ಬೆಂಗಳೂರು: ಹೈದರಾಬಾದ್‌ನ ಮಲ್ಟಿಪ್ಲೆಕ್ಸ್‌ನಲ್ಲಿ 'ಅಯೋಗ್ಯ' ಚಿತ್ರ ಪ್ರದರ್ಶಿಸಲು ಅವಕಾಶ ಸಿಗದ ಕುರಿತು ಚಿತ್ರನಟ ನೀನಾಸಂ ಸತೀಶ್ ಭಾನುವಾರ ಫೇಸ್‌ಬುಕ್ ಲೈವ್ ಬಂದು ಬೇಸರ ತೋಡಿಕೊಂಡರು. 1.22 ಲಕ್ಷ ವ್ಯೂಸ್ ಪಡೆದ ಈ ಲೈವ್ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕಿತು.
‘ನನ್ನ ಚಿತ್ರ ಅಯೋಗ್ಯಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹತ್ತು ಕೋಟಿ ರೂಪಾಯಿ ಕ್ಲಬ್‌ಗೆ ಚಿತ್ರ ಪ್ರವೇಶ ಪಡೆದಿದೆ. ಆದರೂ ಹೈದರಾಬಾದ್‌ನಲ್ಲಿ ಚಿತ್ರಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ’ಎಂದು ಅಲವತ್ತುಕೊಂಡರು.
‘ಪರಭಾಷೆ ಚಿತ್ರಗಳ ಸಾವಿರಾರು ಶೋ ಕರ್ನಾಟಕದಲ್ಲಿ ನಡೆಯುತ್ತದೆ. ಆ ಚಿತ್ರಗಳು ಕೋಟ್ಯಂತರ ರೂಪಾಯಿ ದುಡ್ಡು ಮಾಡಿಕೊಳ್ಳುತ್ತವೆ. ಆದರೆ ಹೊರರಾಜ್ಯಗಳ ಕನ್ನಡಿಗರ ಅಭಿಮಾನದ ಬೇಡಿಕೆ ಈಡೇರಿಸಲು ನಮಗೆ ಅವಕಾಶವೇ ಸಿಗುತ್ತಿಲ್ಲ’ಎಂದು ಬೇಸರ ವ್ಯಕ್ತಪಡಿಸಿದರು.
‘ಹೈದರಾಬಾದ್ ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರ ಪ್ರದರ್ಶಿಸಲು ಅಲ್ಲಿನ ವಾಣಿಜ್ಯ ಮಂಡಳಿಯ ಅನುಮತಿ ಬೇಕಂತೆ. ಇದ್ಯಾವ ನ್ಯಾಯ. ಇದನ್ನು ಪ್ರಶ್ನಿಸಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡುವೆ’ಎಂದರು.
ಇದೇ ಸಂದರ್ಭ ‘ನನ್ನ ಮುಂದಿನ ಚಿತ್ರ ಚಂಬಲ್’ಎಂದು ಘೋಷಿಸಿದರು. ಬುಕ್ ಮೈ ಶೋ ಸೇರಿದಂತೆ ವಿವಿಧೆಡೆ 'ಅಯೋಗ್ಯ' ಚೆನ್ನಾಗಿಲ್ಲ ಎಂದು ವಿಮರ್ಶಿಸಿರುವವರನ್ನು ತರಾಟೆಗೆ ತೆಗೆದುಕೊಂಡು, 'ಮೊದಲು ಸಿನಿಮಾ ನೋಡಿ, ಆಮೇಲೆ ವಿಮರ್ಶೆ ಬರೆಯಿರಿ' ಎಂದು ತಾಕೀತು ಮಾಡಿದರು.
1.22 ಲಕ್ಷ ವ್ಯೂಸ್ ಪಡೆದ ಫೇಸ್‌ಬುಕ್ ಲೈವ್‌ಗೆ1.8 ಸಾವಿರ ಶೇರ್, 6.7 ಸಾವಿರ ಕಾಮೆಂಟ್, 7.6 ಸಾವಿರ ಲೈಕ್ಸ್ ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.