ADVERTISEMENT

ಸಂದರ್ಶನ | ನಿರ್ದೇಶನದ ಕನಸು ಹೊತ್ತ ಡಾಲಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 0:30 IST
Last Updated 14 ಜೂನ್ 2024, 0:30 IST
ಧನಂಜಯ 
ಧನಂಜಯ    

‘ರತ್ನಾಕರ’, ‘ಶಂಕರ’ ಎಂಬ ಕಾಮನ್‌ಮ್ಯಾನ್‌ ಪಾತ್ರಗಳಲ್ಲಿ ತೆರೆ ಮೇಲೆ ಈಗಾಗಲೇ ಮಿಂಚಿರುವ ಧನಂಜಯ, ‘ಕೋಟಿ’ ಸಿನಿಮಾ ಮೂಲಕ ಮತ್ತೊಮ್ಮೆ ಸಾಮಾನ್ಯ ವ್ಯಕ್ತಿಯೊಬ್ಬನ ಕಥೆ ಹೇಳಲು ತೆರೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರ ಜತೆಗೆ ಮಾತುಕತೆ.

ಯಾರೀ ‘ಕೋಟಿ’?

‘ಕೋಟಿ’ ಹೊಸ ಕಥೆಯನ್ನು ಹೊತ್ತುತಂದಿದೆ. ಟೀಸರ್‌, ಟ್ರೇಲರ್‌ಗಿಂತ ಹೆಚ್ಚಿನ ವಿಷಯ ಸಿನಿಮಾದಲ್ಲಿದೆ. ಸಾಮಾನ್ಯ ವ್ಯಕ್ತಿ ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ದಿನನಿತ್ಯ ಇರುವ ಜಂಜಾಟ, ಪಡುವ ಪರದಾಟವಿದೆಯಲ್ಲವೇ ಅದುವೇ ಕೋಟಿ. ರೋಡಿನಲ್ಲಿ ಕಾಣಸಿಗುವ, ನಮ್ಮ ಸುತ್ತಮುತ್ತ ಕಾಣಸಿಗುವ ಎಲ್ಲರೂ ‘ಕೋಟಿ’ಯೇ. ಮಧ್ಯಮ ವರ್ಗದ ಜೀವನದಲ್ಲಿ ಬದುಕು ಕಟ್ಟಿಕೊಳ್ಳಲು ಇರುವ ಒದ್ದಾಟವಿದೆಯಲ್ಲಾ, ಅದು ಈ ಸಿನಿಮಾದ ಜೀವಾಳ. ಒಂದು ಕೋಟಿ ದುಡಿಯುವ ಕನಸು ಹೊತ್ತವನ ಕಥೆ ಇದು. ‘ಕೋಟಿ’ ನಿಯತ್ತಿನಿಂದ ಬದುಕುವಾತ, ಯಾರಿಗೂ ಮೋಸ ಮಾಡಲ್ಲ, ಕಳ್ಳತನದ ದಾರಿ ಹಿಡಿಯುವುದಿಲ್ಲ. ನಮ್ಮೆಲ್ಲರ ಬದುಕಿನಲ್ಲಿ ಇರುವಂತಹ ಎಲ್ಲ ಸಮಸ್ಯೆಗಳೂ ‘ಕೋಟಿ’ಗೆ ಇದೆ. ಹೀಗಿದ್ದರೂ ಅಷ್ಟು ನಿಯತ್ತಾಗಿ ಬದುಕಲು ಸಾಧ್ಯವೇ? ಎನ್ನುವ ಪ್ರಶ್ನೆಯನ್ನೂ ಈ ಸಿನಿಮಾ ಮೂಡಿಸುತ್ತದೆ.

ADVERTISEMENT

ಸಾಮಾನ್ಯ ವ್ಯಕ್ತಿಯ ಪಾತ್ರಗಳನ್ನು ಹೆಚ್ಚು ಒಪ್ಪಿಕೊಳ್ಳಲು ಕಾರಣ?

ನನಗೆ ಸಾಮಾನ್ಯ ವ್ಯಕ್ತಿಯ ಗುಣಲಕ್ಷಣಗಳುಳ್ಳ ಪಾತ್ರಗಳನ್ನು ಮಾಡುವುದು ಇಷ್ಟ. ಅದು ಸವಾಲು ಕೂಡಾ. ಏಕೆಂದರೆ ಹೀರೊ ಆಗಿ ಅಥವಾ ಖಳನಟನಾಗಿ ಮಾಡುವಾಗ ನನ್ನದೇ ಆದ ಸ್ಟೈಲ್‌ ಇರುತ್ತದೆ. ಆದರೆ ಒಬ್ಬ ಸಾಮಾನ್ಯನಂತೆ ಕ್ಯಾಮೆರಾ ಮುಂದೆ ಬರಬೇಕು ಎಂದಾಗ ಅದನ್ನೆಲ್ಲಾ ಬದಿಗಿಟ್ಟು, ಬಹಳ ಸರಳವಾಗಿ ಕಾಣಿಸಿಕೊಳ್ಳಬೇಕಾಗುತ್ತದೆ. ಅಲ್ಲಿ ಆ್ಯಕ್ಟ್‌ ಮಾಡಲು ಸ್ಪೇಸ್‌ ಇರುವುದಿಲ್ಲ, ಕೇವಲ ಪ್ರತಿಕ್ರಿಯೆಗಳಿಗಷ್ಟೇ ಅಲ್ಲಿ ಜಾಗ. ಇಂತಹ ಪಾತ್ರಗಳು ನನಗೆ ಸವಾಲುಗಳನ್ನು ಎಸೆಯುತ್ತವೆ. ನನ್ನ ಬದುಕಿನ ಹಿಂದಿನ ಹಂತಗಳನ್ನು ನಾನು ಪುನರ್‌ ಭೇಟಿಯಾದಂತೆ ಈ ಪಾತ್ರಗಳು ಭಾಸವಾಗುತ್ತವೆ. ಹಾಗಾಗಿ ‘ಬಡವ ರಾಸ್ಕಲ್‌’, ‘ರತ್ನನ್‌ ಪ್ರಪಂಚ’, ‘ಕೋಟಿ’ಯಂತಹ ಸಿನಿಮಾಗಳಲ್ಲಿನ ಪಾತ್ರಗಳ ನನಗೆ ಬೇಗ ಕನೆಕ್ಟ್‌ ಆಗುತ್ತವೆ. ಈ ಕಾರಣಗಳಿಂದ ಈ ಪಾತ್ರಗಳು ಜನರಿಗೂ ಇಷ್ಟವಾಗುತ್ತದೆ. ಕೆಲವೊಮ್ಮ ಅವರ ಜೀವನವೇ ತೆರೆ ಮೇಲೆ ಬಂದಂತಹ ಅನುಭವ ಅವರಿಗೆ ಆಗುತ್ತದೆ. ಈ ಸಿನಿಮಾದ ಸ್ಕ್ರಿಪ್ಟ್‌ ಕೇಳಿದಾಗಲೇ ನಾನು ಆ ಪಾತ್ರವನ್ನು ಇಷ್ಟಪಟ್ಟೆ. ಹೇಳಬೇಕಾಗಿರುವ ಕಥೆ ಎಂದೆನಿಸಿತು. ಹೀಗಾಗಿ ತಕ್ಷಣ ‘ಯೆಸ್‌’ ಎಂದುಬಿಟ್ಟಿದ್ದೆ. 

‘ರತ್ನನ್‌ ಪ್ರಪಂಚ’ದಲ್ಲಿ ‘ರತ್ನಾಕರ’ನ ಒದ್ದಾಟ ಗೊತ್ತಿದೆಯಲ್ಲಾ? ಅದೇ ರೀತಿ ಒದ್ದಾಟ ‘ಕೋಟಿ’ಯದ್ದೂ. ಇಬ್ಬರೂ ಸಾಮಾನ್ಯ ವ್ಯಕ್ತಿಯೇ ಆಗಿದ್ದರೂ ಇವರಿಬ್ಬರೂ ಬೇರೆಯೇ. ಅವರ ಇತಿಹಾಸ ಬೇರೆಯೇ ಇದೆ. ಎಲ್ಲೂ ‘ರತ್ನಾಕರ’ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಬಾರದು. ‘ಬಡವ ರಾಸ್ಕಲ್‌’ನ ‘ಶಂಕರ’ನ ಗುಣಲಕ್ಷಣಗಳು ‘ಕೋಟಿ’ಗೆ ಬರಬಾರದು. ಈ ಎಲ್ಲ ಪಾತ್ರಗಳನ್ನೂ ಮಾಡಿರುವುದು ಧನಂಜಯನೇ. ಆದರೆ ಈ ಭಿನ್ನ ಭಿನ್ನ ಪಾತ್ರಗಳನ್ನು ಅದೇ ಮುಖ, ಅದೇ ನಗು ಇಟ್ಟುಕೊಂಡು ಡಿಫೈನ್‌ ಮಾಡುವುದು ಸವಾಲಿನ ವಿಷಯ. ಇಂತಹ ಹಂತದಲ್ಲಿ ಪಾತ್ರದ ಬರವಣಿಗೆ ಮುಖ್ಯವಾಗುತ್ತದೆ. ಅದನ್ನು ನಮ್ಮೊಳಗೆ ತುಂಬುವ ರೀತಿಯಲ್ಲಿ ಪಾತ್ರ ಭಿನ್ನವಾಗುತ್ತಾ ಹೋಗುತ್ತದೆ. ಇಡೀ ಪಯಣ ನೋಡಿದಾಗಲೇ ಒಂದು ಪಾತ್ರ ಸೂಕ್ಷ್ಮವಾಗಿ ಕಾಣಿಸಿಕೊಳ್ಳುತ್ತದೆ. 

ಪರಮ್‌ ನಿರ್ದೇಶನದ ಬಗ್ಗೆ...

ಹೊಸ ನಿರ್ದೇಶಕರನ್ನು, ಅವರ ಬರವಣಿಗೆಯನ್ನು ನಾವು ನಂಬಲೇಬೇಕು. ಇಲ್ಲದೇ ಹೋದರೆ ಹೊಸದೇನೂ ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ಗೆದ್ದಿರುವವರ ಜೊತೆ ಸಿನಿಮಾ ಮಾಡುತ್ತೇನೆ ಎಂದರೆ ಎಷ್ಟು ಜನ ಸಿಗುತ್ತಾರೆ. ಹೊಸ ಪ್ರತಿಭೆಗಳು ಬಂದಾಗ ಅವರ ಜೊತೆ ಕೆಲಸ ಮಾಡುವುದು ಬಹಳ ಮುಖ್ಯ. ಹೀಗಾಗಿಯೇ ನನ್ನ ನಿರ್ಮಾಣ ಸಂಸ್ಥೆಯಲ್ಲಿ ಬಂದ ‘ಬಡವ ರಾಸ್ಕಲ್‌’, ‘ಹೆಡ್‌ಬುಷ್‌’, ‘ಟಗರು ಪಲ್ಯ’ ಸಿನಿಮಾಗಳಲ್ಲಿ ಹೊಸ ನಿರ್ದೇಶಕರ ಜೊತೆಯೇ ಕೆಲಸ ಮಾಡಿದ್ದೇನೆ. ಪರಮ್‌ ಸಿನಿಮಾಗೆ ಹೊಸತಿರಬಹುದು. ಆದರೆ ಬಣ್ಣದ ಲೋಕಕ್ಕೆ ಅಲ್ಲ. ಟಿ.ವಿ ಜಗತ್ತಿನಲ್ಲಿ ಅವರದು ದೊಡ್ಡ ಹೆಸರು. ಪರಮ್‌ ಲಕ್ಷಾಂತರ ರೂಪಾಯಿ ಸಂಬಳವನ್ನು ಬಿಟ್ಟು, ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವ ಕನಸು ಹೊತ್ತು ಬಂದವರು. ಒಂದು ಕಾಲದಲ್ಲಿ ನಾನೂ ಹೀಗೆ ಎಲ್ಲವನ್ನು ಬಿಟ್ಟು ಬಂದಿದ್ದೆ. ಕಥೆ ಹೇಳಬೇಕು ಎನ್ನುವ ಹುಮ್ಮಸ್ಸು, ಒಳಗಿನ ಒದ್ದಾಟವನ್ನು ಒಬ್ಬ ನಿಜವಾದ ಕಥೆಗಾರನಿಗೆ ತಡೆಹಿಡಿದುಕೊಳ್ಳಲು ಆಗುವುದಿಲ್ಲ. ಇವರ ಉತ್ಸಾಹವೇ ನನ್ನನ್ನು ಕಥೆ ಕೇಳಲು ಪ್ರೇರೇಪಿಸಿತು. ಹಲವು ಪ್ರಶ್ನೆಗಳನ್ನು ‘ಕೋಟಿ’ ಕೇಳುತ್ತದೆ. ಉತ್ತರ ಕಂಡುಕೊಳ್ಳುವ ಪ್ರಕ್ರಿಯೆಯೂ ಸಿನಿಮಾದಲ್ಲಿದೆ. ಈ ಹಂತದಲ್ಲಿ ಒಳ್ಳೊಳ್ಳೆಯ ಸಂಭಾಷಣೆಗಳನ್ನು ಪರಮ್‌ ಬರೆದಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ಚರ್ಚೆಗಳಿಗೆ ಇದು ಅನುವು ಮಾಡಿಕೊಡಲಿದೆ. 

ಧನಂಜಯ ‘ಕೋಟಿ’ ಹಿಂದೆ ಬಿದ್ದವರೇ?

ಕೆಲಸದ ಹಿಂದೆ ಹೋಗಬೇಕು, ಆಗ ದುಡ್ಡು ತನ್ನಿಂದ ತಾನೇ ಬರುತ್ತದೆ. ನಿಯತ್ತಿನಲ್ಲಿ ಕೆಲಸ ಮಾಡಿದರೆ, ದುಡ್ಡಿನ ಬಗ್ಗೆ ಗೌರವ ಹೊಂದಿದ್ದರೆ, ಕನಸು ಕಂಡರೆ, ಕೊಂಚ ರಿಸ್ಕ್‌ ತೆಗೆದುಕೊಂಡು ಬಂಡವಾಳ ಹೂಡಿದರೆ ಖಂಡಿತವಾಗಿಯೂ ದುಡ್ಡು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ನನಗೇನಾದರೂ ರಾತ್ರೋರಾತ್ರಿ ಕೋಟಿ ರೂಪಾಯಿ ಸಿಕ್ಕರೆ, ‘ವಿದ್ಯಾಪತಿ’, ‘ಜೆಸಿ’ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಅದರ ಶೂಟಿಂಗ್‌ ಬೇಗನೇ ಮುಗಿಸುತ್ತೇನೆ. 

ರಮೇಶ್‌ ಇಂದಿರಾ, ತಾರಾ ಅವರ ಜೊತೆಗಿನ ನಟನೆಯ ಅನುಭವ...

ರಮೇಶ್‌ ಇಂದಿರಾ ಅವರ ಜೊತೆಗಿನ ನಟನೆ ಬಹಳ ಮಜಾ ಕೊಡುತ್ತಿತ್ತು. ಬಹಳ ಒಳ್ಳೆಯ ಕಲಾವಿದರು. ನಟನೆಯಲ್ಲೇ ಹೆಚ್ಚು ತೊಡಗಿಸಿಕೊಳ್ಳಿ ಎಂದು ಅವರಿಗೆ ಹೇಳಿದ್ದೆ. ಅವರದ್ದೇ ಆದ ಒಂದು ಸ್ಟೈಲ್‌ ಇದೆ. ಅದು ಎಲ್ಲ ಸಿನಿಮಾಗಳಲ್ಲಿ ಸಖತ್‌ ಆಗಿ ಕೆಲಸ ಮಾಡುತ್ತಿದೆ. ತಾರಮ್ಮ ಅವರಿಂದ ಕಲಿಯುವುದು ಬಹಳಷ್ಟಿದೆ. ತಾಯಿಯ ಪಾತ್ರದಲ್ಲಿ ಅವರು ಮಾಡುವ ಮ್ಯಾಜಿಕ್‌ ಅನ್ನು ಬೇರೆಯವರಿಂದ ಮಾಡಲು ಸಾಧ್ಯವಿಲ್ಲ. ‘ಬಡವ ರಾಸ್ಕಲ್‌’ನಿಂದ ಅವರೊಂದಿಗೆ ಶುರುವಾದ ಪಯಣವೀಗ ಹ್ಯಾಟ್ರಿಕ್‌ ಬಾರಿಸಿದೆ. 

ನಿರ್ಮಾಣವಾಯ್ತು, ನಿರ್ದೇಶನದ ಕನಸು ಇದೆಯೇ? 

ನಿರ್ದೇಶನದ ಕನಸು ಇದೆ, ಖಂಡಿತಾ ನಿರ್ದೇಶನ ಮಾಡುತ್ತೇನೆ. ಸದ್ಯ ಮೈಮೇಲೆ ಕೆಲಸ ಎಳೆದುಕೊಂಡಿದ್ದೇನೆ. ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ನಿರ್ದೇಶಕರು ನನಗಾಗಿ ಪಾತ್ರಗಳನ್ನು ಬರೆಯುತ್ತಿದ್ದಾರೆ. ಒಂದು ಬ್ರೇಕ್‌ ತೆಗೆದುಕೊಳ್ಳಲು ಆಗುತ್ತಿಲ್ಲ. ಜೀವನದ ಕೊನೆಯವರೆಗೂ ಸಿನಿಮಾದಲ್ಲಿ ಇರುತ್ತೇನೆ. ಸಮಯ ಬಂದಾಗ ನಿರ್ದೇಶನಕ್ಕೆ ಇಳಿಯುತ್ತೇನೆ. ಕೆಲವೊಮ್ಮೆ ನಿರ್ಮಾಣ ಸಾಕು ಎನಿಸುತ್ತದೆ. ಆದರೆ ಒಳ್ಳೆಯ ಕಥೆಗಳು ಬಂದಾಗ, ಕಥೆಯ ಜೊತೆ ನಿಲ್ಲಬೇಕು ಎಂದು ಎನಿಸುತ್ತದೆ. ಇದರಲ್ಲಿ ರಿಸ್ಕ್‌, ಸ್ಟ್ರೆಸ್‌ ಜಾಸ್ತಿ. ಎಲ್ಲೋ ಒಂದು ಮ್ಯಾಜಿಕ್‌ ಮಾಡುತ್ತಿದ್ದೇನೆ. ಪುಣ್ಯಕ್ಕೆ ನಮ್ಮ ಪ್ರೊಡಕ್ಷನ್‌ನ ಪ್ರತಿ ಕಥೆಯನ್ನು ಜನ ಮೆಚ್ಚಿಕೊಂಡಿದ್ದಾರೆ.

ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ...

‘ಪುಷ್ಪ–2’ ತಂಡ ಒಂದು ಅದ್ಭುತವಾದ ಸಿನಿಮಾದೊಂದಿಗೆ ಬರುತ್ತಿದೆ. ‘ಉತ್ತರಕಾಂಡ’, ‘ಅಣ್ಣ ಫ್ರಂ ಮೆಕ್ಸಿಕೊ’ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ‘ಹಲಗಲಿ ಬೇಡರ ದಂಗೆ’ ಸ್ಕ್ರಿಪ್ಟ್‌ ಓದಿದ್ದೇನೆ, ಇದರ ನಿರ್ದೇಶಕರ ಕೆಲಸ ಇಷ್ಟವಾಗಿದೆ. ಈ ಸಿನಿಮಾದ ಮಾತುಕತೆ ನಡೆಯುತ್ತಿದೆ. ಜೊತೆಗೆ ಟಿ.ಎಸ್. ನಾಗಾಭರಣ ಅವರ ಜೊತೆ ನಾಡಪ್ರಭು ಕೆಂಪೇಗೌಡ ಸಿನಿಮಾ ಕೆಲಸ ನಡೆಯುತ್ತಿದೆ. ನಿರ್ಮಾಣ ವಿಷಯದಲ್ಲಿ ಮತ್ತೊಬ್ಬ ಹೊಸ ನಿರ್ದೇಶಕರ ಸ್ಕ್ರಿಪ್ಟ್‌ ಓಕೆ ಮಾಡಿದ್ದೇನೆ.

ಜೂನ್ 14ರಂದು 'ಕೋಟಿ' ಬಿಡುಗಡೆ: ಡಾಲಿ ಧನಂಜಯ್‌, ಮೋಕ್ಷ ಜತೆ ವಿಶೇಷ ಸಂದರ್ಶನ ವೀಕ್ಷಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.