ADVERTISEMENT

ಡಾಕ್ಟರ್‌ ಚೀಟಿಯಲ್ಲಿ ಸಿನಿಮಾ ಗೀತೆ

ಶರತ್‌ ಹೆಗ್ಡೆ
Published 1 ಜುಲೈ 2021, 19:30 IST
Last Updated 1 ಜುಲೈ 2021, 19:30 IST
ಡಾ.ಉಮೇಶ್‌ ಪಿಲಿಕುಡೇಲು
ಡಾ.ಉಮೇಶ್‌ ಪಿಲಿಕುಡೇಲು   

ಸ್ಟೆತಾಸ್ಕೋಪ್‌ ಹಿಡಿಯುವ, ಔಷಧದ ಚೀಟಿ ಬರೆಯುವ ಕೈಗಳು ಆಗಾಗ ಗೀಚಿದ ಸಾಲುಗಳು ಬೆಳ್ಳಿತೆರೆಯ ಚಿತ್ರಗಳಲ್ಲಿ ಗೀತೆಗಳಾಗಿ ಝೇಂಕರಿಸಿದವು. ಚಿತ್ರಕ್ಕೊಂದು ಗೀತ ‘ಚಿಕಿತ್ಸೆ’ ಕೊಟ್ಟ ಡಾಕ್ಟರ್‌ ಮಾತ್ರ ಯಾವ ಹೆಸರು, ಕೀರ್ತಿಗೂ ಕಾಯದೆ ತಮ್ಮ ಪಾಡಿಗೆ ಬರೆಯುತ್ತಲೇ ಇದ್ದಾರೆ. ಕನ್ನಡ, ತುಳು, ಹಿಂದಿ ಗೀತೆಗಳು ಡಾಕ್ಟರ್‌ ಚೀಟಿಯಲ್ಲಿ ಅರಳಿವೆ.

ಚಿತ್ರ ಸಾಹಿತಿ ಪಾಂಡಿತ್ಯ ಪ್ರದರ್ಶನ ಮಾಡುವುದಲ್ಲ. ಹೇಳಬೇಕಾಗಿರುವ ಸಂದೇಶವನ್ನು ಸರಳವಾಗಿ ದಾಟಿಸಿದರೆ ಸಾಕು. ಒಂದಿಷ್ಟು ಭಾಷಾಜ್ಞಾನ, ಸಂಗೀತಜ್ಞಾನ, ಬರೆಯುವ ಆಸಕ್ತಿ ಇಷ್ಟಂತೂ ಬೇಕು.

– ಇದು ಕನ್ನಡ, ತುಳು ಮತ್ತು ಹಿಂದಿ ಚಲನಚಿತ್ರ, ವಿಡಿಯೊ ಆಲ್ಬಂಗಳಿಗೆ ಸಾಹಿತ್ಯ ಬರೆಯುವ ಡಾ.ಉಮೇಶ್‌ ಪಿಲಿಕುಡೇಲು ಅವರ ಬರವಣಿಗೆಯ ಫಿಲಾಸಫಿ.

ADVERTISEMENT

ಡಾ.ಉಮೇಶ್‌ ಅವರು ಮಂಗಳೂರಿನಲ್ಲಿ ಆಯುರ್ವೇದ ವೈದ್ಯರು. ವೃತ್ತಿಯ ಮಧ್ಯೆ ಸಣ್ಣ ಪುರುಸೊತ್ತು ಸಿಕ್ಕಾಗ ಒಂದೆರಡು ಸಾಲು ಬರೆದಿದ್ದೇ ಸೂಪರ್‌ಹಿಟ್‌ ಸಂಗೀತವಾಗಿ ಚಿತ್ರರಸಿಕರು ಮತ್ತು ಸಂಗೀತ ಪ್ರೇಮಿಗಳನ್ನು ಸೆಳೆದಿದೆ.

ಕನ್ನಡದಲ್ಲಿ ಸುಮಾರು 20ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳು, ತುಳುವಿನ ಚಿತ್ರ ಹಾಗೂ ವಿಡಿಯೊ ಹಾಡುಗಳಿಗೆ ಬರೆದ ಸಾಹಿತ್ಯ, ಹಿಂದಿಯಲ್ಲಿ ಎರಡು ವಿಡಿಯೊ ಹಾಡುಗಳು ಹೀಗೆ ಬರೆದ ಗೀತೆಗಳ ಸಂಖ್ಯೆ ಲೆಕ್ಕವಿಟ್ಟಿಲ್ಲ ಎನ್ನುತ್ತಾರೆ ಡಾ.ಉಮೇಶ್‌.

ದರ್ಶನ್‌ ಅಭಿನಯದ ‘ಚಕ್ರವರ್ತಿ’ ಚಿತ್ರದ ‘ಮತ್ತೆ ಮಳೆಯಾಗಿದೆ...’ ಹಾಡು, ‘ಮಳೆ ಬರಲಿ ಮಂಜು ಇರಲಿ’ ಚಿತ್ರದ ‘ಜಗ ಜಗಿಸೋ ಜಗ ಬೇಡ ಕಣೋ....’, ಹೀಗೆ ತಮ್ಮ ಹಾಡುಗಳನ್ನು ರಿಯಾಲಿಟಿ ಷೋಗಳಲ್ಲಿ ಆದ್ಯತೆಯ ಗೀತೆಯಾಗಿ ಸ್ಪರ್ಧಿಗಳು ಹಾಡುತ್ತಾರೆ ಎಂದು ಅವರು ಖುಷಿಯಿಂದ ಹೇಳುತ್ತಾರೆ.

ವಿ.ಮನೋಹರ್‌, ಗುರುಕಿರಣ್‌, ಗಿರಿಧರ್‌ ದಿವಾನ್‌ ಅವರಂಥ ಖ್ಯಾತ ಸಂಗೀತ ನಿರ್ದೇಶಕರು ನನ್ನ ಗೀತೆಗಳಿಗೆ ರಾಗ ಜೋಡಿಸಿದ್ದಾರೆ. ಯೋಗರಾಜ್‌ ಭಟ್‌, ವಿಲೋಪ್‌ ಶೆಟ್ಟಿ ಕೂಡಾ ಅವಕಾಶ ಕೊಟ್ಟು ಪ್ರೋತ್ಸಾಹಿಸಿದ್ದಾರೆ ಎಂದು ಸಿನಿಬದುಕಿನಲ್ಲಿ ಗುರುತಿಸಿದ ಮಂದಿಯನ್ನು ನೆನಪಿಸಿಕೊಂಡರು ಅವರು.

ಚಿತ್ರಸಾಹಿತಿಯಾಗಲೆಂದೇ ಮುಂಬೈಗೆ ಹೋದೆ...
ನನಗೆ ಮೊದಲು ಹಿಂದಿ ಗಝಲ್‌ಗಳ ಮೇಲೆ ಆಸಕ್ತಿ ಇತ್ತು. ಹಿಂದಿಯಲ್ಲಿ ಸಾಕಷ್ಟು ಗಝಲ್‌ಗಳನ್ನು ಬರೆದಿದ್ದೆ. ವೈದ್ಯಕೀಯ ಕೋರ್ಸ್‌ ಮುಗಿದ ಬಳಿಕ ಇದೇ ಆಸಕ್ತಿ ಮುಂದಿಟ್ಟುಕೊಂಡು ಚಿತ್ರಸಾಹಿತಿ ಆಗಬೇಕು ಎಂದೇ ಮುಂಬೈಗೆ ಹೋದೆ. ಕ್ಯಾಸೆಟ್‌ ಕಂಪನಿ, ಸಂಗೀತ ಸಂಸ್ಥೆಗಳನ್ನು ಸಂಪರ್ಕಿಸಿದೆ. ಸುಮಾರು 6 ತಿಂಗಳು ನೋಡಿದೆ. ಅದ್ಯಾಕೋ ನನಗೆ ಸರಿ ಹೊಂದಲಿಲ್ಲ. ಮುಂಬೈಯ ಗಿಜಿಗುಡುವ ಜೀವನಶೈಲಿ ನನಗೆ ಹಿಡಿಸಲಿಲ್ಲ. ವಾಪಸ್‌ ಬಂದು ಮಂಗಳೂರಿನಲ್ಲಿ ವೈದ್ಯವೃತ್ತಿಯನ್ನು ಮುಂದುವರಿಸಿದೆ. ಆಗ ಕನ್ನಡದಲ್ಲಿ ಏಕೆ ಹಾಡು ಬರೆಯಲು ಪ್ರಯತ್ನಿಸಬಾರದು ಎಂದು ಮುಂದುವರಿದೆ. ಏಕೆಂದರೆ ಮಾತೃಭಾಷೆಯಲ್ಲಿ ಬರೆಯುವುದು ಸುಲಭ ಅಲ್ಲವೇ. ಹಾಗಾಗಿ ಇಲ್ಲಿ ಗೀತೆಗಳ ಮೂಲಕ ಗುರುತಿಸಿಕೊಂಡೆ.

‘ಬೆಳದಿಂಗಳಾಗಿ ಬಾ’ ಚಿತ್ರದ ‘ನೀ...ನನ್ನ ಉಸಿರಾಗಬೇಡ’ ನಾನು ಬರೆದ ಮೊದಲ ಕನ್ನಡ ಹಾಡು. ತುಳುವಿನಲ್ಲಿ ‘ಏರೆಗ್ಲಾ ಪನೊಡ್ಚಿ’ (‘ಯಾರಿಗೂ ಹೇಳ್ಬೇಡಿ’ ಚಿತ್ರದ ರಿಮೇಕ್‌) ಚಿತ್ರಕ್ಕೂ ಹಾಡುಗಳನ್ನು ಬರೆದೆ. ಕಂಬಳ ಉಳಿಸುವ ಸಂಬಂಧಿಸಿ ‘ಕಂಬಳ’ ಎಂಬ ಹಾಡನ್ನು ಬರೆದೆ. ಪ್ರೊ ಕಬ್ಬಡ್ಡಿಯ ಶೀರ್ಷಿಕೆ ಗೀತೆಯನ್ನು ಬರೆದಿದ್ದೆ. ಹೀಗೆ ಬರೆದ ಹಾಡುಗಳೆಲ್ಲವೂ ಅದ್ಭುತವಾಗಿ ಹಿಟ್‌ ಆದವು. ಇನ್ನೂ ಕೆಲವು ಹಾಡುಗಳನ್ನೇನೋ ಬರೆದೆ. ಆ ಚಿತ್ರಗಳೇ ಪೂರ್ಣಗೊಳ್ಳಲಿಲ್ಲ. ಅದಕ್ಕೆ ಅದರದ್ದೇ ಆದ ಸಮಸ್ಯೆಗಳು ಇವೆ ಎಂದು ವಿವರಿಸಿದರು ಡಾ.ಉಮೇಶ್‌.

ಈಗ ‘3000’, ‘ಚೇಸ್‌’ ಚಿತ್ರಗಳಿಗೆ ಹಾಡು ಬರೆದಿದ್ದೇನೆ. ಈ ಮಧ್ಯೆ ಓದುವಿಕೆ, ಸಂಗೀತ ಕೇಳುವಿಕೆ ಮುಂದುವರಿದಿದೆ. ಗೀತರಚನೆಕಾರನಿಗೆ ಇದು ಬಹಳ ಮುಖ್ಯ ಎನ್ನುತ್ತಾರೆ ಅವರು. ಮುಖ್ಯವಾಗಿ ಕನ್ನಡ ಭಾಷಾಜ್ಞಾನ ಇರುವವರ ಕೊರತೆ ಸಿನಿಮಾ ಕ್ಷೇತ್ರದಲ್ಲಿದೆ ಎಂಬ ಬೇಸರವೂ ಅವರದ್ದು.

ಚಿತ್ರ ಸಾಹಿತ್ಯ ಬರೆಯುವುದನ್ನು ವೃತ್ತಿ ಮಾಡಿಕೊಳ್ಳಬೇಕು ಎಂಬ ಗುರಿ ಇರಲಿಲ್ಲ. ನಾನೊಬ್ಬ ಗೀತಸಾಹಿತಿ ಆಗಬೇಕು ಎಂಬ ಗುರಿ ಇತ್ತು. ಅದನ್ನು ತಲುಪಿದ್ದೇನೆ. ಕೆಲವು ಸಂದರ್ಭ ಗೀತೆಯ ಧ್ವನಿಮುದ್ರಣ, ಬಿಡುಗಡೆ ಸಂದರ್ಭದಲ್ಲಿ ಬೆಂಗಳೂರಿಗೆ ಬರಲು ಆಗುತ್ತಿರಲಿಲ್ಲ. ಹೀಗಾಗಿ ಹೊರಗೆ ಗುರುತಿಸಿಕೊಳ್ಳಲು ಆಗಲಿಲ್ಲ. ಅದು ನನ್ನ ಇತಿಮಿತಿಯೂ ಹೌದು. ಆದರೆ, ಎಷ್ಟೋ ಸಂದರ್ಭದಲ್ಲಿ ಗೀತರಚನೆಕಾರನಿಗೆ ಸಿಗಬೇಕಾದ ಕನಿಷ್ಠ ಗೌರವ (ಕ್ರೆಡಿಟ್‌) ಸಿಗುವುದಿಲ್ಲ. ರೇಡಿಯೊ, ಟಿವಿಯಲ್ಲೂ ಗೀತರಚನೆಕಾರನ ಹೆಸರನ್ನೇ ಹೇಳುವುದಿಲ್ಲ ಎಂಬ ಬೇಸರವೂ ಅವರಿಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.