ಮುಂಬೈ: ‘ಪನಾಮಾ ಪೇಪರ್ಸ್’ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗುವಂತೆ ಐಶ್ವರ್ಯಾ ರೈ ಅವರಿಗೆ ಸೂಚಿಸಲಾಗಿದೆ.
‘ಐಶ್ವರ್ಯಾ ರೈ ಅವರಿಗೆ ಇಂದು (ಡಿಸೆಂಬರ್ 20) ಸಮನ್ಸ್ ನೀಡಿದ್ದೇವೆ. ಈವರೆಗೆ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಐಶ್ವರ್ಯಾ ಅವರ ಮುಂಬೈಯ ನಿವಾಸಕ್ಕೆ ಸಮನ್ಸ್ ಕಳುಹಿಸಿಕೊಡಲಾಗಿದೆ’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಶ್ವರ್ಯಾ ಅವರು ತನಿಖೆಗೆ ಸಹಕರಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಜಾರಿ ನಿರ್ದೇಶನಾಲಯ ಯೋಚಿಸಲಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿ ಹೇಳಿದ್ದಾರೆ.
ಐಶ್ವರ್ಯಾ ಅವರಿಗೆ ಈಗಾಗಲೇ ಎರಡು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಅವರು ತನಿಖೆಗೆ ಹಾಜರಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯ ದಾಖಲಿಸಿಕೊಳ್ಳಲು ಅವರಿಗೆ ನವೆಂಬರ್ 9ರಂದು ಸಮನ್ಸ್ ನೀಡಲಾಗಿತ್ತು.
‘ಪನಾಮಾ ಪೇಪರ್ಸ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 2016ರಿಂದ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.