ಆಯುಷ್ಮಾನ್ ಖುರಾನಾ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಎರಡು ಮೂರು ದಿನಗಳಿಂದ ವಿಪರೀತ ಸಕ್ರಿಯರಾಗಿದ್ದಾರೆ. ‘ನಾವಿಬ್ಬರೂ ಭಾಯಿ ಭಾಯಿ’ ಎಂದು ಅವರಿಬ್ಬರೂ ಹೇಳಲು ಕಾರಣವಿದೆ. ಕಳೆದ ಶುಕ್ರವಾರ ವಿಕ್ಕಿ ಅಭಿನಯದ ‘ಭೂತ್ ಪಾರ್ಟ್ ಒನ್’ ಹಾಗೂ ಆಯುಷ್ಮಾನ್ ಖುರಾನಾ ನಟಿಸಿರುವ ‘ಶುಭಮಂಗಲ್ ಜ್ಯಾದಾ ಸಾವಧಾನ್’ ಸಿನಿಮಾಗಳು ತೆರೆಕಂಡಿವೆ. ಒಂದೇ ದಿನ ತೆರೆಕಂಡ ಎರಡೂ ಚಿತ್ರಗಳಿಗೆ ಇಬ್ಬರೂ ಸೇರಿ ‘ಪ್ರಮೋಷನ್ ಚಟುವಟಿಕೆ’ಯಲ್ಲಿ ತೊಡಗಿದ್ದು ವಿಶೇಷವೇ ಸರಿ.
‘ಏಕ್ ಹೀ ದಿನ್ ಮೆ ದೋನೋ ಭಾಯಿ ಆ ರಹೇ ಹೈ! ಢೇಡ್ ಸಾರಾ ಪ್ಯಾರ್ ಔರ್ ಸಮ್ಮಾನ್ ಲೇಕರ್ ಆ ರಹೇ ಹೈ ವಿಕ್ಕಿ ಔರ್ ಆಯುಷ್ಮಾನ್. ಭೂತ್ ಔರ್ ಶುಭ ಮಂಗಲ್ ಜ್ಯಾದಾ ಸಾವಧಾನ್’ (ಒಂದೇ ದಿನ ಇಬ್ಬರೂ ಸಹೋದರರು ಬರ್ತಾ ಇದೀವಿ...ಸಾಕಷ್ಟು ಪ್ರೀತಿ, ಸಮ್ಮಾನಗಳ ಸಹಿತ ವಿಕ್ಕಿ ಹಾಗೂ ಆಯುಷ್ಮಾನ್. ಭೂತ್ ಹಾಗೂ ಶುಭಮಂಗಲ್ ಜ್ಯಾದಾ ಸಾವಧಾನ್) ಎಂದು ಟ್ವಿಟ್ಟರ್ನಲ್ಲಿ ಆಯುಷ್ಮಾನ್ ಒಂದು ಪೋಸ್ಟ್ ಹಾಕಿದರು. ಜತೆಯಲ್ಲಿ ವಿಕ್ಕಿ ಜತೆ ಇರುವ ಫೋಟೊವನ್ನೂ ಹಾಕಿದರು.
ಅದನ್ನು ನೋಡಿದ್ದೇ ವಿಕ್ಕಿ ಕೂಡ ಇಬ್ಬರದ್ದೂ ಇನ್ನೊಂದು ಫೋಟೊವನ್ನು ಹಾಕಿ, ‘ಕಲ್ ಸೆ ಆಪ್ಕೆ ನಜ್ದೀಕಿ ಸಿನಿಮಾ ಘರೋಂ ಮೆ#ಶುಭ್ಮಂಗಲ್ಜ್ಯಾದಾಸಾವಧಾನ್#ಭೂತ್’ ಎಂದು ಇನ್ನೊಂದು ಟ್ವಿಟ್ ಮಾಡಿದರು.
ಅಷ್ಟೇ ಅಲ್ಲ, ಇಬ್ಬರೂ ಅವಕಾಶ ಸಿಕ್ಕಿದೆಡೆಯೆಲ್ಲ ವಿಡಿಯೊಗಳಲ್ಲಿ ಇಬ್ಬರೂ ಒಟ್ಟಿಗೆ ಪಯಣಿಸಿದ್ದು, ಒಂದೇ ವರ್ಷ ರಾಷ್ಟ್ರ ಪ್ರಶಸ್ತಿಯನ್ನು ಪಡೆದದ್ದು, ಕಷ್ಟಪಟ್ಟು ಮೇಲೇರಿದ್ದು ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ಪ್ರಚಾರದ ಈ ಪರಿ ಆಸಕ್ತಿಕರವಂತೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.