ಅದು 19ನೇ ಶತಮಾನ ಅಂತ್ಯದ ಕಾಲ. ಇಡೀ ಭಾರತೀಯರೇ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಸಮಯವದು. ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಬುಡಕಟ್ಟು ಜನಾಂಗದವರ ಪರಿಸ್ಥಿತಿ ತುಂಬ ಹೀನಾಯವಾಗಿತ್ತು. ಅದಕ್ಕೆ ಕಾರಣ ಬ್ರಿಟಿಷರು. ಅವರ ದುರಾಡಳಿತದಿಂದ ಜನ ರೋಸಿಹೋಗಿದ್ದರು. ಆ ಸಮಯದಲ್ಲಿ, ಆ ಜನಾಂಗದವರ ಆಶಾಕಿರಣದಂತೆ ಉದಯಿಸಿದವರೇ ಬಿರ್ಸಾ ಮುಂಡಾ.
ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವಂತಿಲ್ಲ ಎಂದು ಬ್ರಿಟಿಷರು ಆದೇಶಿಸಿದ್ದರು. ಅಲ್ಲದೇ, ಸಾವಿರಾರು ಮಂದಿ ಆದಿವಾಸಿಗಳನ್ನು ಮತಾಂತರಗೊಳಿಸಿದ್ದ ಬ್ರಿಟಿಷರು, ಆದಿವಾಸಿ ಗಳ ಬಗ್ಗೆ ಅತ್ಯಂತ ಹೀನಾಯವಾಗಿ ಮಾತನಾಡುತ್ತಿದ್ದರು.
ಈ ಎಲ್ಲ ವಿಚಾರಗಳಿಂದ ಬಿರ್ಸಾ, ಬ್ರಿಟಿಷರ ವಿರುದ್ಧ ದಂಗೆ ಎದ್ದು, ಆದಿವಾಸಿಗಳನ್ನು ಸಂಘಟಿಸಿ ಸೈನ್ಯ ಕಟ್ಟಿದರು. ಅದನ್ನೇ ಮುಂಡಾ ದಂಗೆ ಎಂದು ಕರೆಯಲಾಗುತ್ತದೆ. ಈ ದಂಗೆ ವೇಳೆ ಸಾವಿರಾರು ಆದಿವಾಸಿಗಳು ಮಡಿದರು. ಬಿರ್ಸಾ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಲ್ಲಿಯೇ ಅವರು ಮೃತಪಟ್ಟರು.
ಬುಡಕಟ್ಟು ಜನಾಂಗದವರನ್ನು ಸಂಘಟಿಸಿ ಹೋರಾಟದ ಮನೋಭಾವ ಹುಟ್ಟುಹಾಕಿದ ಅವರು 25ನೇ ವಯಸ್ಸಿಗೆ ಅಸುನೀಗಿದ್ದರು. ಅವರ ಇಡೀ ಬದುಕನ್ನು ಸಿನಿಮಾದ ಮೂಲಕ ಕಟ್ಟಿಕೊಡಲು ಮುಂದಾಗಿದ್ದಾರೆ ಪ.ರಂಜೀತ್.ಈ ಹಿಂದೆರಜನೀಕಾಂತ್ ಬಾಯಲ್ಲಿ ‘ಕಬಾಲಿ’ ಸಿನಿಮಾದ ಮೂಲಕ ‘ಕಬಾಲಿ ಡಾ’ ಎಂದು ಕಡಕ್ ಡೈಲಾಗ್ ಹೇಳಿಸಿ ಗೆಲುವಿನ ನಗೆ ಬೀರಿದ್ದ ತಮಿಳು ನಿರ್ದೇಶಕ ಪ.ರಂಜಿತ್, ಮುಂಡಾ ಅವರನ್ನು ಬೆಳ್ಳಿತೆರೆಗೆ ತರಲಿದ್ದಾರೆ. ಈಗಾಗಲೇ ಪೂರ್ವಸಿದ್ಧತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದು ಅವರ ಮೊದಲ ಬಾಲಿವುಡ್ ಸಿನಿಮಾವಾಗಲಿದೆ.
ಮುಂಡಾ ಅವರ 143ನೇ ಜನ್ಮದಿನಾಚರಣೆ ಕಾರ್ಯ ಕ್ರಮವು ಈಚೆಗೆ ಮುಂಬೈನಲ್ಲಿ ನಡೆಯಿತು. ಅಲ್ಲಿ ಮಾತನಾಡಿದ ರಂಜಿತ್, ಬಿರ್ಸಾ ಮುಂಡಾ ಬಗ್ಗೆ ಸಿನಿಮಾ ಮಾಡುವುದಾಗಿ ಬಹಿರಂಗವಾಗಿ ಹೇಳಿದ್ದರು.
‘7 ವರ್ಷಗಳ ಹಿಂದೆ ಮಹಾಶ್ವೇತಾ ದೇವಿ ಅವರ ‘ಅರಣ್ಯರ್ ಆಧಿಕರ್’ ಕೃತಿ ಓದಿದೆ. ಆಗಲೇ, ನನಗೆ ಬಿರ್ಸಾ ಹೋರಾಟದ ಬಗ್ಗೆ ತಿಳಿದಿದ್ದು. ಅವರ ಕಥೆಯನ್ನು ಸಿನಿಮಾ ವಾಗಿಸಿದರೆ ಹೇಗೆ ಅನಿಸಿತು. ಆ ಸಂಬಂಧ ಶರೀನ್ ಹಾಗೂ ಕಿಶೋರ್ ಅವರನ್ನು ಭೇಟಿಯಾಗಿ ಚರ್ಚಿಸಿದೆ’ ಎಂದಿದ್ದಾರೆ.
‘ಮುಂಡಾ ಸ್ಫೂರ್ತಿದಾಯಕ ವ್ಯಕ್ತಿ. ಅವರ ಕಥೆಯನ್ನು ಅದ್ಭುತವಾಗಿ ಸಿನಿಮಾ ಮಾಡಬಹುದು. ಅದರ ಮೂಲಕ ದೇಶಿಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರೇಕ್ಷಕರನ್ನು ನಾವು ತಲುಪಬಹುದು. ಆ ಮೂಲಕ ಮರೆಯಾದ ದೇಶದ ಅಪ್ರತಿಮ ಹೋರಾಟಗಾರರೊಬ್ಬರ ಕಥೆಯನ್ನು ವಿಶ್ವಕ್ಕೆ ಪರಿಚಯಿಸಬಹುದು’ ಎಂದಿದ್ದಾರೆ.
ರಂಜಿತ್ ಈ ಹಿಂದೆ ‘ಕಾಲ’, ಕಬಾಲಿ, ‘ಮದ್ರಾಸ್’ ಹಾಗೂ ‘ಅಟ್ಟಕತಿ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.ಮಜಿದ್ ಮಜೀದಿ ನಿರ್ದೇಶನದ ‘ಬಿಯಾಂಡ್ ದಿ ಕ್ಲೌಡ್ಸ್’ ಸಿನಿಮಾ ನಿರ್ಮಾಣ ಮಾಡಿದ್ದ, ನಿರ್ಮಾಪಕ ಡ್ಯುಯೊ ಶರೀನ್ ಮಂತ್ರಿ ಕೇದಿಯಾ ಹಾಗೂ ನಮಹ್ ಪಿಕ್ಚರ್ಸ್ ಸಂಸ್ಥೆಯ ಕಿಶೋರ್ ಅರೋರಾ ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.
ಶರೀನ್, ‘ಮುಂಡಾ ಅವರ ಜೀವನ ಹಾಗೂ ಕಾಲ ಸ್ಫೂರ್ತಿದಾಯಕವಾದದ್ದು. ಈ ಕಥೆಯು ಅತ್ಯಂತ ರೋಚಕ ಹಾಗೂ ಕುತೂಹಲಕಾರಿಯಿಂದ ಕೂಡಿದೆ’ ಎಂದಿದ್ದಾರೆ.
ಮಹಾಶ್ವೇತಾ ದೇವಿ ಅವರ ಮತ್ತೊಂದು ಕೃತಿಯಾದ ‘ಜಂಗಲ್ ಕೆ ದವೆದಾರ್’ನ ಹಕ್ಕನ್ನು ನಿರ್ಮಾಪಕರು ಈಗಾಗಲೇ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.