‘ಭಾರತದಲ್ಲಿ ವೃದ್ಧರೆಲ್ಲರೂ ಅನುಭವಿಸುತ್ತಿರುವ ಪಾಡನ್ನು ನನ್ನ ಪಾತ್ರ ಹೇಳಲಿದೆ. ಮಕ್ಕಳು ತಂದೆ–ತಾಯಿಯಿಂದ ದೂರವಿದ್ದು, ವೃದ್ಧರದು ಒಂಟಿತನದ ಬದುಕು. ಈ ದೇಶ ನಿಧಾನವಾಗಿ ವೃದ್ಧರ ದೇಶವಾಗುತ್ತಿದೆ. ಕೃಷ್ಣನ ಗೋಕುಲ ನಿರ್ಗಮನದ ನಂತರದ ಗೋಕುಲದ ಅವಸ್ಥೆ ಇದು. ಚಿತ್ರದಲ್ಲಿ ಐದಾರು ವೃದ್ಧರಿದ್ದಾರೆ. ಇದರಲ್ಲಿ ನಾನೊಬ್ಬ ಮಹಾವೃದ್ಧ’ ಎನ್ನುತ್ತಾರೆ ಕವಿ ಎಚ್‌ಎಸ್‌ವಿ.
ಕಾವ್ಯ ಕೃಷಿಗೆ ಇಡೀ ಜೀವಮಾನ ಅರ್ಪಿಸಿಕೊಂಡಿರುವ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರು ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಅದೂ ಎಪ್ಪತ್ತೇಳರ ಹರೆಯದಲ್ಲಿ ಅವರು ನಾಯಕನಾಗಿ ನಟಿಸಿರುವ ‘ಅಮೃತವಾಹಿನಿ’ ಚಿತ್ರ ಇದೇ ಶುಕ್ರವಾರ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಕೋವಿಡ್ 19 ಲಾಕ್‌ಡೌನ್ ಇರದಿದ್ದರೆ ಕಳೆದ ವರ್ಷವೇ ಈ ಚಿತ್ರ ತೆರೆಕಂಡಿರುತ್ತಿತ್ತು. ಈ ಚಿತ್ರದಲ್ಲಿ ಎಚ್‌ಎಸ್‌ವಿ ಎರಡು ಛಾಯೆ ಇರುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಓ ಗುಲಾಬಿಯೇ’ ಚಿತ್ರ ಖ್ಯಾತಿಯ ಕೆ. ನರೇಂದ್ರ ಬಾಬು ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಮರ್ಷಿಯಲ್ ಸಿನಿಮಾಗಳಿಗೆ ಖ್ಯಾತರಾದ ಬಾಬು ಅವರಿಗೆ ಇದು ಮೊದಲ ಆಫ್‌ಬೀಟ್ ಸಿನಿಮಾ.
ಸಾಹಿತಿರಾಘವೇಂದ್ರ ಪಾಟೀಲ ಅವರು ವೃದ್ಧಾಪ್ಯದ ಬದುಕು ಕೇಂದ್ರವಾಗಿಟ್ಟುಕೊಂಡು ಹೆಣೆದ ಕಾದಂಬರಿಯನ್ನು ಈ ಚಿತ್ರ ಆಧರಿಸಿದೆ. ಬಾಬು ಚಿತ್ರಕಥೆ ರಚಿಸಿ, ಶಿವಾನಂದ ಸಂಭಾಷಣೆ ಹೊಸೆದಿದ್ದಾರೆ. ಎಚ್‌ಎಸ್‌ವಿ ಜತೆಗೆವತ್ಸಲಾ ಮೋಹನ್, ಬಾಲ ನಟಿ ಋತ್ವಿಕಾ, ಕಿರುತೆರೆಯ ನಟಿ ಸುಪ್ರಿಯಾ ತೆರೆ ಹಂಚಿಕೊಂಡಿದ್ದಾರೆ.
ಚಿತ್ರ ಮತ್ತು ತಮ್ಮ ಪಾತ್ರದ ಕುರಿತು ಹಲವು ಸಂಗತಿಗಳನ್ನು ಎಚ್‌ಎಸ್‌ವಿ ‘ಪ್ರಜಾಪ್ಲಸ್’ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
* ಸಾಹಿತ್ಯ ಕೃಷಿಯಲ್ಲಿದ್ದವರು ನಟನೆಗಾಗಿ ಬಣ್ಣ ಹಚ್ಚಿದ ಕಾರಣ...
ನನಗೆ ಮೊದಲಿಂದಲೂ ನಾಟಕದ ಹುಚ್ಚು ಇತ್ತು. ಹೈಸ್ಕೂಲ್ ಮೇಷ್ಟ್ರಾಗಿದ್ದಾಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಕಾಲೇಜಿನಲ್ಲಿ ಹುಡುಗರಿಗೆ ನಾಟಕದ ಮೇಷ್ಟ್ರೂ ಆಗಿದ್ದೆ! ನಾನಲ್ಲದ ಒಂದು ಪಾತ್ರವನ್ನು ಅಭಿನಯಿಸೋದು ಪರಾನುಕಂಪೆಯ ಅನುಸಂಧಾನಕ್ಕೆ ಅತ್ಯಗತ್ಯ. ನಾನು ಬುದ್ಧಚರಣ ರಚಿಸುವಾಗ ಎಲ್ಲಾ ಪಾತ್ರಗಳನ್ನೂ ನಾನೇ ಮನೋರಂಗದಲ್ಲಿ ಅಭಿನಯಿಸುತ್ತಿದ್ದೆ! ಈಗ ಆ ಅನುಭವ ಸಿನಿಮಾದಲ್ಲಿ ಅಭಿನಯಿಸುವಾಗ ಆಸರೆಗೆ ಬಂತು. ನಿರ್ದೇಶಕ ನರೇಂದ್ರ ಬಾಬು ಮತ್ತು ನಿರ್ಮಾಪಕರು ಪ್ರೀತಿಯ ಒತ್ತಾಯ ಹಾಕಿ ನಾನು ಸಿನಿಮಾವೊಂದರಲ್ಲಿ ಅಭಿನಯಿಸುವಂತೆ ಮಾಡಿದ್ದಾರೆ! ಪ್ರತಿಭೆಯ ಸಾಧ್ಯತೆಗಳನ್ನು ಗುರುತಿಸಿಕೊಳ್ಳುವ ಅಭಿಲಾಷೆಯೇ ಸಿನಿಮಾಕ್ಕೆ ಬಣ್ಣ ಹಚ್ಚಲು ಪ್ರಧಾನ ಕಾರಣ.
* 77 ಹರೆಯದಲ್ಲಿನಾಯಕ ನಟನಾಗಿ ಚಂದನವನಕ್ಕೆ ಕಾಲಿಡುವುದು ಸವಾಲು ಎನಿಸಿತಾ?
ಹೊಸ ಹೊಸ ಸಾವಾಲುಗಳನ್ನು ಸ್ವೀಕರಿಸಲು ಬಯಸುವವನು ನಾನು. ನನ್ನನ್ನು ನಾನು ಮರೆತು ಇನ್ನೊಂದರಲ್ಲಿ ತಾದಾತ್ಮ್ಯಗೊಳ್ಳುವುದು ಬಹು ದೊಡ್ಡ ಸವಾಲು. ಅದರಲ್ಲಿ ಎಷ್ಟರಮಟ್ಟಿನ ಸಾಫಲ್ಯ ಸಿಕ್ಕಿದೆ ಅನ್ನುವುದನ್ನು ಕಲಾರಸಿಕರು ಹೇಳಬೇಕು.
* ಇದು ಯಾವ ಬಗೆಯ ಸಿನಿಮಾ? ಎಂಥಾ ಕಥಾವಸ್ತುವಿದೆ?
ವೃದ್ಧಾಪ್ಯದ ಬಿಕ್ಕಟ್ಟುಗಳನ್ನು ಹೃದ್ಯ ನೆಲೆಯಲ್ಲಿ ಕಾಣಿಸುವ ಕೌಟುಂಬಿಕ ನೆಲೆಯ ಸಿನಿಮಾ ಇದು. ಕುಟುಂಬ ಮತ್ತು ಸಹಬಾಳ್ವೆಯ ವ್ಯವಸ್ಥೆಯ ಮೇಲೆ ಆಧುನಿಕ ಸಮಾಜ ಮಾಡುತ್ತಿರುವ ಆಘಾತವನ್ನೂ ‘ಅಮೃತವಾಹಿನಿ’ ತೆರೆದಿಡಲು ಯತ್ನಿಸುತ್ತಿದೆ. ಮೂಲ ಕಥೆ ಪ್ರಸಿದ್ಧ ಕತೆಗಾರ ರಾಘವೇಂದ್ರಪಾಟೀಲರದ್ದು. ಸದಭಿರುಚಿಯ ಈವತ್ತಿನ ಸಂದರ್ಭಕ್ಕೆ ನಿಕಟವಾದ ಕಥೆ. ಬದುಕನ್ನು ಹೃದಯದ ಹಾದಿಯಾಗಿ ಗುರುತಿಸಿಕೊಳ್ಳುವ ಪ್ರಯತ್ನದ ಫಲವಾಗಿ ಈ ಕಥೆ ಮೈದಾಳಿದೆ...
* ನೀವು ನಿಭಾಯಿಸಿರುವ ಪಾತ್ರದ ಬಗ್ಗೆ ಒಂದಿಷ್ಟು ಹೇಳಿ...
ಎರಡು ಪೀಳಿಗೆಗಳ ಭಾವನಾತ್ಮಕ ಸಂಘರ್ಷವನ್ನು ಈ ಸಿನಿಮಾ ಚಿತ್ರಿಸುತ್ತಿದೆ. ಪ್ರಧಾನವಾಗಿ ಇಬ್ಬರು ವೃದ್ಧರ ಬದುಕಿನ ಬಿಕ್ಕಟ್ಟುಗಳು ಈ ಸಿನಿಮಾದಲ್ಲಿ ತೆರೆದುಕೊಳ್ಳುತ್ತವೆ. ಆ ಇಬ್ಬರಲ್ಲಿ ಒಬ್ಬ ವೃದ್ಧ ನಾನು! ಒಂದು ತಾದಾತ್ಮ್ಯ ಭಾವದಲ್ಲಿ ಈ ವೃದ್ಧನ ಪಾತ್ರ ನಿರ್ವಹಿಸಿದ್ದೇನೆ. ಇನ್ನೊಂದು ಮುಖ್ಯ ಪಾತ್ರವನ್ನು ಶಿವಮೊಗ್ಗೆಯ ರಂಗಕಲಾವಿದ ವೈದ್ಯ ನಿರ್ವಹಿಸಿದ್ದಾರೆ. ಸಹಜವಾಗಿ ಇರುವಂತೆ ಇರುವುದೇ ಇಲ್ಲಿ ಅಭಿನಯವಾಗಿದೆ ಎಂಬುದು ನಮ್ಮ ನಿರ್ದೇಶಕರ ಆಂಬೋಣ! ತರುಣ ಕಲಾವಿದರು ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಉಪಾಸನ ಮೋಹನರ ಸಂಗೀತ, ಗಿರಿಧರ್ ದಿವಾನ್ ಅವರ ಕ್ಯಾಮೆರಾ ಕೆಲಸ ಕಥೆಯ ಅನುಭವದ್ರವ್ಯವನ್ನು ಎತ್ತಿಹಿಡಿಯುವಲ್ಲಿ ತನ್ಮಯತೆಯಲ್ಲಿ ಉದ್ಯುಕ್ತವಾಗಿದೆ. ಹಾಗೇ ನಿರ್ಮಾಪಕ ಕೆ.ಸಂಪತ್ ಕುಮಾರ್, ನಿರ್ದೇಶಕ ನರೇಂದ್ರ ಬಾಬು ಅವರ ಸದಭಿರುಚಿಯ ಧೈರ್ಯವನ್ನೂ ಶ್ಲಾಘಿಸುತ್ತೇನೆ!
ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಸೊಸೆ ಮತ್ತು ಮಾವನ ನಡುವೆ ನಡೆಯುವ ಬಿಕ್ಕಟ್ಟು ಎಲ್ಲರ ಮನೆಯಲ್ಲೂ ಇರುವಂತೆ ಈ ಚಿತ್ರದಲ್ಲೂ ಇರುವಾಗ ಆಶಾಕಿರಣದಂತೆ ಬಾಲಕಿ ಋತ್ವಿಕಾಳ ಪ್ರವೇಶವಾಗುತ್ತದೆ. ಆಗ ಕಥೆಗೆ ಹೊಸ ತಿರುವು, ಹೊಸತನದ ಆಯಾಮ ಸಿಗುತ್ತದೆ.
* ಚಿತ್ರೀಕರಣದ ಅನುಭವ ಹೇಗಿತ್ತು?
ಚಿತ್ರೀಕರಣದ ಅನುಭವ ರೋಚಕವಾಗಿತ್ತು. ತಾಳ್ಮೆಯಿಂದ ನರೇಂದ್ರಬಾಬು ನನ್ನಿಂದ ದುಡಿಸಿಕೊಂಡರು. ಕೆಲವು ದಿನ ಇಡೀ ರಾತ್ರಿ ಶೂಟಿಂಗ್. ತಾಂತ್ರಿಕ ನಿರ್ಬಂಧಗಳು; ಇಕ್ಕಟ್ಟುಗಳು. ಎಷ್ಟಾದರೂ ಸಿನಿಮಾ ಒಂದು ಕಲಾ-ವೈಜ್ಞಾನಿಕ ಮಾಧ್ಯಮವಲ್ಲವೆ? ನಾಟಕದಿಂದ ಇದು ಭಿನ್ನ. ಸಿನಿಮಾದ್ದೆ ಒಂದು ಹೊಸ ಪರಿಭಾಷೆ. ಸಿನಿಮಾ ಆದ ಮೇಲೆ ಮಾತಿನ ಮನೆಯಲ್ಲಿ ನಡೆದ ಡಬ್ಬಿಂಗ್ ಕೂಡ ವಿಶಿಷ್ಟ ಅನುಭವ. ಕಂಠದಾನ ಕಠಿಣವಾದ ಸವಾಲಾಗಿತ್ತು. ಆ ಕೆಲಸ ಸಮಾಧಾನಕರವಾಗಿ ಆಗಿದೆ ಎನ್ನುತ್ತಾರೆ ನಿರ್ದೇಶಕರು.
* ಈ ಸಿನಿಮಾದ ಮೇಲೆ ಎಂಥಾ ನಿರೀಕ್ಷೆಗಳನ್ನು ಹೊಂದಿದ್ದೀರಿ?
ಇದು ಸದಭಿರುಚಿಯ ಚಿತ್ರ. ಪ್ರೇಕ್ಷಕರಿಗೆ ಇದು ಹಿಡಿಸಿದರೆ ತುಂಬ ಸಂತೋಷವಾಗುವುದು.
* ಮುಂದಿನ ಸಿನಿಮಾ ಯಾವುದು? ಯಾವ ಪಾತ್ರದಲ್ಲಿ ನಿಮ್ಮನ್ನು ಕಾಣಬಹುದು?
ಕವಿತೆಯ ಹಾಗೆ ಒಳಹೊರಗೆ ಹೆಣೆದುಕೊಳ್ಳುವ ಒಂದು ಹೊಸ ಚಿತ್ರ ಮಾಡುವ ಉದ್ದೇಶವಿದೆ! ಕನ್ನಡದ ಯಾವುದಾದರೂ ಸಣ್ಣ ಕಥೆಯನ್ನು ತನ್ನದೇ ಆದ ಬೇರೆ ಮೈ ಆಂತಂತೆ ತೆರೆಯ ಮೇಲೆ ತರುವ ಆಸೆಯಿದೆ. ಕಾದು ನೋಡೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.