ADVERTISEMENT

ಪರಭಾಷಾ ಸಿನಿಮಾಗಳ ಡಬ್ಬಿಂಗ್: ಸಂಭಾಷಣೆಯೇ ಜೀವಾಳ- ಸಂಭಾಷಣೆಕಾರ ಪ್ರವೀಣ ಚಿತ್ತಾಪೂರ

ರಶ್ಮಿ ಕಾಸರಗೋಡು
Published 1 ನವೆಂಬರ್ 2019, 11:30 IST
Last Updated 1 ನವೆಂಬರ್ 2019, 11:30 IST
ಪ್ರವೀಣ ಚಿತ್ತಾಪೂರ
ಪ್ರವೀಣ ಚಿತ್ತಾಪೂರ   

ಹಾಲಿವುಡ್‌ನ ಟರ್ಮಿನೇಟರ್ ಸಿನಿಮಾ ಕನ್ನಡಕ್ಕೆ ಡಬ್ ಆಗಿದೆ. ಮಾಲ್ಗುಡಿ ಡೇಸ್ ಕನ್ನಡಕ್ಕೆ ಡಬ್ ಆಗಬೇಕೆಂದು ಕಳೆದ 7-8 ವರ್ಷಗಳಿಂದ ಬೇಡಿಕೆ ಇತ್ತು. ಇದೀಗ ಕನ್ನಡದಲ್ಲಿ ಮಾಲ್ಗುಡಿ ಡೇಸ್ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಸೈ ರಾ ನರಸಿಂಹ ರೆಡ್ಡಿ ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆಯಾಗಿತ್ತು . ಶೇ. 70 ರಷ್ಟು ಜನ ಈ ಚಿತ್ರ ನೋಡಲು ಬಂದಿದ್ದರು. ಇದು ಒಳ್ಳೆಯ ಬೆಳವಣಿಗೆ. ಇದಕ್ಕಿಂತ ಮುನ್ನಡಿಯರ್ ಕಾಮ್ರೇಡ್ ಸಿನಿಮಾ ಬಿಡುಗಡೆಯಾಗಿತ್ತು. ಅದು ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆಯಾಗಿರಲಿಲ್ಲ. ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆದಾಗ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಅಂತಾರೆ ಬನವಾಸಿ ಬಳಗದ ಕನ್ನಡ ಹೋರಾಟಗಾರ ಅರುಣ್ ಜಾವಗಲ್.

ಇತರ ಭಾಷೆಗಳ ಸಿನಿಮಾಗಳು ಕನ್ನಡಕ್ಕೆ ಡಬ್ ಆಗುವಾಗ ಅಲ್ಲಿನ ಸಂಭಾಷಣೆಗಳು ಅಷ್ಟೇ ಚುರುಕಾಗಿರಬೇಕು. ಇನ್ನೊಂದು ಭಾಷೆಯ ಸೊಗಡನ್ನು ತಮ್ಮ ಭಾಷೆಗೆ ಕಟ್ಟಿಕೊಡುವ ಸಾಮರ್ಥ್ಯ ಅಲ್ಲಿರಬೇಕು. ಸೈ.ರಾ ನರಸಿಂಹ ರೆಡ್ಡಿ ಸಿನಿಮಾದ ಕನ್ನಡ ಅವತರಣಿಕೆಗಾಗಿ ಸಂಭಾಷಣೆ ಬರೆದ ಪ್ರವೀಣ ಚಿತ್ತಾಪೂರ ತಮ್ಮ ಅನುಭವವನ್ನು ಹಂಚಿಕೊಂಡದ್ದು ಹೀಗೆ

ಸುಮಾರು ಹತ್ತು ವರ್ಷಗಳಿಂದ ಕಥೆ ಕವನ ಹಾಡುಗಳು ಸಂಭಾಷಣೆ ಅಂತ ಬರಿತಾನೆ ಇದ್ರೂ ಡಬ್ಬಿಂಗ್ ಸಂಭಾಷಣೆಯ ಲೋಕಕ್ಕೆ ನಾನು ಬರಬಹುದು ಎಂಬುದರ ಊಹೆಯೂ ನನಗಿರಲಿಲ್ಲ. ಡಬ್ಬಿಂಗ್ ಅಂತ ಬಂದಾಗ ಭಾಷಾ ಜ್ಞಾನ ತುಂಬಾ ಮುಖ್ಯ. ಅದರಲ್ಲೂ ಸಿನೆಮ್ಯಾಟಿಕ್ ಗ್ರಾಮರ್ ಬಗ್ಗೆ ಒಂಚೂರು ಮಾಹಿತಿ ಇರಲೇಬೇಕು. ನನ್ನ ತಾಯಿ ಮೂಲತಃ ತೆಲಂಗಾಣದವರೇ ಆದ್ದರಿಂದ ತೆಲುಗು ಮೊದಲಿಂದಲೂ ಗೊತ್ತು. ಇನ್ನೂ ನಾನು ಓದಿದ್ದು ರಾಯಚೂರಿನಲ್ಲಿ ಆದ್ದರಿಂದ 3 ವರ್ಷಗಳಲ್ಲಿ ಕಮ್ಮಿ ಅಂದರೂ 200 ತೆಲುಗು ಚಿತ್ರಗಳನ್ನ ನೋಡಿದ್ದೆ. ನಾನು ಬರವಣಿಗೆಯಲ್ಲಿ ಆಗಿನಿಂದಲೂ ಆಸಕ್ತಿ ಹೊಂದಿದ್ದರಿಂದ ಎಲ್ಲ ಚಿತ್ರಗಳನ್ನ ಬರವಣಿಗೆಯ ಕೋನದಿಂದಲೇ ಜಾಸ್ತಿ ನೋಡುತಿದ್ದೆ. ತದ ನಂತರ ವೃತ್ತಿಗೋಸ್ಕರ ಹೈದರಾಬಾದಿಗೆ ಬಂದು ಈಗ 9 ವರ್ಷ ಆಗ್ತಾ ಬಂತು. ಹೀಗಾಗಿ ಈ ತೆಲುಗು ಭಾಷೆ ಅನ್ನೋದು ಬೇರಿನಿಂದ ಹಿಡಿದು ಇಲ್ಲಿವರೆಗೆ ನನ್ನ ಜೊತೆಯಲ್ಲೇ ಬಂತು. ಇದೆಲ್ಲಾ ಏಕೆ ಹೇಳ್ತಿದ್ದೀನಿ ಅಂದರೆ ನಾನು ಡಬ್ಬಿಂಗ್ ಡೈಲಾಗ್ ಬರೆಯುವಾಗ ನನಗೆ ಪಟ ಪಟ ಅಂತ ತಲೆ ಓಡಲು ಮೂಲ ಕಾರಣವೇ ಈ ತೆಲುಗು ಭಾಷೆಯ ಹಿನ್ನೆಲೆ.

ADVERTISEMENT

ಮೊದಲಿಗೆ ಡಿಯರ್ ಕಾಮ್ರೇಡ್ ಚಿತ್ರಕ್ಕೆ ಹೃದಯಶಿವ ಅವರು ತರ್ಜುಮೆ ಮಾಡುವುದಕ್ಕಾಗಿ ಕರೆದು ಅವಕಾಶ ನೀಡಿದರು. ಎರಡು ದಿನ ಸಂಪೂರ್ಣವಾಗಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಆ ಚಿತ್ರಕ್ಕಾಗಿ ಕೆಲಸ ಮಾಡಿದೆವು. ಆ ಎರಡು ದಿನದಲ್ಲಿ ಹೃದಯಶಿವ ಅವರಿಂದ ಬರವಣಿಗೆಯ ಸಾಕಷ್ಟು ಪಟ್ಟುಗಳನ್ನ ಕಲಿತೆ. ಮಕ್ಕಿಕಾಮಕ್ಕಿ ತೆಲುಗು ಡೈಲಾಗ್‌ಗಳನ್ನ ಕನ್ನಡಕ್ಕೆ ಬರೆಯದೆ ಕನ್ನಡ ನೇಟಿವಿಟಿಗೆ ತಕ್ಕಂತೆ ಅದೇ ಅರ್ಥ ಭಾವ ಬರುವ ಹಾಗೆ ಬರೆದೆವು , ನಾನೂ ರಶ್ಮಿಕಾ ಅವರ ಎಲ್ಲಾ ಡೈಲಾಗ್‌ ಗಳನ್ನ ಬರೆಯುವಾಗ ಜೊತೆಗಿದ್ದೆ. ತುಂಬಾ ಎಂಜಾಯ್ ಮಾಡಿಕೊಂಡು ತುಂಬಾ ಇಂಪ್ರೋವೈಸ್ ಮಾಡ್ಕೊಂಡು ಬರೆದಿದ್ದೆವು. ಆ ಚಿತ್ರದಲ್ಲಿ ಸಂಭಾಷಣೆ ಕಡಿಮೆ ಆದರೆ ತುಂಬಾ ಭಾವಪೂರ್ಣವಾಗಿ ಬರೆಯಬೇಕಿತ್ತು. ಚಿತ್ರಬಿಡುಗಡೆಯಾದ ನಂತರ ಸಂಭಾಷಣೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು.

ಅದಾದ ಕೆಲ ದಿನಗಳ ನಂತರ ಮೆಗಾಸ್ಟಾರ್ ಚಿರಂಜೀವಿಯವರ "ಸೈರಾ ನರಸಿಂಹರೆಡ್ಡಿ" ಚಿತ್ರದ ಅವಕಾಶ ಸಿಕ್ಕಿತು. ನಮ್ಮ ನೆಲದ ರೈತರಿಂದ ಬ್ರಿಟಿಷರು ಅಮಾನವೀಯವಾಗಿ ಅಮಾನುಷವಾಗಿ ತೆರಿಗೆ ಪಡೆಯುವುದನ್ನ ವಿರೋಧಿಸಿ ಅವರ ವಿರುದ್ಧ ಸಿಡಿದೆದ್ದು ಹಂತಹಂತವಾಗಿ ತನ್ನ ಸುತ್ತಮುತ್ತಲಿನ ಪಾಳೆಗಾರರೆಲ್ಲರನ್ನ ಜೊತೆಗೂಡಿಸಿ ಪ್ರಜೆಗಳನ್ನೇ ಯೋಧರನ್ನಾಗಿಸಿ ಬ್ರಿಟಿಷರ ಹುಟ್ಟಡಗಿಸುವ ವೀರನ ಕಥೆಯದು. ಅದರ ಬಗ್ಗೆ ಆಗಾಗ ಕೇಳ್ತಾನೆ ಇದ್ದೆ ಆದರೆ ಆ ಚಿತ್ರದ ಡಬ್ಬಿಂಗ್ ಸಂಭಾಷಣೆ ಬರಿಬೇಕು ಅಂತ ಬಂದಾಗ ನಿಜವಾಗಲೂ ರೋಮಾಂಚನವಾಗಿತ್ತು. ಜೋಷಿ ಸರ್ ನನಗೆ ಫೋನಿನಲ್ಲಿ ಈ ಅವಕಾಶದ ಬಗ್ಗೆ ಮಾತಾಡುತ್ತಾ ಚಿತ್ರದ ಹೆಸರು ಹೇಳುತ್ತೆನೆ ಗಾಬರಿಯಾಗದೆ ನಿಧಾನವಾಗಿ ಕೇಳು ಅಂತ ಹೇಳಿದ್ದರು.

ಸ್ವಾತಂತ್ರ್ಯ ಪೂರ್ವದ ಕಥೆಯಾಗಿದ್ದರಿಂದ ಆ ಕಾಲದ ಭಾಷೆ ಪದ ಬಳಕೆ ಪಾಳೆಗಾರರು ಬಳಸುವ ಗ್ರಾಮ್ಯ ಭಾಷೆ ಇವೆಲ್ಲವುದರ ಬಗ್ಗೆ ಒಂದಿಡಿ ರಾತ್ರಿ ಮಲಗದೆ ಎಚ್ಚರವಿದ್ದು ತಯಾರಿ ಮಾಡಿಕೊಂಡಿದ್ದೆ. ಮರುದಿನ ಚಿರಂಜೀವಿಯವರ ಆಫೀಸಲ್ಲಿ ಮೊದಲ ಹೆಜ್ಜೆ ಇಟ್ಟಾಗ ಆ ತಾಯಿ ಶಾರದೆಯಲ್ಲಿ ಮನಸಾರೆ ಬೇಡಿಕೊಂಡಿದ್ದು ಈ ಚಿತ್ರಕ್ಕೆ ನಮ್ಮಿಂದ ಸಶಕ್ತವಾಗಿ ಕನ್ನಡ ಸಂಭಾಷಣೆ ಬರೆಸು ತಾಯೇ ಎಂದು. ಅಲ್ಲಿ ಚಿರಂಜೀವಿಯವರ ಮೊದಲ ಚಿತ್ರದಿಂದ ಹಿಡಿದು 150 ನೇ ಚಿತ್ರದವರೆಗಿನ ಅವರು ನಿರ್ವಹಿಸಿದ ಪಾತ್ರಗಳ ಚಿತ್ರಗಳಿದ್ದವು. ಒಂದ್ಸಲ ಎಲ್ಲವನ್ನೂ ನೋಡಿ ಮನಸಲ್ಲೇ ಮೆಗಾಸ್ಟಾರಗೊಂದು ಹ್ಯಾಟ್ಸಾಫ್ ಹೇಳಿ ನಮ್ಮ ಸಂಭಾಷಣೆ ತಂಡವನ್ನ ಅಂದರೆ ನಾನು, ವರದರಾಜ್ ಆಜಾದ್ ಅವರು ಹಾಗು ಜೋಷಿ ಸರ್ ಅವರನ್ನ ಸೇರಿಕೊಂಡೆ. ಪಾಳೆಗಾರರೆಲ್ಲರನ್ನ ಊರ ಜಾತ್ರೆಗೆಂದು ಕರೆದು ಅವರನ್ನು ಒಂದೆಡೆ ಸೇರಿಸಿ, ನೆರೆದಿದ್ದ ಜನರಲ್ಲಿ ನಾವು ನೀವು ಸಮಾನ ಎಂಬ ಭಾವ ಮೂಡಿಸುವ ಹಾಡಿನೊಂದಿಗೆ ನನ್ನ ಬರವಣಿಗೆ ಆರಂಭವಾಯ್ತು. ಐತಿಹಾಸಿಕ ಚಿತ್ರವಾದ್ದರಿಂದ ನಮ್ಮಲ್ಲಿ ಅದಕ್ಕೆ ತಕ್ಕನಾದ ಸಮಾನಾರ್ಥ ಸೂಚಿಸುವ ಪದಗಳ ಭಂಡಾರವೇ ಬೇಕಿತ್ತು. ಒಬ್ಬರಿಗೊಬ್ಬರು ಮಾತನಾಡುತ್ತಾ ಒಂದಕ್ಕೆ ಹತ್ತು ಪದಗಳನ್ನ ಹೆಕ್ಕಿ ತಂದು ಬರೆಯುತ್ತಾ ಕುಳಿತೆವು. ಪ್ರತಿಯೊಂದು ಪದಗಳನ್ನ ಬರೆವಾಗಲೂ ನಾವು ಬರೆಯುತ್ತಿರುವುದು ಬರಿ ನಮಗಷ್ಟೇ ಅಲ್ಲಾ ಕೊಟ್ಯಂತರ ಅಭಿಮಾನಿಗಳ ಕಣ್ಮಣಿಯ ಕಮ್ ಬ್ಯಾಕ್ ಚಿತ್ರ ಎಂಬುದನ್ನ ತಲೆಯಲ್ಲಿಟ್ಟುಕೊಂಡು ಬರೆಯುತ್ತಾ ಹೋದೆವು. ಪದಗಳೊಂದಿಗೆ, ರೂಪಕಗಳೊಂದಿಗೆ ಆಟವಾಡಲೂ ಯಥೇಚ್ಛ ಅವಕಾಶವಿರುವ ಚಿತ್ರವಾಗಿದ್ದರಿಂದ ತುಂಬಾ ಆನಂದದಿಂದ ಸಂಭಾಷಣೆಯನ್ನು ಬರೆದೆವು. ಚಿತ್ರ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಕಾಣುತ್ತಾ ಇದೆ. ವಿಶೇಷವಾಗಿ ಕನ್ನಡದಲ್ಲಿ ಈ ಚಿತ್ರ ನೋಡಿದವರೆಲ್ಲಾ ಇದನ್ನ ಇಷ್ಟಪಟ್ಟಿದ್ದಾರೆ.

ನನಗೆ ಇನ್ನೊಂದು ತುಂಬಾ ತುಂಬಾ ಸಂತೋಷದ ಸಂಗತಿ ಎಂದರೆ ಒಂದೇ ಚಿತ್ರದ ಮೂಲಕ ಮೆಗಾಸ್ಟಾರ್ ಚಿರಂಜೀವಿ, ಬಿಗ್ ಬಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ವಿಜಯ್ ಸೇತುಪತಿ ಮತ್ತೆ ಅಖಾಡಕ್ಕಿಳಿದ ಜಗಪತಿ ಬಾಬು , ಭೋಜ್ ಪುರಿ ಸ್ಟಾರ್ ರವಿಕಿಶನ್, ರಘು ಬಾಬು ನಟಿಯರಾದ ನಯನತಾರಾ, ತಮನ್ನಾ ಇವರೆಲ್ಲರಿಗೂ ಡೈಲಾಗ್ ಬರೆಯುವ ಸದಾವಕಾಶ ಸಿಕ್ಕಿದ್ದು.

ನಾಲ್ಕು ದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಶ್ರದ್ಧೆಯಿಂದ ಈ ಚಿತ್ರಕ್ಕಾಗಿ ಸಂಭಾಷಣೆ ಬರೆದೆ. ಬರೆಯುವಾಗಲೇ ಚಿತ್ರದ ದೃಶ್ಯಗಳು ರೋಮಾಂಚನಗೊಳಿಸುತಿದ್ದವು. ಕಣ್ಣೀರು ಬರೆಸುತಿದ್ದವು. ನಾವೇ ಆವೇಶಕ್ಕೊಳಗಾಗುತ್ತಾ ಇದ್ದೆವು. ಇಂಥ ಒಂದು ಐತಿಹಾಸಿಕ ಚಿತ್ರಕ್ಕೆ ಸಂಭಾಷಣೆ ಬರೆಯಲು ನನಗೆ ಅವಕಾಶ ನೀಡಿದ ಜೋಷಿ ಸರ್, ಆಜಾದ್ ವರದರಾಜ್ ಹಾಗೂ ಚಿತ್ರ ತಂಡಕ್ಕೆ ನಾನು ಋಣಿ. ನನಗೆ ವೈಯಕ್ತಿಕವಾಗಿ ಖುಷಿ ಏನೆಂದರೆ ನಾನೂ ಹೈದರಾಬಾದಿನಲ್ಲಿದ್ದುಕೊಂಡು ನನ್ನ ಕೈಲಾದಷ್ಟು ಕನ್ನಡ ಸೇವೆ ಮಾಡುತ್ತಿದ್ದೆ ಆದರೆ ಆ ಕನ್ನಡ ಭಾಷೆ ನನಗೆ ಅದೇ ಹೈದರಾಬಾದಿನಲ್ಲೇ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಭಾಗ್ಯ ತಂದುಕೊಟ್ಟಿದ್ದು. ಕನ್ನಡಕ್ಕಾಗಿ ಕೈ ಎತ್ತು ಅದು ನಿನ್ನ ತಲೆ ಎತ್ತುವಂತೆ ಮಾಡುತ್ತೆ ಎಂಬುದು ನನ್ನ ಪಾಲಿಗೆ ಅಕ್ಷರಶಃ ನಿಜವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.