ಬೆಂಗಳೂರು: ನಟ, ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಮೇಲೆ ಆಂಧ್ರಪ್ರದೇಶದಲ್ಲಿ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ಅಲ್ಲು ಅರ್ಜುನ್ ಅವರು ಆಂಧ್ರಪ್ರದೇಶದ ನಂದ್ಯಾಲ ಕ್ಷೇತ್ರದಿಂದ ವೈಎಸ್‌ಆರ್‌ಸಿಪಿಯ ಅಭ್ಯರ್ಥಿಯಾಗಿರುವ ರವಿಚಂದ್ರ ಕಿಶೋರ್ ರೆಡ್ಡಿ ಅವರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ನಂದ್ಯಾಲಕ್ಕೆ ತೆರಳಿದ್ದರು.
ಈ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳೂ ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.
ಪೂರ್ವಾನುಮತಿಯಿಲ್ಲದೇ ಚುನಾವಣೆ ಸಮಯದಲ್ಲಿ ಇಷ್ಟು ಜನ ಸೇರಿಸುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಅಧಿಕಾರಿಗಳ ಆದೇಶ ಮೇರೆಗೆ ನಂದ್ಯಾಲ ಗ್ರಾಮೀಣ ತಹಶಿಲ್ದಾರ್ ಅವರು ಅಲ್ಲು ಅರ್ಜುನ್ ಹಾಗೂ ರವಿಚಂದ್ರ ಕಿಶೋರ್ ರೆಡ್ಡಿ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗಿರುವುದನ್ನು ನಂದ್ಯಾಲ್ ಗ್ರಾಮೀಣ ತಹಶಿಲ್ದಾರ್ ಅವರು ಖಚಿತಪಡಿಸಿರುವುದಾಗಿ ಇಂಡಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅಲ್ಲು ಅರ್ಜುನ್, ನಾನು ಯಾವುದೇ ಪಕ್ಷದ ಪರ ಅಲ್ಲ. ಕಿಶೋರ್ ರೆಡ್ಡಿ ನನ್ನ ಸ್ನೇಹಿತರಾಗಿರುವುದರಿಂದ ಪ್ರಚಾರಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ.
ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಚಿತ್ರ ಪುಷ್ಪ–ದಿ ರೋಲ್ ಸಿನಿಮಾ ಇದೇ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.
ಆಂಧ್ರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಮೇ 13ರಂದು ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.