ರಿಯಲ್ ಲೈಫ್‌ನ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಇದೇ ಮೊದಲ ಸಲ ತೆರೆಮೇಲೆಯೂ ಒಂದಾಗಿದ್ದಾರೆ. ಸಾವಿನ ರಹಸ್ಯವನ್ನು ಭೇದಿಸುವ ‘ಯದಾ ಯದಾ ಹಿ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ.
ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ನಟ ದಿಗಂತ್ ಕೂಡ ಮೊದಲ ಸಲ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಮೂಲದ ಅಶೋಕ ತೇಜ ನಿರ್ದೇಶನದ ಚಿತ್ರ ಜೂನ್ 2ರಂದು ಈ ಚಿತ್ರ ರಾಜ್ಯದಾದ್ಯಂತ ತೆರೆಕಾಣುತ್ತಿದ್ದು, ಶಾಲಿನಿ ಎಂಟರ್‌ಪ್ರೈಸಸ್ ಮೂಲಕ ಜಾಕ್ ಮಂಜು ಅವರು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರದ ಟೈಟಲ್ ಸಾಂಗ್‌ಗೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ದನಿಯಾಗಿದ್ದಾರೆ. ಇದೊಂದು ತೆಲಗಿನ ‘ಎವರು’ ಸಿನಿಮಾದ ರಿಮೇಕ್ ಇದಾಗಿದ್ದು, ಅಲ್ಲಿ ನಟಿ ರೆಜಿನಾ ಅವರು ನಿರ್ವಹಿಸಿದ್ದ ಪಾತ್ರವನ್ನು, ಇಲ್ಲಿ ಹರಿಪ್ರಿಯಾ ಅವರು ಮಾಡಿದ್ದಾರೆ. ಹಿರಿಯ ನಟ ಅವಿನಾಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದರಾಬಾದ್ ಮೂಲದ ರಾಜೇಶ್ ಅಗರವಾಲ್ ಅವರು ಬಂಡವಾಳ ಹೂಡಿದ್ದಾರೆ.
'ಕೇರಳದ ಮುನ್ನಾರ್, ಚಿಕ್ಕಮಗಳೂರು, ಹೈದರಾಬಾದ್ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 55 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿಯಾಗಿದೆ. ಮೂರು ಪ್ರಮುಖ ಪಾತ್ರಧಾರಿಗಳ ಮೇಲೂ ಕಥೆ ಸಾಗುತ್ತದೆ’ ಎಂದು ನಿರ್ದೇಶಕ ಅಶೋಕ್ ತೇಜ ಹೇಳಿದರು.
‘ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನಿರ್ಮಾಪಕರು, ನಿರ್ದೇಶಕರು ತೆಲುಗಿನಿಂದ ಬಂದು ಈ ಸಿನಿಮಾ ಮಾಡಿದ್ದಾರೆ. ಜನರಿಗೆ ಇಷ್ಟವಾಗುವಂಥ ಕಥೆ ಇದರಲ್ಲಿದ್ದು, ನಾನು ಒಬ್ಬ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರಕ್ಕೆ ಮತ್ತೊಂದು ಶೇಡ್ ಇದೆ. ತೆಲುಗಿನ ಪ್ರಸಿದ್ಧ ಕಾದಂಬರಿಯನ್ನಾಧರಿಸಿ ಈ ಸಿನಿಮಾ ಮಾಡಿದ್ದಾರೆ’ ಎಂದು ದಿಗಂತ್ ತಿಳಿಸಿದರು.
ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಶ್ರೀಚರಣ್ ಪಾಕಾಲ ಅವರ ಸಂಗೀತ ನಿರ್ದೇಶನವಿದೆ. ಯೋಗಿ ಅವರ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.