ಪ್ಯಾರಿಸ್: ‘ದಿ ರಾಕ್’ ಎಂಬ ಹೆಸರಿನಿಂದಲೇ ಜನಪ್ರಿಯತೆ ಗಳಿಸಿರುವ ಹಾಲಿವುಡ್ ನಟ ಡ್ವೈನ್ ಜಾನ್ಸನ್ ಅವರ ಮೇಣದ ಪ್ರತಿಮೆಯನ್ನು ಪ್ಯಾರಿಸ್‌ನ ಗ್ರೆವಿನ್ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಗಿದ್ದು, ಮೇಣದ ಪ್ರತಿಮೆ ಕಂಡು ಸ್ವತಃ ರಾಕ್ ಅವರೇ ನಿರಾಶೆಗೊಂಡಿದ್ದಾರೆ.
ಪ್ರತಿಮೆಯು ನೈಜತೆಗೆ ದೂರವಾಗಿರುವುದೇ ಅಸಮಾಧಾನಕ್ಕೆ ಕಾರಣವಾಗಿದೆ. ರಾಕ್ ಅವರ ಮೈಬಣ್ಣ ಗೋಧಿ ಬಣ್ಣವಾಗಿದ್ದು, ಪ್ರತಿಮೆಯಲ್ಲಿ ಮೈಬಣ್ಣವನ್ನು ಬಿಳಿ ಮಾಡಲಾಗಿದೆ. ಇದು ರಾಕ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಮೇಣದ ಪ್ರತಿಮೆಯನ್ನು ಸರಿಪಡಿಸುವಂತೆ ರಾಕ್ ಅವರು ಮ್ಯೂಸಿಯಂ ಅಧಿಕಾರಿಗಳಿಗೆ ತಿಳಿಸಿದ್ದಾರೆಂದು ವರದಿಯಾಗಿದೆ.
ರಾಕ್ ಅವರ ಮೇಣ ಪ್ರತಿಮೆಯ ವಿಡಿಯೊವನ್ನು ಹಂಚಿಕೊಂಡಿರುವ ಜೇಮ್ಸ್ ಆಂಡ್ರೆ ಜೆಫರ್ಸನ್ ಜೂನಿಯರ್, ಮ್ಯೂಸಿಯಂ ವಿರುದ್ಧ ಕಿಡಿಕಾರಿದ್ದಾರೆ. ‘ಪ್ರತಿಮೆಯನ್ನು ಕಂಡರೆ ರಾಕ್ ಅವರು ಜೀವನದಲ್ಲಿ ಸೂರ್ಯನನ್ನೆ ನೋಡಿಲ್ಲ ಎನ್ನುವ ಹಾಗೆ ನಿರ್ಮಿಸಲಾಗಿದೆ. ಪ್ರತಿಮೆ ನಿರ್ಮಾಣ ಮಾಡುವ ಮೊದಲು ಗೂಗಲ್‌ನಲ್ಲಿ ರಾಕ್ ಅವರ ಚಿತ್ರವನ್ನು ನೋಡಿಕೊಳ್ಳಬಹುದಿತ್ತು. ಪ್ರತಿಮೆ ನೋಡಿದರೆ ರಾಕ್ ರಾಜಮನೆತನದಲ್ಲಿ ಹುಟ್ಟಿರುವಂತೆ ಕಾಣುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.
ಜೆಫರ್ಸನ್ ಅವರ ವಿಡಿಯೊವನ್ನು ರಾಕ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ತಂಡ ಮ್ಯೂಸಿಯಂ ತೆರಳಿ ಈ ವಿಷಯವನ್ನು ಅಲ್ಲಿನ ತಂಡಕ್ಕೆ ಮನವರಿಕೆ ಮಾಡಿದೆ. ಮೇಣದ ಪ್ರತಿಮೆಯನ್ನು ಬದಲಾವಣೆ ಮಾಡಲು ತಿಳಿಸಿದ್ದೇನೆ. ಮೊದಲು ಮೈಬಣ್ಣ ಸರಿಪಡಿಸಲು ಕೋರಿದ್ದೇನೆ’ ಎಂದು ರಾಕ್ ತಿಳಿಸಿದ್ದಾರೆ.
ಅಕ್ಟೋಬರ್ 16ರಂದು ರಾಕ್ ಅವರ ಮೇಣದ ಪ್ರತಿಮೆಯನ್ನು ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.