* ‘ಕೇಕ್‌ವಾಕ್’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇಕೆ?
ಮುಖ್ಯವಾಗಿ ಕತೆ ಹಾಗೂ ಚಿತ್ರದ ನಿರೂಪಣಾ ಶೈಲಿ. ಈ ರೀತಿಯ ಕತೆ ಈಗಿನ ಸಂದರ್ಭಕ್ಕೆ ಬಹುಮುಖ್ಯ. ವಿವಾಹಿತ ಶೆಫ್ ಒಬ್ಬಳ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಸುತ್ತ ಸಿನಿಮಾ ಕತೆಯಿದೆ.ನಾನು ಶಿಲ್ಪಾಸೇನ್ ಎಂಬ ಮಹಿಳಾ ಶೆಫ್ ಪಾತ್ರ ಮಾಡಿದ್ದೇನೆ. ಆಕೆ ಧೈರ್ಯವಂತೆ ಹಾಗೂ ಪ್ರತಿಭಾನ್ವಿತೆ. ಎಲ್ಲಾ ಮಹಿಳೆಯರಲ್ಲಿ ಬಹುಮುಖ ಪ್ರತಿಭೆಯಿರುತ್ತದೆ. ಅವರಿಗೆ ತಮ್ಮ ಗುರಿ ಸಾಧನೆಗೆ ಸರಿಯಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅಗತ್ಯವಿರುತ್ತದೆ. ಇದು ಸಿಕ್ಕಿಬಿಟ್ಟರೆ ಪರ್ವತವನ್ನೇ ಹತ್ತಿ ಬಿಡುತ್ತಾರೆ. ಈ ಸಿನಿಮಾದಲ್ಲೂ ಇದನ್ನೇ ಹೇಳಿದ್ದೇವೆ.
* ಕಿರುಚಿತ್ರದಲ್ಲಿ ನಟಿಸಿದ್ದೀರಿ. ಹೇಗನ್ನಿಸುತ್ತದೆ?
ಇದು 23 ನಿಮಿಷಗಳ ಸಿನಿಮಾ. ಕಿರುಚಿತ್ರವೊಂದರಲ್ಲಿ ನಾನು ಮೊದಲ ಬಾರಿ ನಟಿಸಿದ್ದೇನೆ. ವಿವಾಹ, ಮಗು ಎಂದು ಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರವುಳಿದಿದ್ದೆ. ವಾಪಸ್ ಬರಲು ಒಂದು ಗಟ್ಟಿ ಕತೆ ಹಾಗೂ ಪಾತ್ರ ಬೇಕಿತ್ತು. ನಿರ್ದೇಶಕ ರಾಮ್ ಕಮಲ್ ಮುಖರ್ಜಿ ಕತೆ ಹೇಳಿದಾಗ ಇಷ್ಟವಾಯಿತು. ನನಗೂ ಮಹಿಳಾ ಕೇಂದ್ರಿತ ಗಟ್ಟಿ ಪಾತ್ರದ ಮೂಲಕ ನಟನೆಗೆ ವಾಪಸ್ಸಾಗಬೇಕು ಎಂಬ ಆಸೆಯಿತ್ತು. ಸರಿಯಾಗಿ ಈ ಕಿರುಚಿತ್ರದ ಅವಕಾಶ ಒದಗಿಬಂತು. ಈಗ ಕಿರುಚಿತ್ರ, ಸಿನಿಮಾ, ಕಿರುತೆರೆ, ವೆಬ್‌ಸಿರೀಸ್‌ಗಳ ಮೂಲಕಕಲಾವಿದರಾದ ನಮಗೆ ನಟನಾ ಚಾತುರ್ಯವನ್ನು ತೋರಿಸುವ ಅವಕಾಶ ಸಿಕ್ಕಿರುವುದು ಉತ್ತಮ ಬೆಳವಣಿಗೆ.
* ಮೂರು ವರ್ಷಗಳಿಂದ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ?
ಮದುವೆಯಾದ ಮೇಲೆ ವೃತ್ತಿಪರ ಬದುಕಿನ ಜೊತೆಗೆ ವೈಯಕ್ತಿಕ ಬದುಕಿಗೂ ಗಮನ ಕೊಡಬೇಕು.ನಾನು ನನ್ನ 18ನೇ ವಯಸ್ಸಿನಿಂದಲೇ ಕೆಲಸ ಮಾಡಲು ಆರಂಭಿಸಿದೆ. ಹಾಗಾಗಿ ಮದುವೆಯಾದಾಗ ಸಿನಿಮಾ, ನಟನೆಯಿಂದ ಕೊಂಚ ಬ್ರೇಕ್ ಬೇಕು ಎನಿಸಿತು. ಕಳೆದ ವರ್ಷ ಮಗುವಾಯಿತು. ಈ ಎಲ್ಲಾ ಕಾರಣಗಳಿಂದ ಬಾಲಿವುಡ್‌ನಿಂದ ಕೊಂಚ ಕಾಲ ದೂರವಾಗಿದ್ದೆ.
ನಿಮ್ಮ ತಂದೆ– ತಾಯಿ ಧರ್ಮೇಂದ್ರ– ಹೇಮಾಮಾಲಿನಿ ಖ್ಯಾತನಟರಾಗಿದ್ದರವರು. ನೀವು ಬಾಲಿವುಡ್‌ಗೆ ಪ್ರವೇಶಿಸಿದಾಗ ಇದು ನಿಮ್ಮ ಮೇಲೆ ಒತ್ತಡ ತಂದಿತ್ತೆ?
ನನ್ನ ಹೆತ್ತವರು ಬಾಲಿವುಡ್‌ನ ದಂತಕತೆಗಳು. ಇಬ್ಬರೂ ಅದ್ಭುತ ನಟರು. ನಾನು ಬೆಳೆದಿದ್ದೇ ಸಿನಿಮಾ ಮತ್ತು ನೃತ್ಯದ ವಾತಾವರಣದಲ್ಲಿ. ಸಣ್ಣ ವಯಸ್ಸಿನಿಂದಲೂ ನಾನು ಸಿನಿಮಾಗಳನ್ನು ನೋಡುತ್ತಾ ಬೆಳೆದೆ. ಹಾಗೇ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿತು. ಆದರೆ ಅಪ್ಪ– ಅಮ್ಮ ಎಂದಿಗೂ ಮಕ್ಕಳ ಮೇಲೆ ಒತ್ತಡ ಹೇರಿಲ್ಲ. ಮೊದಲ ಸಿನಿಮಾಕ್ಕೆ ಆಯ್ಕೆಯಾದಾಗ ನಾನು ಹೇಮಾಮಾಲಿನಿ – ಧರ್ಮೇಂದ್ರ ಮಗಳು ಎಂಬ ನಿರೀಕ್ಷೆ ಇತ್ತು.ಅದನ್ನು ನಾನು ಸಹಜವಾಗಿ ತೆಗೆದುಕೊಂಡೆ. ನಾನು ಆ ವಿಚಾರದಲ್ಲಿ ಗಟ್ಟಿಗಿತ್ತಿ.
* ನಟನೆ ಮತ್ತು ನೃತ್ಯ...ಎರಡರಲ್ಲಿ ನಿಮ್ಮಿಷ್ಟದ ಕ್ಷೇತ್ರ?
ಎರಡೂ ನನಗಿಷ್ಟ. ಅಮ್ಮನೂ ನಟಿ, ನೃತ್ಯಗಾರ್ತಿಯಾಗಿಯೇ ಗುರುತಿಸಿಕೊಂಡವರು. ನನಗೂ ಅದೇ ಆಸೆ. ನಮ್ಮದೇ ನೃತ್ಯ ತಂಡವಿದೆ. ಈಗ ‘ರಾಮಾಯಣ’ ನೃತ್ಯ ರೂಪಕ ಮಾಡುತ್ತಿದ್ದು, ಅದರಲ್ಲಿ ಸೀತಾ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನಾನು ನೃತ್ಯ ಹಾಗೂ ನಟನೆಯನ್ನು ಯಾವಾಗಲೂ ಒಂದೇ ರೀತಿ ನೋಡುತ್ತೇನೆ. ವ್ಯತ್ಯಾಸವಿಲ್ಲ.
* ಈಗ ವೃತ್ತಿಜೀವನ ಹಾಗೂ ಮಗುವಿನ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತೀರಿ?
ನನ್ನ ಎಲ್ಲಾ ಕೆಲಸಕ್ಕೂ ನನ್ನ ಪತಿ ಭರತ್ ತಕ್ತಾನಿ ಹಾಗೂ ಕುಟುಂಬದವರ ಸಂಪೂರ್ಣ ಸಹಕಾರ ಸಿಕ್ಕಿರುವುದು ನನ್ನ ಅದೃಷ್ಟ. ಮುದ್ದಾದ ಮಗು. ಅವಳ ಜವಾಬ್ದಾರಿಯನ್ನು ನಾನಿಲ್ಲದಾಗಮನೆ ಸದಸ್ಯರೇ ತೆಗೆದುಕೊಳ್ಳುತ್ತಾರೆ. ಹಾಗಾಗಿಯೇ ನಾನು ಸಿನಿಮಾ ಚಿತ್ರೀಕರಣ ಹಾಗೂ ಕಾರ್ಯಕ್ರಮಗಳಲ್ಲಿ ಧೈರ್ಯವಾಗಿ ಪಾಲ್ಗೊಳ್ಳುತ್ತೇನೆ.
* ನಿಮ್ಮ ಫಿಟ್‌ನೆಸ್ ರಹಸ್ಯ?
ಆರೋಗ್ಯಕರ ಮನಸ್ಥಿತಿ, ಉತ್ತಮ ಆಲೋಚನೆ ಹಾಗೂ ನನ್ನ ಬಗ್ಗೆ ನನ್ನ ಕಾಳಜಿ.
* ಬೆಂಗಳೂರು ಬಗ್ಗೆ ಹೇಗನ್ನಿಸುತ್ತದೆ?
ನಾನು ಅನೇಕ ಬಾರಿ ಬೆಂಗಳೂರಿಗೆ ಬಂದಿದ್ದೇನೆ. ನನ್ನ ಹಾಗೂ ನನ್ನ ಪತಿಯ ಅನೇಕ ಮಂದಿ ಸ್ನೇಹಿತರು ಇಲ್ಲಿದ್ದಾರೆ. ಆಗಾಗ ಇಲ್ಲಿಗೆ ಬರುತ್ತಿರುತ್ತೇವೆ. ಇಲ್ಲಿನ ಅನೇಕ ಸ್ಥಳಗಳನ್ನು ನಾನು ನೋಡಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.