ಅರವಿಂದ್ ಕೌಶಿಕ್ ನಿರ್ದೇಶನದ `ಹುಲಿರಾಯ' ಚಿತ್ರದಿಂದ ತಮ್ಮ ಸಿನಿಪಯಣ ಆರಂಭಿಸಿದ್ದ ನಟಿ ದಿವ್ಯಾ ಉರುಡುಗ, ಇದೀಗ ಮತ್ತೆ ಅರವಿಂದ್ ಸಾರಥ್ಯದ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ. ಬಿಗ್‌ಬಾಸ್‌ನಲ್ಲಿ ಜೊತೆಯಾದ ಅರವಿಂದ್ ಕೆ.ಪಿ.–ದಿವ್ಯಾ ಜೋಡಿ ಇದೀಗ ‘ಅರ್ದಂಬರ್ಧ ಪ್ರೇಮಕಥೆ’ ಮೂಲಕ ಬೆಳ್ಳಿತೆರೆಗೂ ಹೆಜ್ಜೆ ಇಡುತ್ತಿದೆ. ಈ ಕುರಿತು ದಿವ್ಯಾ ಜೊತೆ ಮಾತಿಗಿಳಿದಾಗ...
ಇಲ್ಲಿಯವರೆಗಿನ ಸಿನಿಪಯಣದ ಗ್ರಾಫ್ ಅವಲೋಕಿಸಿದಾಗ...
ಎಲ್ಲಾ ಸಿನಿಮಾಗಳೂ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಲೇಬೇಕೆಂದಿಲ್ಲ. ಕೆಲವು ಸಿನಿಮಾಗಳನ್ನು, ಅವುಗಳ ಒಳಗಿನ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ, ವಿಮರ್ಶಕರು ಸೂಕ್ಷ್ಮವಾಗಿ ಗಮನಿಸಿ ಅಭಿಪ್ರಾಯ ಹೇಳುತ್ತಾರೆ. ನಾನು ಆಯ್ದುಕೊಂಡಿದ್ದ ಪಾತ್ರಗಳು, ಸಿನಿಮಾಗಳು ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡದೇ ಇದ್ದರೂ, ವಿಮರ್ಶಕರ ಮೆಚ್ಚುಗೆ ಪಡೆದಿವೆ. ಇದಕ್ಕೆ ಅರವಿಂದ್ ಕೌಶಿಕ್ ಅವರ ‘ಹುಲಿರಾಯ’ನೇ ಸಾಕ್ಷಿ. ಇದೊಂದು ಸಂದೇಶ ನೀಡುವ ಸಿನಿಮಾವಾಗಿತ್ತು. ನನ್ನ ಸ್ಕ್ರೀನ್‌ಸ್ಪೇಸ್ ಇದರಲ್ಲಿ ಹೆಚ್ಚು ಇಲ್ಲದೇ ಇದ್ದರೂ, ಪರಿಣಾಮ ಬೀರಿದ ಪಾತ್ರವಾಗಿತ್ತು. ಅದೇ ರೀತಿಯ ಸದೃಢ ಪಾತ್ರಗಳು ನನಗೆ ‘ಧ್ವಜ’, ‘ಫೇಸ್ ಟು ಫೇಸ್’, ‘ಗಿರ್ಕಿ’ ಸಿನಿಮಾಗಳಲ್ಲೂ ದೊರಕಿತ್ತು.
ಅರವಿಂದ್ ಕೌಶಿಕ್ ತಮ್ಮ ಗುರುಗಳು ಎಂದು ಪರಿಗಣಿಸುವ ಅಶೋಕ್ ಕಶ್ಯಪ್ ಅವರು ‘ಧ್ವಜ’ ಸಿನಿಮಾದ ನಿರ್ದೇಶಕರಾಗಿದ್ದರು. ಹೀಗೆ ನನ್ನ ಗುರುವಿನ ಗುರುಗಳ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು. ಜೊತೆಗೆ ‘ಧ್ವಜ’ ಸಿನಿಮಾದಲ್ಲಿ ಪ್ರಿಯಾಮಣಿ ಅವರಂತಹ ಖ್ಯಾತ ನಟಿಯ ಜೊತೆಗೆ ತೆರೆಹಂಚಿಕೊಳ್ಳುವ ಅವಕಾಶ ಲಭಿಸಿತು. ‘ಫೇಸ್ ಟು ಫೇಸ್’ ಸಿನಿಮಾದಲ್ಲಿ ನನ್ನ ‘ಸ್ನೇಹ’ ಎನ್ನುವ ಪಾತ್ರ ಹೀರೊ ಪಾತ್ರಕ್ಕೆ ಕಡಿಮೆಯೇನಿರಲಿಲ್ಲ. ಹೀಗೆ ಇಲ್ಲಿಯವರೆಗೆ ಮಾಡಿರುವ ಎಲ್ಲ ಪಾತ್ರಗಳ ಬಗ್ಗೆ ನನಗೆ ತೃಪ್ತಿ, ಖುಷಿ ಇದೆ.
ಬಿಗ್‌ಬಾಸ್ ಪಯಣದ ಪರಿಣಾಮ ಹೇಗಿತ್ತು?
ನಾನು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದರೂ ಹೆಚ್ಚಿನ ಜನರಿಗೆ ನನ್ನ ಪರಿಚಯ ಇರಲಿಲ್ಲ. ಆದರೆ ಬಿಗ್‌ಬಾಸ್ ಮನೆಗೆ ಎರಡು ಬಾರಿ ಪ್ರವೇಶವಾದ ಬಳಿಕ ನಾನು ಕನ್ನಡಿಗರ ಮನೆಮಗಳಾದೆ. ಬಿಗ್‌ಬಾಸ್ ಪ್ರವೇಶಕ್ಕೂ ಮುನ್ನ ಈ ಒಂದು ನಿರ್ಧಾರ ನನ್ನ ಜೀವನದ ಮೇಲೆ ಇಷ್ಟೊಂದು ಪರಿಣಾಮ ಬೀರಬಹುದು ಎಂದು ಊಹಿಸಿಯೂ ಇರಲಿಲ್ಲ. ಜನರು ನನ್ನ ಹಾಗೂ ಅರವಿಂದ್ ಕೆ.ಪಿ. ಪಯಣವನ್ನು ಈಗಲೂ ಮೆಲುಕುಹಾಕುತ್ತಲೇ ಇರುತ್ತಾರೆ. ಈ ಪಯಣ ನನ್ನ ಸಿನಿಮಾ ಪಯಣದಲ್ಲೂ ಸಕಾರಾತ್ಮಕವಾದ ಪರಿಣಾಮ ಬೀರಿದೆ.
‘ಅರ್ದಂಬರ್ಧ ಪ್ರೇಮಕಥೆ’ಯಲ್ಲಿ ಸಿಲುಕಿದ್ದು ಹೇಗೆ?
ಅರವಿಂದ್ ಕೌಶಿಕ್ ಅವರು ಸಿನಿಮಾದ ಕಥೆಯೊಂದನ್ನು ಹೇಳಲು ನನ್ನನ್ನು ಕಾಫಿ ಡೇಗೆ ಕರೆದಿದ್ದರು. ಈ ಸಂದರ್ಭದಲ್ಲಿ ಅರವಿಂದ್(ಅವಿ) ಕೂಡ ನನ್ನ ಜೊತೆಗಿದ್ದರು. ಕಥೆ ಹೇಳುವಾಗ ನಾನು, ಅವಿ ಇಬ್ಬರೂ ಅದರ ಜೊತೆ ಹೆಜ್ಜೆ ಹಾಕುತ್ತಿದ್ದೆವು. ಅವಿ ಕಥೆ ಕೇಳುತ್ತಾ ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದರು. ಈ ಸಂದರ್ಭದಲ್ಲಿ ನನ್ನ ಹಾಗೂ ಅವಿಯ ಕೆಮಿಸ್ಟ್ರಿ ನೋಡಿ ಅರವಿಂದ್ ಕೌಶಿಕ್ ಅವರು ‘ನೀವಿಬ್ಬರೇ ಏಕೆ ಲೀಡ್ ಆಗಬಾರದು?’ ಎಂದು ಕೇಳಿದರು. ಹೀಗೆ ಅವಿಗೆ ಏಕಾಏಕಿ ಸಿಕ್ಕ ಆಫರ್ ಇದು. ಅರವಿಂದ್ ಕೌಶಿಕ್ ಅವರ ನಿರ್ದೇಶನ ಹಾಗೂ ಅರವಿಂದ್ ನಾಯಕರಾಗಿದ್ದು, ಈ ಸಿನಿಮಾವನ್ನು ಒಪ್ಪಿಕೊಳ್ಳಲು ಕಾರಣ.
ಸಿನಿಮಾದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ...
ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಹಾಗೆಂದು ಪೋಸ್ಟರ್‌ನಲ್ಲಿ ಅರವಿಂದ್ ಕೈಯಲ್ಲಿ ಗನ್ ಏಕೆ ಇದೆ ಎಂದು ಕೇಳಬೇಡಿ. ಕೊಂಚ ಥ್ರಿಲ್ಲರ್ ಅಂಶ ಇರಬಹುದು. ಸಾಮಾನ್ಯ ಹುಡುಗಿಯ ಪಾತ್ರ ನನ್ನದು. ನನ್ನ ಪಾತ್ರದ ವಿಶೇಷ ಏನೆಂದರೆ, ಪಾತ್ರದ ಹೆಸರು ರಿವೀಲ್ ಆಗುವುದೇ ಕ್ಲೈಮ್ಯಾಕ್ಸ್‌ನಲ್ಲಿ. ಹೆಸರೇ ಗೊತ್ತಿಲ್ಲದ ಪಾತ್ರದ ಜೊತೆಗಿನ ನಾಯಕನ ಪಯಣ ಇಲ್ಲಿದೆ.
ದಿವ್ಯಾ ಅವರ ಕೈಯಲ್ಲಿರುವ ಪ್ರಾಜೆಕ್ಟ್‌ಗಳು ಯಾವುವು?
ವಿಜಯ ರಾಘವೇಂದ್ರ ಅವರ ಜೊತೆಗೆ ನಟಿಸಿರುವ ಹಾರರ್ ಥ್ರಿಲ್ಲರ್ ಸಿನಿಮಾ ‘3ಬಿಎಚ್‌ಕೆ’ ಹಾಗೂ ನೈಜ ಘಟನೆ ಆಧಾರಿತ ‘ರಾಂಚಿ’ ಎನ್ನುವ ಸಿನಿಮಾ ಬಿಡುಗಡೆಗೆ ಸಿದ್ಧ ಇವೆ. ‘ಅರ್ದಂಬರ್ಧ ಪ್ರೇಮಕಥೆ’ ಸಿನಿಮಾ ಅಕ್ಟೋಬರ್ ಮಾಸಾಂತ್ಯಕ್ಕೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಬಹುದು. ಒಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದೇನೆ. ಅದರ ಮಾಹಿತಿಯನ್ನು ಚಿತ್ರತಂಡವೇ ಮುಂದಿನ ದಿನಗಳಲ್ಲಿ ನೀಡಲಿದೆ. ಹಲವು ಸ್ಕ್ರಿಪ್ಟ್‌ಗಳನ್ನು ಕೇಳುತ್ತಿದ್ದು, ಪಾತ್ರಕ್ಕೆ ತೂಕವಿದ್ದರೆ ಒಪ್ಪಿಕೊಳ್ಳುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.