ADVERTISEMENT

ಶಿಕ್ಷಣ ಅವ್ಯವಸ್ಥೆ ವಿರುದ್ಧ 'ದ್ರೋಣ’ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 6:13 IST
Last Updated 25 ಜೂನ್ 2018, 6:13 IST
‘ದ್ರೋಣ’ ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್
‘ದ್ರೋಣ’ ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್   

ಸಮಕಾಲೀನ ಸಾಮಾಜಿಕ ಸಮಸ್ಯೆ ಕುರಿತ ಹಲವು ಚಿತ್ರಗಳಲ್ಲಿ ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ನಟಿಸಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ‘ದ್ರೋಣ’ ಚಿತ್ರ. ಪ್ರಸ್ತುತ ಶಿಕ್ಷಣ ಕ್ಷೇತ್ರದ ಅವ್ಯವಸ್ಥೆ ವಿರುದ್ಧ ಅಸ್ತ್ರ ಝಳ‍ಪಿಸಲು ಸಜ್ಜಾಗಿದ್ದಾರೆ ಶಿವಣ್ಣ.

ಬಹುನಿರೀಕ್ಷಿತ ‘ದ್ರೋಣ’ ಚಿತ್ರಕ್ಕೆ ಅವರ ಪತ್ನಿ ಗೀತಾ ಅವರ ಹುಟ್ಟುಹಬ್ಬದ ದಿನದಂದೇ ಹನುಮಂತನಗರದ ಶ್ರೀರಾಮಾಂಜನೇಯ ಗುಡ್ಡದಲ್ಲಿ ಮುಹೂರ್ತ ನೆರವೇರಿತು. ಭಿನ್ನವಾದ ಕಥೆಯ ಬಗೆಗೊಂದು ತೃಪ್ತಿಯಿಂದಲೇ ಶಿವಣ್ಣ ಚಿತ್ರದ ಬಗ್ಗೆ ಹಲವು ವಿಚಾರ ಹಂಚಿಕೊಂಡರು.

‘ಖುಷಿಯ ವಿಚಾರ ಅಂದ್ರೆ ಸಾಮಾಜಿಕ ಕಾಳಜಿ ಹೊಂದಿರೋ ಕಥೆಗಳೇ ನನಗೆ ಹೆಚ್ಚಾಗಿ ಸಿಗುತ್ತಿವೆ’ ಎಂದು ಮಾತು ಆರಂಭಿಸಿದರು ಶಿವರಾಜ್‌ಕುಮಾರ್.

ADVERTISEMENT

ಇತ್ತೀಚೆಗೆ ತೆರೆಕಂಡಿದ್ದ ನರೇಂದ್ರಬಾಬು ನಿರ್ದೇಶನದ ‘ಸಂತ ಕಬೀರ’ ಚಿತ್ರದಲ್ಲಿ ಕಬೀರ ಪಾತ್ರ ಮಾಡುವ ಮೂಲಕ ಅಚ್ಚರಿ ಹುಟ್ಟಿಸಿದವರು ಶಿವಣ್ಣ. ಸಾಮಾನ್ಯವಾಗಿ ಸ್ಟಾರ್ ನಟರು ತಮ್ಮ ಇಮೇಜ್‌ ಬಿಟ್ಟು ಕದಲದ ಸನ್ನಿವೇಶದಲ್ಲಿ ಭಿನ್ನವಾದ ಪಾತ್ರಗಳ ಮೂಲಕ ಜನರಿಗೆ ಮುಟ್ಟುವ ಮೂಲಕ ಅವರು ಅಗ್ರಸ್ಥಾನದಲ್ಲಿದ್ದಾರೆ. ದ್ರೋಣ ಚಿತ್ರದ ಮೂಲಕವೂ ಅದನ್ನೇ ಮುಂದುವರಿಸಿದ್ದಾರೆ.

ದ್ರೋಣ ಚಿತ್ರದ ಪ್ರಧಾನ ಕಥೆಯ ಎಳೆ ಈವತ್ತಿನ ಶೈಕ್ಷಣಿಕ ಅವ್ಯವಸ್ಥೆ ಕುರಿತದ್ದಾಗಿದೆ. ಸಾಮಾಜಿಕ ಕಳಕಳಿ ಇರುವ ಶಿಕ್ಷಕ ಆ ವಾತಾವರಣದ ಅವ್ಯವಸ್ಥೆಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದೇ ಕಥಾಹಂದರ.

ತಾವು ಕೂಡ ಸರ್ಕಾರಿ ಶಾಲೆಯಲ್ಲಿ ಒಂದಷ್ಟು ವರ್ಷ ಓದಿರುವ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಂಡ ಶಿವಣ್ಣ, ‘ಸರ್ಕಾರಿ ಶಾಲೆಯಲ್ಲಿ ಓದೋದು ಕೀಳರಿಮೆಯ ವಿಚಾರವಲ್ಲ. ಖಾಸಗಿ ಶಾಲೆಗಳಿಗೆ ವಿಶೇಷ ಗಾಳಿ ಬೀಸುತ್ತದೆಯೇ’ ಎಂದು ಪ್ರಶ್ನಿಸಿದರು.

‘ಪ್ರಮೋದ್‍ ಅವರನ್ನು ನಾನು ಸಣ್ಣ ಹುಡುಗನಿದ್ದಾಗಿಂದಲೇ ನೋಡುತ್ತಾ ಬಂದಿದ್ದೀನಿ. ಚೆನ್ನೈನಲ್ಲಿ ಅವರ ಪರಿಚಯವಾಯಿತು. ನಾವಿಬ್ಬರು ಸೇರಿ ಸಿನಿಮಾ ಮಾಡಬೇಕು ಅನ್ನೋದು ಅವರ ಹಲವು ವರ್ಷದ ಕನಸು. ಅದು ಈಗ ಈಡೇರಿದೆ’ ಎಂದರು ಶಿವರಾಜ್‌ಕುಮಾರ್.

‘ದ್ರೋಣ ಸಿನಿಮಾದಲ್ಲಿ ಸಾಮಾಜಿಕ ಕಳಕಳಿಯ ಕಥಾವಸ್ತು ಇದೆ. ಶಿವಣ್ಣ ಅವರ ಅಭಿಮಾನಿಗಳಿಗೆ ಬೇಕಿರುವ ಕಮರ್ಷಿಯಲ್ ಅಂಶಗಳು ಇವೆ. ಹಾಸ್ಯ, ಆ್ಯಕ್ಷನ್ ಮತ್ತು ಸೆಂಟಿಮೆಂಟ್‍ ಅನ್ನು ಕಥೆಯಲ್ಲಿ ಬ್ಲೆಂಡ್ ಮಾಡಲಾಗಿದೆ’ ಎಂದರು ನಿರ್ದೇಶಕ ಪ್ರಮೋದ್ ಚಕ್ರವರ್ತಿ.

ಬಿ. ಮಹದೇವ ಮತ್ತು ಬಿ. ಸಂಗಮೇಶ್‌ ಮತ್ತು ಶೇಷು ಚಕ್ರವರ್ತಿ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ. ಜೆ.ಎಸ್. ವಾಲಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಬಸವರಾಜ್ ಅರಸ್ ಸಂಕಲನವಿದೆ. ವಿ. ನಾಗೇಂದ್ರ ಪ್ರಸಾದ್ ಮತ್ತು ಅರಸು ಅಂತಾರೆ ಅವರ ಗೀತ ಸಾಹಿತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.