ಕೋವಿಡ್ –19 ಎಲ್ಲ ಕ್ಷೇತ್ರಗಳನ್ನೂ ದೀರ್ಘಕಾಲದವರೆಗೆ ಬಾಧಿಸಿದೆ. ವೃತ್ತಿಪರರು, ವೃತ್ತಿಯೇತರು ಪಟ್ಟಪಾಡು ಅಷ್ಟಿಷ್ಟಲ್ಲ. ಕೊರೊನಾ ಕಾಲದಲ್ಲಿ ಫ್ರಂಟ್ ಲೈನ್ ವಾರಿಯರ್ಸ್‌ನಂತೆ ಕೆಲಸ ಮಾಡಿದವರು ವೈದ್ಯ ಕೀಯ ಕ್ಷೇತ್ರದವರು. ವೈಯಕ್ತಿಕ ಸಂಕಷ್ಟಗಳ ನಡುವೆಯೂ, ವೃತ್ತಿಧರ್ಮ ಪಾಲಿಸಿ, ಜನ ಸೇವೆಯಲ್ಲಿಯೇ ದೇವರನ್ನು ಕಂಡ ವೈದ್ಯರ ಕಾರ್ಯ ದೊಡ್ಡದು. ಹೀಗೆ ದುಡಿದವರ ಕೊರೊನಾ ಕಾಲದ ಕಥೆ, ವ್ಯಥೆಯನ್ನು ಚಿತ್ರದ ಕಥೆಯಾಗಿಸಿಕೊಂಡು ತೆರೆಯ ಮೇಲೆ ತರಲು ತಯಾರಿ ನಡೆಸಿದ್ದು, ‘ಸೆಪ್ಟೆಂಬರ್ 13’ ಚಿತ್ರತಂಡ. ಯುವ ಪ್ರತಿಭೆ ಚಿಂತನ್ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ‘ಪ್ರಜಾವಾಣಿ’ ಜೊತೆಗೆ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ.
‘ಚಿಕ್ಕಂದಿನಿಂದಲೇ ನನಗೆ ರಂಗಭೂಮಿಯತ್ತ ಹೆಚ್ಚು ಒಲವಿತ್ತು. ನಾಟಕಗಳಲ್ಲಿ ನಟನೆ ಮಾಡುತ್ತಲೇ ಬೆಳೆದವನು. ನಮ್ಮ ನಟನೆಯನ್ನು ಜನರು ಸ್ಮರಿಸುವಂತಿರಬೇಕು’ ಎಂದು ಹೂನಗೆ ಬೀರುತ್ತಲೇ ಮಾತಿಗಿಳಿದರು ನಟ ಚಿಂತನ್.
ಮೂಲತಃ ಧಾರವಾಡ ಜಿಲ್ಲೆಯವರಾದ ಇವರು, ಓದಿದ್ದು ಬೆಂಗಳೂರಿನಲ್ಲಿ. ಸದ್ಯ ಬಿ.ಕಾಂ ಪದವಿ ಪೂರ್ಣಗೊಳಿಸಿದ್ದಾರೆ. 8–9ರ ಪ್ರಾಯದಲ್ಲಿಯೇ ಧಾರವಾಡದ ರಂಗಾಯಣದಲ್ಲಿ ನಡೆದ ಶಿಬಿರವೊಂದರಲ್ಲಿ ಭಾಗವಹಿಸುವ ಮೂಲಕ ಬಣ್ಣಹಚ್ಚಿ ನಾಟಕ ಕ್ಷೇತ್ರಕ್ಕೆ ಇಳಿದರು. ಶಾಲೆ, ಕಾಲೇಜುಗಳಲ್ಲೂ ನಾಟಕ ಪ್ರದರ್ಶನ ನೀಡಿದ್ದಾರೆ.
ಅವರು ನಾಯಕ ನಟರಾಗಿ ನಟಿಸುತ್ತಿರುವ ಮೊದಲ ಚಿತ್ರ ‘ಸೆಪ್ಟೆಂಬರ್ 13’. ಇದಕ್ಕೂ ಮುನ್ನ ‘Tea’ ಎಂಬ ಕಿರುಚಿತ್ರದಲ್ಲಿ ನಟಿಸಿರುವ ಅನುಭವ ಅವರಿಗಿದೆ. ಓದುವುದರ ಜೊತೆ ಜೊತೆಗೆ ಸಿನಿಮಾಗಳಿಗಾಗಿ ನಡೆಯುತ್ತಿದ್ದ ಆಡಿಷನ್‌ಗಳಿಗೂ ಹಾಜರಾಗುತ್ತಿದ್ದರು. ಅದರ ಫಲವಾಗಿಯೇ 2019ರಲ್ಲಿ ಚಿತ್ರೀಕರಣ ಶುರುಮಾಡಿದ ‘ರೈಮ್ಸ್’ ಸಿನಿಮಾದಲ್ಲಿ ನಾಯಕ ನಟನ ಸಹೋದರನ ಪಾತ್ರಕ್ಕೆ ಅವಕಾಶ ಸಿಕ್ಕಿತು.
ಕಥೆ ಮುಖ್ಯ: ನಟ ರಕ್ಷಿತ್ ಶೆಟ್ಟಿ ಅವರ ಸಿನಿಮಾಗಳೆಂದರೆ ಇಷ್ಟ. ಅಂಥ ಪಾತ್ರಗಳಲ್ಲಿ ನಟಿಸುವ ಆಸೆ ಇದೆ. ಕಥೆ ವಿಭಿನ್ನವಾಗಿದ್ದರೆ ನೋಡುಗ ಖಂಡಿತ ಇಷ್ಟಪಡುತ್ತಾನೆ. ಹಾಗಾಗಿಯೇ ಕಥೆಯೇ ಮುಖ್ಯ. ಅದನ್ನು ನೋಡಿಯೇ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ನಮ್ಮ ನಟನೆ ಪ್ರೇಕ್ಷಕನ ನೆನಪಿನಲ್ಲಿ ಉಳಿಯುವಂತಿರಬೇಕು ಎನ್ನುತ್ತಾರೆ ಚಿಂತನ್. ಕೌಟುಂಬಿಕ, ಮಾಸ್ ಸಿನಿಮಾಗಳಲ್ಲಿ, ರಕ್ಷಿತ್ ಶೆಟ್ಟಿ, ಸುದೀಪ್, ಯಶ್ ಅವರೊಂದಿಗೆ ನಟಿಸುವ ಹೆಬ್ಬಯಕೆ ಅವರದು. ಕನ್ನಡ ಚಿತ್ರಗಳಲ್ಲೇ ಹೆಚ್ಚು ನಟಿಸುವಾಸೆ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.