ADVERTISEMENT

ಸಂದರ್ಶನ | ಬಣ್ಣದ ಲೋಕದ ಸಿರಿ

ಅಭಿಲಾಷ್ ಪಿ.ಎಸ್‌.
Published 27 ಜೂನ್ 2024, 23:55 IST
Last Updated 27 ಜೂನ್ 2024, 23:55 IST
<div class="paragraphs"><p>ಸಿರಿ ರವಿಕುಮಾರ್‌</p></div>

ಸಿರಿ ರವಿಕುಮಾರ್‌

   

‘ಸಕುಟುಂಬ ಸಮೇತ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿನ ನಟನೆ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ನಟಿ ಸಿರಿ ರವಿಕುಮಾರ್‌, ಭಿನ್ನ ಭಿನ್ನ ಪಾತ್ರಗಳನ್ನು ಅರಸುತ್ತಾ ಹೆಜ್ಜೆ ಹಾಕಿದವರು. ಸಿನಿಮಾ ಜೊತೆಗೆ ರಂಗಭೂಮಿಯಲ್ಲಿಯೂ ಸಕ್ರಿಯವಾಗಿರುವ ಸಿರಿ ನಟನೆಯ ‘ಬಿಸಿ– ಬಿಸಿ ಐಸ್‌ಕ್ರೀಂ’ ಸಿನಿಮಾ ಜುಲೈ 5ಕ್ಕೆ ಬಿಡುಗಡೆಯಾಗುತ್ತಿದೆ. ಈ ಹೊಸ್ತಿಲಲ್ಲಿ ಅವರೊಂದಿಗೆ ಮಾತುಕತೆ.

‘ಪ್ರೇರಣಾ’ ಎಂಬ ಪಾತ್ರ ಸಿರಿ ಮೇಲೆ ಬೀರಿದ ಪರಿಣಾಮ...

ADVERTISEMENT

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿನ ಈ ಪಾತ್ರ ನನ್ನ ಮೇಲೆ ಎರಡು ರೀತಿಯ ಪ್ರಭಾವ ಬೀರಿದೆ. ‘ಪ್ರೇರಣಾ’ ಎಂಬ ಪಾತ್ರ ಯಶಸ್ಸಿಗೆ ಹಾಗೂ ವೈಯಕ್ತಿಕ ಬೆಳವಣಿಗೆಗೂ ಕಾರಣವಾಗಿದೆ. ಈ ಸಿನಿಮಾ ನನ್ನ ಸಿನಿಪಯಣದಲ್ಲಿ ಒಂದು ಛಾಪು ಮೂಡಿಸಲು ಸಹಾಯ ಮಾಡಿದೆ. ‘ಪ್ರೇರಣಾ’ ಎಂಬ ಪಾತ್ರದ ಮೇಲೆ ಇಡೀ ಸಿನಿಮಾ ನಿಂತಿತ್ತು. ಚಿತ್ರಕಥೆಯಲ್ಲಿ ಆ ಪಾತ್ರ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿಕೊಂಡಿತ್ತು. ಈ ಪಾತ್ರವನ್ನು ಹೇಗೆ ನಿಭಾಯಿಸುವುದು, ಯಾವ ರೀತಿ ನಟಿಸುವುದು ಎನ್ನುವ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಸಕಾರಾತ್ಮಕವಾಗಿ ಈ ಸಿನಿಮಾ ನನ್ನ ಮೇಲೆ ಪರಿಣಾಮ ಬೀರಿದೆ. ಈ ಹಿಂದೆ ಜನರು ನನ್ನನ್ನು ‘ನೀವು ಆ್ಯಂಕರ್‌ ಅಲ್ವಾ’ ಎಂದು ಗುರುತು ಹಿಡಿಯುತ್ತಿದ್ದರು. ಇದೀಗ ‘ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಟಿಸಿದ್ರಲ್ವಾ?’ ಎಂದು ಕೇಳುತ್ತಾರೆ. 

ಈ ಸಿನಿಮಾದ ಸ್ಕ್ರಿಪ್ಟ್‌ ಓದುತ್ತಿರುವಾಗ ‘ನಾನೇ ಈ ಪಾತ್ರ ಮಾಡುತ್ತಿದ್ದೇನೆಯೇ?’ ಎಂದು ರಾಜ್‌ ಅವರನ್ನು ಕೇಳಿದ್ದೆ. ‘ಪ್ರೇರಣಾ’ ಎಂಬ ಪಾತ್ರದ ಬರವಣಿಗೆ ಅಷ್ಟು ಸದೃಢವಾಗಿತ್ತು. ಏನೂ ಹೇಳದೆಯೇ, ದುಃಖ ತೋರ್ಪಡಿಸದೇ ಎರಡು ರೀತಿಯ ಜೀವನವನ್ನು ‘ಪ್ರೇರಣಾ’ ನಡೆಸುತ್ತಿರುತ್ತಾಳೆ. ಅವಳಲ್ಲಿ ಆಗುವ ಸಣ್ಣ ಬದಲಾವಣೆಯ ಪರಿಣಾಮ ಹಿರಿದು. ಹೀಗಾಗಿ ‘ಪ್ರೇರಣಾ’ ಆ ಸಿನಿಮಾ ಹೀರೊ ಎಂದುಕೊಳ್ಳುತ್ತೇನೆ. ಜೊತೆಗೆ ಕಥೆಯೂ ಈ ಸಿನಿಮಾ ನಾಯಕ. 

‘ಬಿಸಿ ಬಿಸಿ ಐಸ್‌ಕ್ರೀಂ’ನಲ್ಲಿ ನಿಮ್ಮ ಪಾತ್ರವೇನು?

ಒಂಟಿ ಕ್ಯಾಬ್ ಚಾಲಕನ ಜೀವನದಲ್ಲಿ ಆಗಿರುವ ನೋವಿಗೆ ಒಂದು ರೀತಿ ಮುಲಾಮು ಹಚ್ಚಲು ಬರುವ ಪಾತ್ರವಿದು. ಕುಗ್ಗಿದ ಆತನ ಜೀವನವನ್ನು ಕೊಂಚ ನವಿರು ಮಾಡುವಾಕೆ. ಆಕೆ ಒಂದು ರೀತಿ ಮಿಸ್ಟೀರಿಯಸ್‌ ಗರ್ಲ್‌. ಡಾರ್ಕ್ ಕಾಮಿಡಿ ರೊಮ್ಯಾನ್ಸ್ ಕಥಾಹಂದರದ ಸಿನಿಮಾವಿದು. ಮಿಸ್ಟೀರಿಯಸ್ ಹುಡುಗಿ ಒಬ್ಬ ಕ್ಯಾಬ್‌ ಚಾಲಕನ ಜೀವನದೊಳಗೆ ಬಂದಾಗ ಏನಾಗುತ್ತದೆ, ಅವನ ಜೀವನದಲ್ಲಿ ಆಗುವ ಬದಲಾವಣೆಗಳೇ ಸಿನಿಮಾದ ಕಥೆ. ಈಕೆ ಏತಕ್ಕಾಗಿ ಮಿಸ್ಟೀರಿಯಸ್‌ ಹುಡುಗಿ ಎನ್ನುವುದನ್ನು ಪ್ರೇಕ್ಷಕರು ಸಿನಿಮಾದಲ್ಲೇ ನೋಡಬೇಕು. ನಿಜ ಜೀವನದ ವಾಸ್ತವವನ್ನೂ ತೋರಿಸಲಾಗಿದೆ. ಜೊತೆಗೆ ಹಾಸ್ಯದ ಮಿಶ್ರಣವೂ ಸಿನಿಮಾದಲ್ಲಿದೆ.   

ಸಿನಿಮಾ ಜೊತೆಗೆ ಸಿರಿ ರಂಗಭೂಮಿ, ಮಾಡೆಲಿಂಗ್‌ನತ್ತ ಹೆಚ್ಚು ವಾಲಿದಂತಿದೆ...

ಹೌದು. 2010ರಿಂದ ನಾಟಕಗಳಲ್ಲಿ ನಟಿಸುತ್ತಾ ಬಂದಿದ್ದೇನೆ. ಅದರತ್ತ ಒಲವು ಮೊದಲಿಂದಲೂ ಇದೆ. ನಾಟಕಗಳಲ್ಲಿ ಕಥೆಯನ್ನು ಒಟ್ಟಾಗಿ ಕುಳಿತು ಓದುವುದರಿಂದ ಹಿಡಿದು ಅದರ ಪ್ರದರ್ಶನ ನೀಡುವವರೆಗೂ ನಮ್ಮೊಳಗೆ ಆಗುವ ಬದಲಾವಣೆಗಳು ಹಲವು. ಆ ಪಯಣ ನನಗೆ ಬಹಳ ಇಷ್ಟ. ಕಥೆಗಳಲ್ಲಿ ಹಲವು ಆಯಾಮಗಳನ್ನು ಇಲ್ಲಷ್ಟೇ ನೋಡಲು ಸಾಧ್ಯ. ರಂಗಭೂಮಿಯಲ್ಲಿ ಹಲವು ಜನರ ಒಡನಾಟ ಆಗುತ್ತದೆ. ಯೋಚನೆಗಳ ಹಂಚಿಕೆ ಆಗುತ್ತದೆ. ಇದೊಂದು ರೀತಿ ಜೀವಚೈತನ್ಯವಿದ್ದಂತೆ. ಬೆಂಗಳೂರಿನಲ್ಲೂ ರಂಗಭೂಮಿಯಲ್ಲಿ ಹೆಚ್ಚು ಅವಕಾಶಗಳಿವೆ. ಅದರಲ್ಲಿ ತೊಡಗಿಸಿಕೊಂಡವರು ಸಾವಿರಾರು ಜನರಿದ್ದಾರೆ. ಒಂದು ರೀತಿ ಸಾರ್ಥಕತೆ ಈ ವೇದಿಕೆಯಿಂದ ಸಿಗುತ್ತಿದೆ. ಇತ್ತೀಚೆಗೆ ರಂಗಶಂಕರದಲ್ಲಿ ನಡೆದ ಬೆಳಕಿನ ವಿನ್ಯಾಸದ ಕಾರ್ಯಾಗಾರದಲ್ಲೂ ಭಾಗವಹಿಸಿದ್ದೆ. ನಟಿಯಾಗಿ ಕಲಿಯುವುದು ಬಹಳಷ್ಟಿದೆ. ಅದರ ಜೊತೆಗೆ ನಟನೆಗೆ ಸಂಬಂಧಿಸಿದ ಇತರೆ ವಿಭಾಗಗಳ ಕೆಲಸವನ್ನೂ ಕಲಿಯುವುದಕ್ಕೆ ಆಸಕ್ತಿ ಇದೆ. ‘ಸೆಂಟರ್‌ ಫಾರ್‌ ಫಿಲ್ಮ್‌ ಆ್ಯಂಡ್‌ ಡ್ರಾಮಾ’ ರಚಿಸಿದ ನಾಟಕಗಳಲ್ಲಿ ನಟಿಸಿದ್ದೇನೆ. ಪ್ರಕಾಶ್‌ ಬೆಳವಾಡಿ ಅವರ ಜೊತೆಯೇ ಹೆಚ್ಚಿನ ನಾಟಕಗಳನ್ನು ಮಾಡಿದ್ದೇನೆ. 

ಆಗಸ್ಟ್‌ನಲ್ಲಿ ‘ಪರ್ವ’ ಎಂಬ ಇಂಗ್ಲಿಷ್‌ ನಾಟಕದ ಪ್ರದರ್ಶನಗಳು ಇವೆ. ಅದಕ್ಕೆ ತಯಾರಿ ನಡೆಯುತ್ತಿದೆ. ಇವೆಲ್ಲದರ ನಡುವೆ ಬಿಡುವಿನ ಸಮಯದಲ್ಲಿ ಮಾಡೆಲಿಂಗ್‌ ಮಾಡಿದ್ದೇನೆ. ಇದು ಕೇವಲ ಮಾಡೆಲಿಂಗ್‌ ಅಲ್ಲ. ನನ್ನನ್ನೂ ಒಳಗೊಂಡಂತೆ, ವಸ್ತ್ರವಿನ್ಯಾಸಕರು, ಛಾಯಾಚಿತ್ರಗ್ರಾಹಕರಿಗೆ ತಮ್ಮೊಳಗಿರುವ ಯೋಚನೆಗಳಿಗೆ ಜೀವತುಂಬುವ ವೇದಿಕೆ ಇದು. 

ಸಿರಿ ಕೈಯಲ್ಲಿರುವ ಹೊಸ ಪ್ರಾಜೆಕ್ಟ್‌ಗಳು...

ಸದ್ಯಕ್ಕೆ ‘ಬಿಸಿ ಬಿಸಿ ಐಸ್‌ಕ್ರೀಂ’ ಬಿಡುಗಡೆಗೆ ಸಜ್ಜಾಗಿದೆ. ಹೊಸದಾಗಿ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಆಸಕ್ತಿದಾಯಕವಾದ ಸ್ಕ್ರಿಪ್ಟ್‌ಗಳು ಬಂದಿವೆ. ಬಹುತೇಕ ಎಲ್ಲರೂ ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ಯುವ ನಿರ್ದೇಶಕರು. ಒಂದೆರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ ಅಷ್ಟೇ. ಮುಂದೆ ಹೆಜ್ಜೆ ಇಡುವ ಮುನ್ನ ಜನ ನನ್ನ ನಟನೆಯನ್ನು, ಸಿನಿಮಾಗಳನ್ನು ಹೇಗೆ ಸ್ವೀಕರಿಸುತ್ತಿದ್ದಾರೆ ಎನ್ನುವುದನ್ನು ನೋಡುವ ಸಮಯವಿದು ಎಂದುಕೊಂಡಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.