ಬೆಂಗಳೂರು: ಡ್ರಗ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ (30) ಅವರನ್ನು ಶುಕ್ರವಾರ ಬಂಧಿಸಿರುವ ಸಿಸಿಬಿ ಪೊಲೀಸರು, ನಟಿ ಸಂಜನಾ ಗಲ್ರಾನಿ ಅವರ ಆಪ್ತ ಎನ್ನಲಾದ ರಾಹುಲ್‌ನನ್ನೂ ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.
ಕಲ್ಯಾಣನಗರದ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು, ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ, ಡ್ರಗ್ ವಿರುದ್ಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಅಂತರರಾಷ್ಟ್ರೀಯ ಡ್ರಗ್ ಜಾಲವನ್ನೇ ಭೇದಿಸಿದ್ದಾರೆ.
ಈ ಜಾಲದ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣದಡಿ ರಾಗಿಣಿ ಸ್ನೇಹಿತ ರವಿಶಂಕರ್‌ನನ್ನು ಗುರುವಾರ ಬಂಧಿಸಲಾಗಿತ್ತು. ಪೊಲೀಸರಿಗೆ ಹೇಳಿಕೆ ನೀಡಿದ್ದ ಆತ, ರಾಗಿಣಿ ಹೆಸರು ಉಲ್ಲೇಖಿಸಿದ್ದ. ಈ ಬೆಳವಣಿಗೆ ಮಧ್ಯೆಯೇ ಸಾರಿಗೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನಾಗಿರುವ ರವಿಶಂಕರ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಮಾರಾಟಗಾರನಾದ ವ್ಯಸನಿ:ಬಂಧಿತ ಉದ್ಯಮಿ ರಾಹುಲ್, ಡ್ರಗ್ ವ್ಯಸನಿ. ಪೆಡ್ಲರ್‌ಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆತ, ತನ್ನದೇ ತಂಡ ಕಟ್ಟಿಕೊಂಡು ಡ್ರಗ್ ಸರಬರಾಜು ಸಹ ಮಾಡುತ್ತಿದ್ದನೆಂದು ಗೊತ್ತಾಗಿದೆ. ರಾಹುಲ್ ಜೊತೆಯಲ್ಲಿ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದ ಆರೋಪದಡಿ ನಟಿ ಸಂಜನಾ ಅವರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.
ರಾಗಿಣಿ ಮನೆ ಮೇಲೆ ದಾಳಿ: ಶುಕ್ರವಾರ ಬೆಳಿಗ್ಗೆ 6ರ ಸುಮಾರಿಗೆ ಯಲಹಂಕದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿರುವ ರಾಗಿಣಿ ಫ್ಲ್ಯಾಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದರು.
ಈ ವೇಳೆ ರಾಗಿಣಿ ಮನೆಯಲ್ಲಿ ಇದ್ದರು. ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದರು. ತಪಾಸಣೆ ಬಳಿಕ ಅವರನ್ನು ವಶಕ್ಕೆ ಪಡೆದ ಪೊಲೀಸರು, ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದರು. ಬಳಿಕ ಅವರನ್ನು ಬಂಧಿಸಿದರು.
‘ನ್ಯಾಯಾಲಯದ ವಾರಂಟ್ ಪಡೆದು ದಾಳಿ ಮಾಡಲಾಗಿದೆ. ತನಿಖೆ ದೃಷ್ಟಿಯಿಂದ ಹೆಚ್ಚು ಮಾಹಿತಿಯನ್ನು ಬಹಿರಂಗವಾಗಿ ಹೇಳಲಾಗದು’ ಎಂದು ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.