ಬೆಂಗಳೂರು: ಕನ್ನಡದ ವಿಕ್ರಾಂತ್ ರೋಣ ಸಿನಿಮಾದಲ್ಲಿ ‘ರಾ ರಾ ರುಕ್ಕಮ್ಮ‘ ಹಾಡಿಗೆ ಹೆಜ್ಜೆ ಹಾಕಿ ಮಿಂಚಿದ್ದ ನಟಿಜಾಕ್ವೆಲಿನ್ ಫರ್ನಾಂಡಿಸ್ ₹ 200 ಕೋಟಿ ಅಕ್ರಮ ಹಣ ವರ್ಗಾವಣೆ ಹಾಗೂವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಪ್ರಕರಣದಲ್ಲಿಜಾಕ್ವೆಲಿನ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ)ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ಏನು?
ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ. ಉದ್ಯಮಿಯೊಬ್ಬರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉದ್ಯಮಿ ಮಾನವೀಂದರ್ ಸಿಂಗ್ ಜೈಲಿನಲ್ಲಿ ಇರುವ ವಿಷಯ ತಿಳಿದಿದ್ದಸುಕೇಶ್ ಚಂದ್ರಶೇಖರ್, ಉದ್ಯಮಿ ಪತ್ನಿಯ ಬಳಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸುವುದಾಗಿ ಹೇಳಿ ₹ 200 ಕೋಟಿ ಪಡೆದುಕೊಂಡು ವಂಚಿಸಿದ್ದ. ಇದರಲ್ಲಿ ₹ 10 ಕೋಟಿಯನ್ನು ಜಾಕ್ವೆಲಿನ್ ಫರ್ನಾಂಡಿಸ್‌ಗೆ ಉಡುಗೊರೆ ನೀಡಿದ್ದನು.
ನಾನು ಗೃಹ ಇಲಾಖೆಯ ಅಧಿಕಾರಿ, ನನಗೆ ರಾಜಕಾರಣಿಗಳು, ಬಾಲಿವುಡ್ ನಟ, ನಟಿಯರ ಜೊತೆ ನಿಕಟ ಸಂಪರ್ಕವಿದೆ ಎಂದು ಹೇಳಿ ಉದ್ಯಮಿ ಮಾನವೀಂದರ್ ಸಿಂಗ್ ಪತ್ನಿಯನ್ನು ನಂಬಿಸಿದ್ದ. ಅವರಿಂದ ₹200 ಕೋಟಿ ಪಡೆದು ವಂಚನೆ ಮಾಡಿದ್ದ. ಈ ಸಂಬಂಧ ಮಾನವೀಂದರ್ ಸಿಂಗ್ ಪತ್ನಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಇದು ದೊಡ್ಡ ಮೊತ್ತದ ಪ್ರಕರಣವಾಗಿದ್ದರಿಂದ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಿದ್ದರು.
ಇ.ಡಿ ಅಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಬುಧವಾರ ಜಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.ಸದ್ಯ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿಯನ್ನಾಗಿ ಇ.ಡಿ ಹೆಸರಿಸಿದೆ.
ಈ ಹಿಂದೆ ಇ.ಡಿ ಅಧಿಕಾರಿಗಳು ಜಾಕ್ವೆಲಿನ್ ಅವರನ್ನು ಹಲವು ಸಲ ವಿಚಾರಣೆಗೆ ಒಳಪಡಿಸಿದ್ದರು. ‘ನನಗೂ ಸುಕೇಶ್ ವಂಚನೆಗೂ ಯಾವುದೇ ಸಂಬಂಧ ಇಲ್ಲ, ಅವನು ನನಗೆ ಉಡುಗೊರೆ ನೀಡಿರುವುದು ನಿಜ, ಆದರೆ ಅವನ ವಂಚನೆ ಹಿನ್ನೆಲೆ ಗೊತ್ತಿಲ್ಲದಿದ್ದರಿಂದ ಗಿಫ್ಟ್‌ಗಳನ್ನು ಸ್ವೀಕರಿಸಿದ್ದೆ‘ ಎಂದು ಜಾಕ್ವೆಲಿನ್ ಅಧಿಕಾರಿಗಳ ಮುಂದೆ ಹೇಳಿದ್ದರು.
ಜಾಕ್ವೆಲಿನ್ ಫರ್ನಾಂಡಿಸ್‌ಗೆ ಬಿಎಂಡಬ್ಲ್ಯು ಕಾರ್, ದುಬಾರಿ ಬೆಲೆ ಬಾಳುವ ವಾಚ್,ಡೈಮೆಂಡ್ ಬ್ರಾಸಲೆಟ್ ಅನ್ನು ಗಿಫ್ಟ್ ನೀಡಿದ್ದ. ಜಾಕ್ವೆಲಿನ್ ಮಾತ್ರವಲ್ಲದೇ, ಸಾರಾ ಅಲಿಖಾನ್, ಜಾಹ್ನವಿ ಕಪೂರ್ ಅವರಿಗೂ ಸುಕೇಶ್ ಗಿಫ್ಟ್ ಕೊಟ್ಟಿದ್ದಾನೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.