ADVERTISEMENT

'ಪುಷ್ಪ–2' ಯಶಸ್ಸು ಬಯಸಿದ್ದೆ, ಯಶ್‌ಗೆ ಅಪಮಾನ ಮಾಡಿಲ್ಲ: ಲಕ್ಷ್ಮೀಕಾಂತ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 6:36 IST
Last Updated 28 ಅಕ್ಟೋಬರ್ 2024, 6:36 IST
   

ಬಳ್ಳಾರಿ: 'ತೆಲುಗಿನ ಪುಷ್ಪ–2' ಚಿತ್ರದ ವಿತರಕನಾಗಿ ಅದರ ಯಶಸ್ಸು ಬಯಸಿದ್ದೇನೆಯೇ ಹೊರತು, ನಟ ಯಶ್‌ ಅವರನ್ನಾಗಿಲಿ, ಅವರ ಕೆಜಿಎಫ್‌ ಸರಣಿಯ ಚಿತ್ರಗಳನ್ನಾಗಲಿ ಅಪಮಾನಿಸಿಲ್ಲ’ ಎಂದು ‘ನಟರಾಜ’ ಸಿನಿಮಾ ಮಂದಿರಗಳ ಮಾಲೀಕ, ಚಿತ್ರ ವಿತರಕ ಲಕ್ಷ್ಮೀಕಾಂತ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಟ ಅಲ್ಲು ಅರ್ಜುನ್‌ ನಟನೆಯ ಚಿತ್ರ ‘ಪುಷ್ಪ–2’ ಸಿನಿಮಾದ ಅಖಿಲ ಕರ್ನಾಟಕ ವಿತರಣೆಯನ್ನು ನಾನೇ ಪಡೆದುಕೊಂಡಿದ್ದೇನೆ. ಇತ್ತೀಚೆಗೆ ಚಿತ್ರತಂಡ ಹೈದರಾಬಾದ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಗೆ ನಾನೂ ಹೋಗಿದ್ದೆ. ಚಿತ್ರ ಕೆಜಿಎಫ್‌–2 ಸಿನಿಮಾದ ದಾಖಲೆಯನ್ನೂ ಮೀರಿ ಯಶಸ್ಸು ಗಳಿಸಲಿ ಎಂದು ಅಲ್ಲಿ ಆಶಿಸಿದ್ದೆ. ಇದರಲ್ಲಿ ತಪ್ಪು ಹುಡುಕಿರುವ ಕೆಲ ಮಂದಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಿನಿಮಾವೊಂದು ದಾಖಲೆಗಳನ್ನೂ ಮೀರಲಿ ಎಂದು ನಿರ್ಮಾಪಕರು, ವಿತರಕರು ಆಶಿಸುವುದು ಸಾಮಾನ್ಯ. ಇಲ್ಲಿ ಯಶ್‌ ಅವರನ್ನಾಗಲಿ, ಅವರ ಸಿನಿಮಾಗಳನ್ನಾಗಲಿ ಅಪಮಾನಿಸುವುದು ಉದ್ದೇಶವಲ್ಲ’ ಎಂದು ಹೇಳಿದರು.

ADVERTISEMENT

‘ಯಶ್‌ ಅವರ ಹಲವು ಸಿನಿಮಾಗಳನ್ನು ತೆಲುಗಿನಲ್ಲಿ ನಾನೇ ವಿತರಣೆ ಮಾಡಿದ್ದೇನೆ. ಕನ್ನಡದ ಹಲವು ಸಿನಿಮಾಗಳನ್ನೂ ವಿತರಿಸಿದ್ದೇನೆ. ‘ನಟರಾಜ’ ಸಿನಿಮಾ ಮಂದಿರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದ್ದೇನೆ. ಕನ್ನಡವನ್ನಾಗಲಿ, ಕನ್ನಡದ ಸಿನಿಮಾಗಳನ್ನಾಗಲಿ ನಾನು ಕಡೆಗಣಿಸಿಲ್ಲ’ ಎಂದು ಅವರು ತಿಳಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರಗಳು ದೇಶದ ಚಿತ್ರರಂಗದಲ್ಲಿ ಪಾರಮ್ಯ ಮರೆಯುತ್ತಿವೆ. ಮೊದಲಿಗೆ ‘ಬಾಹುಬಲಿ’ ಯಶಸ್ಸು ಕಂಡಿತು. ಅದರ ದಾಖಲೆ ಯಾರೂ ಮುರಿಯಲಾಗದು ಎಂದು ಹೇಳಲಾಯಿತು. ಯಶ್‌ ಅವರ ‘ಕೆಜಿಎಫ್‌’ ಎಲ್ಲ ದಾಖಲೆಗಳನ್ನು ಮುರಿಯಿತು. ‘ಕಾಂತಾರ’ ಚಿತ್ರ ಮತ್ತೊಂದು ಹಂತ ಮೇಲೇರಿತು. ‘ಪುಷ್ಪ–2’ ಕೂಡ ಪ್ಯಾನ್‌ ಇಂಡಿಯಾ ಚಿತ್ರ. ಅದು ದಾಖಲೆಗಳನ್ನು ಮೀರಲಿ ಎಂಬುದರಲ್ಲಿ ಯಾವ ತಪ್ಪೂ ಇಲ್ಲ’ಎಂದರು.

ತೆಲುಗಿನ ‘ಪುಷ್ಪ–2: ದ ರೂಲ್‌’ ಚಿತ್ರ ಡಿಸೆಂಬರ್‌ 5ರಂದು ಬಿಡುಗಡೆಯಾಗುತ್ತಿದೆ. ಅಲ್ಲು ಅರ್ಜುನ್‌ ನಟನೆಯ ಈ ಚಿತ್ರವನ್ನು ಸುಕುಮಾರ್‌ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.