ನಟ ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಹಾಗು ಜರ್ನಿಮ್ಯಾನ್ ಫಿಲಂಸ್ ಜಂಟಿಯಾಗಿ ನಿರ್ಮಾಣ ಮಾಡಿರುವ ಕನ್ನಡ ವೆಬ್‌ಸರಣಿ ‘ಏಕಂ’ ಜುಲೈ 13ರಂದು ಬಿಡುಗಡೆಯಾಗಲಿದೆ.
ಪ್ರಕಾಶ್ ರಾಜ್ ಹಾಗೂ ರಾಜ್ ಬಿ.ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಸರಣಿಯು ‘ekamtheseries.com’ನಲ್ಲಿ ಲಭ್ಯವಾಗಲಿದೆ. ‘ಎಲ್ಲ ಒಟಿಟಿ ವೇದಿಕೆಗಳಿಂದ ನಾವು ತಿರಸ್ಕರಿಸಲ್ಪಟ್ಟೆವು. ಏಕೆಂದರೆ ‘ಏಕಂ’ ಒಂದು ಕನ್ನಡ ವೆಬ್‌ಸರಣಿಯಾಗಿದೆ. ನಮ್ಮ ನಾಡಿನ ಸೊಗಡು ಇರುವ ಕಥೆಗಳನ್ನು ಹೇಳಬೇಕು, ಅದೇ ಕಥೆಗಳು ನಮ್ಮ ನಾಡಿನ ಹೊರಗಿರುವ ಜನರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ತಮ್ಮದೇ ವೇದಿಕೆ ಸೃಷ್ಟಿಸಿಕೊಂಡೆವು’ ಎನ್ನುತ್ತಾರೆ ಸರಣಿಯ ಕರ್ತೃಗಳಲ್ಲಿ ಒಬ್ಬರಾದ ಸುಮಂತ್ ಭಟ್. 149 ರೂ. ನೀಡಿ ಈ ಸರಣಿಯ ಎಲ್ಲ ಸಂಚಿಕೆಗಳನ್ನು ಜನರು ವೀಕ್ಷಿಸಬಹುದು.
2020ರಲ್ಲಿ ಪಯಣ ಆರಂಭ
ಈ ವೆಬ್‌ಸರಣಿ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಕ್ಷಿತ್ ಶೆಟ್ಟಿ, ‘2020 ಜನವರಿ ಅಥವಾ ಫೆಬ್ರುವರಿ. ನೆನಪು ಮಬ್ಬಾಗಿದೆ! ಪರಂವಃ ಹಾಗು ಜರ್ನಿಮ್ಯಾನ್ ಫಿಲಂಸ್ ಒಟ್ಟಿಗೆ ‘ಏಕಂ’ ಮಾಡಲು ಹೊರಟಿದ್ದು. ಏನೋ ಹೊಸತೊಂದನ್ನು ಮಾಡುವ ಉತ್ಸಾಹ ನಮ್ಮಲ್ಲಿ. ಕನ್ನಡದಲ್ಲೊಂದು ವೆಬ್ ಸರಣಿ ಹೊರ ಬರಲು ಇದೇ ಸೂಕ್ತ ಸಮಯ ಎಂದೆನಿಸಿತ್ತು. ಆದರೆ ಅದೇ ಸಮಯಕ್ಕೆ ಕೋವಿಡ್ ಬಂತು. ಜಗತ್ತೇ ತಲೆ ಕೆಳಗಾದ ಸಮಯ. ನಮ್ಮಲ್ಲೂ ಆತಂಕ, ಅನಿಶ್ಚಿತತೆ. ಆದರೂ ಹಿಂದೆ ಸರಿಯದೆ ಮುನ್ನುಗ್ಗಿದೆವು. 2021ರ ಅಕ್ಟೋಬರ್‌ನಲ್ಲಿ ‘ಏಕಂ’ನ ಫೈನಲ್ ಕಟ್ ನೋಡಿದೆ. ಖುಷಿ ಆಯಿತು. ಹೆಮ್ಮೆ ಎನಿಸಿತು. ಇದನ್ನು ಜಗತ್ತಿಗೆ ತೋರಿಸಬೇಕೆನಿಸಿತು. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷಗಳು. ‘ಏಕಂ’ ಅನ್ನು ಹೊರತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಎಲ್ಲೆಡೆ ನಿರಾಸೆ. ಅದೇ ನೆಪ. ಅದೇ ಸಬೂಬು. ಯಾವುದೇ ಕೃತಿಯ ಅರ್ಹತೆಯನ್ನು ನಿರ್ಧರಿಸುವ ಅವಕಾಶ ಹಾಗೂ ಹಕ್ಕು, ಪ್ರೇಕ್ಷಕರಿಗಿರಬೇಕು ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ‘ಏಕಂ’ ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ. ‘ಏಕಂ’ ನಿಮಗೆ ಇಷ್ಟವಾಗಬಹುದು, ಇಷ್ಟವಾಗದೇ ಇರಬಹುದು. ಆದರೆ ಈ ಪ್ರಯತ್ನವನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.