ಬಾಲಿವುಡ್ ಬಾದ್‌ಶಾ ಶಾರುಕ್ ಖಾನ್ ಅಭಿನಯದ 'ಡಂಕಿ' ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿದ್ದು, ಬೆಳ್ಳಿತೆರೆ ಮೇಲೆ ದೂಳೆಬ್ಬಿಸಲು ತಯಾರಾಗಿವೆ. ಪ್ರೇಕ್ಷಕ ಪ್ರಭು ಯಾವ ಸಿನಿಮಾಕ್ಕೆ ಮಣೆ ಹಾಕಲಿದ್ದಾನೆ ಎಂಬುವುದು ಕುತೂಹಲಕಾರಿಯಾಗಿದೆ.
2018ರಂದು ಇದೇ ದಿನ (ಡಿ.21) ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್(ಭಾಗ 1) ಬಿಡುಗಡೆಯಾಗಿದ್ದು, ಈ ಸಮಯದಲ್ಲಿ ಶಾರುಕ್ ಖಾನ್ ಅಭಿನಯದ 'ಝೀರೋ' ಸಿನಿಮಾ ಕೂಡ ಬಿಡುಗಡೆಗೊಂಡಿತ್ತು. ಐದು ವರ್ಷದ ನಂತರ ಇದೀಗ ಮತ್ತೆ ಈ ಇಬ್ಬರ ಸಿನಿಮಾಗಳು ಪೈಪೋಟಿಗೆ ನಿಂತಿವೆ.
ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದ ನಡುವೆ ತತ್ತರಿಸಿ ಹೋಗಿದ್ದ ಬಾಲಿವುಡ್‌ಗೆ ಪಠಾಣ್ ಹಾಗೂ ಜವಾನ್ ಸಿನಿಮಾಗಳ ಮೂಲಕ ಜೀವಜಲದಂತೆ ಕಾಣಿಸಿದ್ದ ಶಾರುಕ್ ಮೇಲೆ ಈ ಬಾರಿಯೂ ಅದೇ ನಿರೀಕ್ಷೆ ಇದೆ. ಸಾಲು ಸಾಲಾಗಿ ಮಕಾಡೆ ಮಲಗುತ್ತಿರುವ ಬಾಲಿವುಡ್ ಸಿನಿಮಾಗಳ ನಡುವೆ ಇತ್ತೀಚೆಗೆ ತೆರೆಕಂಡ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್' ಮಾತ್ರ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದೆ.
ಎರಡು ಆ್ಯಕ್ಷನ್ ಸಿನಿಮಾಗಳ ಯಶಸ್ಸಿನಲ್ಲಿ ತೇಲಾಡುತ್ತಿರುವ ಶಾರುಕ್, ಇದೀಗ ವಿಭಿನ್ನ ಕಥಾಹಂದರವಿರುವ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಸ್ಯಪ್ರಧಾನವಾಗಿರುವ ಕಥೆಯನ್ನು ಹೊಂದಿರುವ ಡಂಕಿ ಸಿನಿಮಾದ ಟ್ರೇಲರ್ ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನು ಪಡೆದಿದೆ. ಇಂದು (ಡಿ.21) ತೆರೆಗೆ ಬರಲಿರುವ ಈ ಸಿನಿಮಾದ ಮೇಲೆ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.
ಕೆಜಿಎಫ್ ಯಶಸ್ಸಿನ ನಂತರ ಪ್ರಭಾಸ್‌ಗೆ ಆ್ಯಕ್ಷನ್ ಕಟ್ ಹೇಳಿರುವ ಪ್ರಶಾಂತ್ ನೀಲ್ ಸಿನಿಮಾದ ಮೇಲೆ ಜನರಿಗೆ ಸಹಜವಾಗಿಯೇ ಒಂದು ನಿರೀಕ್ಷೆಯಿದೆ. ಬಾಹುಬಲಿ ನಂತರ ಮಂಕಾಗಿದ್ದ ಪ್ರಭಾಸ್ ಸಿನಿ ಭವಿಷ್ಯಕ್ಕೆ ಸಲಾರ್ ಮರುಜೀವ ನೀಡಲಿದೆ ಎಂದೇ ಹೇಳಲಾಗುತ್ತಿದೆ. ನಾಳೆ(ಡಿ.22) ಸಲಾರ್ ಬಿಡುಗಡೆಯಾಗಲಿದೆ.
ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಗಮನಸೆಳೆದಿರುವ ಈ ಎರಡು ಸಿನಿಮಾಗಳ ನಡುವೆ ತೀವ್ರ ಪೈಪೋಟಿ ಇದೆ. ಮುಂಗಡ ಟಿಕೆಟ್ ಕಲೆಕ್ಷನ್‌ನಲ್ಲಿ ಸಲಾರ್ ಸಿನಿಮಾ ಡಂಕಿಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ. ಥಿಯೇಟರ್ ವಿಷಯದಲ್ಲಿಯೂ ಡಂಕಿ ಸಿನಿಮಾಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬ ಆರೋಪವು ಕೇಳಿಬಂದಿತ್ತು. ಈ ನಡುವೆ ದಕ್ಷಿಣ ಭಾರತದ ಸಿನಿ ಪ್ರಿಯರು ಸಲಾರ್ ನೆಚ್ಚಿಕೊಂಡರೆ, ಹಿಂದಿ ರಾಜ್ಯಗಳಲ್ಲಿ ಡಂಕಿ ಹೆಚ್ಚು ಸದ್ದು ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಕ್ರಿಸ್‌ಮಸ್ ರಜಾದ ನಡುವೆ ಇಬ್ಬರು ಸಿನಿ ದಿಗ್ಗಜರ ಸಿನಿಮಾಗಳು ಬಿಡುಗಡೆಗೊಂಡಿರುವುದು ಸಿನಿ ಪ್ರಿಯರ ಉತ್ಸಾಹ ಹೆಚ್ಚಿಸಿದೆ.
ಶಾರುಕ್ ಜನಪ್ರಿಯತೆ ನಡುವೆ ಮಂಕಾದ ಹಿರಾನಿ
ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಡಂಕಿ ಸಿನಿಮಾ, ನಾಯಕ ನಟನಷ್ಟೇ ನಿರ್ದೇಶಕನ ಕಾರಣಕ್ಕೂ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಮುನ್ನಾಭಾಯ್ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯ್, ತ್ರೀ ಇಡಿಯೆಟ್ಸ್, ಪಿಕೆ ಹಾಗೂ ಸಂಜು ಮುಂತಾದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ಹಿರಾನಿ, ನಿರ್ದೇಶನದಲ್ಲಿ ಎಂದೂ ಸೋತವರಲ್ಲ. ಪ್ರೇಕ್ಷಕರನ್ನು ನಗಿಸುತ್ತಲೇ ಕುರ್ಚಿಯ ತುದಿಯಲ್ಲಿ ತಂದುಕೂರಿಸಬಲ್ಲ ಕುತೂಹಲ ಮೂಡಿಸುವಂತೆ ಕಥೆ ಹೆಣೆಯುವ ಈ ನಿರ್ದೇಶಕ ಈ ಬಾರಿಯೂ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಕೂಡಾ ಇದೆ. ಶಾರುಕ್ ಜನಪ್ರಿಯತೆಯ ಅಬ್ಬರದ ನಡುವೆ ಡಂಕಿ ವಿಚಾರದಲ್ಲಿ ಅಭಿಮಾನಿಗಳು ಹಿರಾನಿಯವರನ್ನು ಅಷ್ಟಾಗಿ ಗಮನಿಸಿದಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.