ADVERTISEMENT

ಸಿನಿಮಾ ನಿರ್ಮಾಪಕ‌ ಸೌಂದರ್ಯ ಜಗದೀಶ್ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 7:04 IST
Last Updated 14 ಏಪ್ರಿಲ್ 2024, 7:04 IST
<div class="paragraphs"><p>ಸೌಂದರ್ಯ ಜಗದೀಶ್ </p></div>

ಸೌಂದರ್ಯ ಜಗದೀಶ್

   

ಬೆಂಗಳೂರು: ಸಿನಿಮಾ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

‘ಮಹಾಲಕ್ಷ್ಮಿ ಲೇಔಟ್ ಕ್ಲಬ್ ರಸ್ತೆಯಲ್ಲಿರುವ ಮನೆಯಲ್ಲಿ ಸೌಂದರ್ಯ ಜಗದೀಶ್ ಹಾಗೂ ಕುಟುಂಬದವರು ವಾಸವಿದ್ದರು. ಭಾನುವಾರ ಬೆಳಿಗ್ಗೆ ಮನೆಯ ಕೊಠಡಿಯಲ್ಲಿ ಜಗದೀಶ್ ನೇಣು ಹಾಕಿಕೊಂಡಿದ್ದರು. ಅದನ್ನು ಗಮನಿಸಿದ್ದ ಕುಟುಂಬದವರು, ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಸೌಂದರ್ಯ ಜಗದೀಶ್ ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಜಗದೀಶ್ ಅವರ ಅಂಗರಕ್ಷಕರೊಬ್ಬರು ಇತ್ತೀಚೆಗೆ ತೀರಿಕೊಂಡಿದ್ದರು. ಅತ್ತೆ ಸಹ ಎರಡು ವಾರದ ಹಿಂದೆಯಷ್ಟೇ ಮೃತಪಟ್ಟಿದ್ದಾರೆ. ಇವರಿಬ್ಬರ ಸಾವಿನಿಂದ ಜಗದೀಶ್ ನೊಂದಿದ್ದರು. ಮಾನಸಿಕ ಖಿನ್ನತೆಗೂ ಒಳಗಾಗಿದ್ದರೆಂದು ಗೊತ್ತಾಗಿದೆ. ಹಣಕಾಸು ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರೆಂಬ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಸದ್ಯಕ್ಕೆ ಪುರಾವೆಗಳು ಲಭ್ಯವಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಜಗದೀಶ್ ಆತ್ಮಹತ್ಯೆ ಸಂಬಂಧ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಪೊಲೀಸರು ಹೇಳಿದರು.

ಯಾವುದೇ ಸಮಸ್ಯೆ ಇರಲಿಲ್ಲ: ಮಾಧ್ಯಮದವರ ಜೊತೆ ಮಾತನಾಡಿದ ಜಗದೀಶ್ ಅವರ ಕುಟುಂಬಸ್ಥರು, ‘ಮನೆಯಲ್ಲಿ ಜಗದೀಶ್ ನೇಣು ಹಾಕಿಕೊಂಡಿದ್ದರು. ಅದು ಗೊತ್ತಾಗುತ್ತಿದ್ದಂತೆ ಅವರನ್ನು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಗೆ ಕರೆತರಲಾಯಿತು. ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದರು.

‘ಯಾವುದೇ ಸಮಸ್ಯೆ ಇರಲಿಲ್ಲ. ಆರೋಗ್ಯ ಮತ್ತು ವ್ಯವಹಾರ ಎಲ್ಲವೂ ಚೆನ್ನಾಗಿತ್ತು. ಆತ್ಮಹತ್ಯೆ ಏಕೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಪೊಲೀಸರಿಗೆ ಹೇಳಿಕೆ ನೀಡಲಾಗಿದೆ’ ಎಂದು ಹೇಳಿದರು.

ನಿರ್ಮಾಪಕರಾಗಿದ್ದ ಸೌಂದರ್ಯ ಜಗದೀಶ್, ‘ಅಪ್ಪು‌ ಮತ್ತು ಪಪ್ಪು’, ‘ಮಸ್ತ್ ಮಜಾ ಮಾಡಿ’, ‘ರಾಮ್‌ ಲೀಲಾ’, ‘ಸ್ನೇಹಿತರು’ ಸೇರಿದಂತೆ ಹಲವು ಸಿನಿಮಾ‌ಗಳನ್ನು ನಿರ್ಮಾಣ ಮಾಡಿದ್ದರು.

ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಜೆಟ್‌ಲಾಗ್​ ರೆಸ್ಟೊ ಬಾರ್ ಸಂಸ್ಥಾಪಕರಾಗಿದ್ದರು. ನಟ‌ ದರ್ಶನ್ ಅಭಿನಯದ ಕಾಟೇರ ಸಿನಿಮಾ‌ ಬಿಡುಗಡೆ ಸಂದರ್ಭದಲ್ಲಿ ಇದೇ ಬಾರ್‌ನಲ್ಲಿ ಅವಧಿ ಮೀರಿ ರಾತ್ರಿ‌ ಪಾರ್ಟಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ರೆಸ್ಟೊ ಬಾರ್ ಕೆಲ ದಿನ ಬಂದ್ ಮಾಡಿಸಿದ್ದರು. ಸೌಂದರ್ಯ ‌ಜಗದೀಶ್ ಹಾಗೂ‌ ಪತ್ನಿ ವಿರುದ್ಧ ನ್ಯಾಯಾಲಯಕ್ಕೆ ‌ದೋಷಾರೋಪ‌ ಪಟ್ಟಿಯನ್ನೂ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.