ್‌ನ ದನಿಯಾಗಿದ್ದಾರೆ’ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ‘ಇಂತಹ ಸಂದರ್ಭಗಳಲ್ಲಿ ನಾನು ನನ್ನ ಹೆಸರನ್ನು ರಕ್ಷಿಸಿಕೊಳ್ಳಲು ಬಯಸುತ್ತೇನೆ. ನನಗೆ ಶಾಂತಿ ಮುಖ್ಯ, ಆ ಕಾರಣಕ್ಕೆ ನಾನು ನನ್ನ ಶಾಂತಿಯನ್ನು ಕಾಪಾಡಿಕೊಳ್ಳುತ್ತೇನೆ. ಯಾರೂ ಏನಾದರೂ ಯೋಚಿಸಲಿ. ಅವರವರ ಭಾವಕ್ಕೆ ಯೋಚನೆಗಳನ್ನು ಬಿಟ್ಟು ಬಿಡುತ್ತೇನೆ’ ಎಂದು ನಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಈ ನಟಿ ಟ್ವೀಟ್ ಮಾಡಿರುವ ನಟಿ ಸ್ವರ ಭಾಸ್ಕರ್ ‘ಇದು ಆತ್ಮಾವಲೋಕನ ಮಾಡಿಕೊಳ್ಳುವ ಕ್ಷಣ. ನಮ್ಮ ನಮ್ಮ ವಾದಗಳ ನಡುವೆ ನಾವು ಅನೇಕ ಬಾರಿ ಸುಶಾಂತ್ ಹೆಸರನ್ನು ಎಳೆದು ತರುತ್ತಿದ್ದೇವೆ. ಆ ಕಾರಣಕ್ಕೆ ಅವರ ಕುಟುಂಬದ ಕ್ಷಮೆಯಾಚಿಸಬೇಕು. ಇದು ನಮ್ಮ ವಿಷಯವಲ್ಲ. ಸುಶಾಂತ್ ಈ ಜಗತ್ತಿನಿಂದ ಬಿಡುಗಡೆ ಪಡೆದಿದ್ದಾರೆ. ಅವರು ಕಳೆದುಕೊಂಡ ಉಜ್ವಲ ಭವಿಷ್ಯವನ್ನು ಸ್ಮರಿಸೋಣ’ ಎಂದಿದ್ದಾರೆ.
ಈ ಬಗ್ಗೆ ನಟಿ ಇಶಾ ಗುಪ್ತಾ ಟ್ವೀಟ್ ಮಾಡಿದ್ದು ‘ನಮಗೆ ಇತಿಹಾಸ ಏನನ್ನಾದರೂ ಕಲಿಸಿದೆ ಎಂದರೆ ಅದರಲ್ಲಿ ಸತ್ಯ ಇದೆ ಎಂದು ಅರ್ಥ. ಯಾವಾಗ ಒಬ್ಬ ಮಹಿಳೆ ಧ್ವನಿ ಏರಿಸಿ ಮಾತನಾಡುತ್ತಾಳೋ ಆ ಅವಳನ್ನು ಹುಚ್ಚಿ, ದುರಂಹಕಾರಿ ಎಂದೆಲ್ಲಾ ಕರೆಯುತ್ತಾರೆ. ಆದರೆ ಎಲ್ಲರನ್ನೂ ಎದುರಿಸಿ ನಿಲ್ಲುವುದು ಸುಲಭವ ಮಾತಲ್ಲ ಎಂದಿದ್ದಾರೆ’.
ಇತ್ತೀಚೆಗೆ ನಿರ್ದೇಶಕ ಆರ್. ಬಾಲ್ಕಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ’ಇಲ್ಲಿ ಪ್ರತಿಭೆಯಷ್ಟೇ ಮುಖ್ಯ. ಅಲಿಯಾ ಹಾಗೂ ರಣಬೀರ್ ಕಪೂರ್ ಕೂಡ ಒಳ್ಳೆಯ ನಟರು. ಅವರಿಗಿಂತ ಒಳ್ಳೆಯ ನಟರನ್ನು ತೋರಿಸಿ, ಈ ಬಗ್ಗೆ ಚರ್ಚೆ ಮಾಡೋಣ’ ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಶೇಖರ್ ಕಪೂರ್, ಅಪೂರ್ವ ಅಸರಾನಿ, ಮಾನ್ವಿ ಗಾಗ್ರೋ ಸೇರಿದಂತೆ ಅನೇಕರು ಅಲಿಯಾ ಹಾಗೂ ರಣಬೀರ್‌ಗಿಂತ ಉತ್ತಮ ನಟರ ಪಟ್ಟಿಯನ್ನು ಹಂಚಿಕೊಂಡಿದ್ದರು.
ಒಟ್ಟಾರೆ ಬಾಲಿವುಡ್ ಅಂಗಳಲ್ಲಿ ಸ್ವಜನಪಕ್ಷಪಾತದ ಚರ್ಚೆ ನಿಲ್ಲುವ ಹಾಗೇ ಕಾಣುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ನಿಲುವಿನೊಂದಿಗೆ ದಿನಕ್ಕೊಂದು ಚರ್ಚೆಯನ್ನು ಹುಟ್ಟು ಹಾಕುತ್ತಲೇ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.