ಬೆಂಗಳೂರು:ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಆಯ್ಕೆ ಸಮಿತಿ ಅಧ್ಯಕ್ಷ ಎಸ್.ಕೆ. ಭಗವಾನ್ ಅವರು ನಟಿಸಿರುವ ಸಿನಿಮಾವೇ ಸಹಾಯಧನ ಕೋರಿ 2017ನೇ ಸಾಲಿನ ಕನ್ನಡ ಮತ್ತು ಕರ್ನಾಟಕ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಸಹಾಯಧನ ಸಮಿತಿಯ ಮುಂದೆ ಬಂದಿರುವುದು ಈಗ ವಿವಾದಕ್ಕೆ ಗ್ರಾಸವಾಗಿದೆ.
ಭಗವಾನ್ ಅಭಿನಯಿಸಿರುವ ‘ಎರಡು ಕನಸು’ ಸಿನಿಮಾವೇ ವಿವಾದದ ಕೇಂದ್ರಬಿಂದು. ಕನ್ನಡ ಚಲನಚಿತ್ರ ನೀತಿ 2011ರ ಪ್ರಕಾರ ಸ್ಪರ್ಧೆಯಲ್ಲಿರುವ ಸಿನಿಮಾಗಳೊಂದಿಗೆ ನೇರ ಅಥವಾ ಪರೋಕ್ಷ ಸಂಬಂಧ ಇರುವವರು ಸಮಿತಿಯ ಸದಸ್ಯರಾಗಿರುವಂತಿಲ್ಲ. ಇಂತಹ ಸಂದರ್ಭದಲ್ಲಿ ಅವರನ್ನು ಕೈಬಿಟ್ಟು ಅವರ ಬದಲಿಗೆ ಬೇರೊಬ್ಬರನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳುವ ಅಧಿಕಾರ ಗುಣಾತ್ಮಕ ಚಲನಚಿತ್ರಗಳ ಆಯ್ಕೆ ಸಮಿತಿಗೆ ಇದೆ.
ಸಮಿತಿಯು ಇಲ್ಲಿಯವರೆಗೆ ಸಹಾಯಧನ ಕೋರಿ ಬಂದಿರುವ 136 ಸಿನಿಮಾಗಳನ್ನು ವೀಕ್ಷಿಸಿದೆ. ಕಳೆದ ಸೋಮವಾರ ಭಗವಾನ್ ಅವರನ್ನು ಹೊರತುಪಡಿಸಿ ಸಮಿತಿಯ ಉಳಿದ ಸದಸ್ಯರು ‘ಎರಡು ಕನಸು’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಆದರೆ, ಸಮಿತಿಯ ಅಧ್ಯಕ್ಷರೇ ಸಿನಿಮಾ ವೀಕ್ಷಣೆ ವೇಳೆ ಗೈರುಹಾಜರಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಆದೇಶ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಭಗವಾನ್ ಅವರ ಅಧ್ಯಕ್ಷತೆಯಲ್ಲಿಯೇ ಉಳಿದ ಸಿನಿಮಾಗಳನ್ನು ವೀಕ್ಷಿಸಬೇಕೇ ಅಥವಾ ಸಮಿತಿಯ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಂಬಂಧ ಸ್ಪಷ್ಟ ಆದೇಶ ನೀಡುವಂತೆ ಕೋರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಭೃಂಗೀಶ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
2011ನೇ ಸಾಲಿನಡಿ ಸಿನಿಮಾಗಳಿಗೆ ಸಹಾಯಧನ ನೀಡುವ ವೇಳೆಯೂ ಇಂತಹದ್ದೇ ವಿವಾದ ತಲೆದೋರಿತ್ತು. ಆಗ ಅಧ್ಯಕ್ಷರಾಗಿದ್ದ ವಿಜಯಮ್ಮ ಅವರು ತಮ್ಮ ಪುತ್ರ ನಟಿಸಿದ ಸಿನಿಮಾ ಸಹಾಯಧನ ಸಮಿತಿಯ ಮುಂದೆ ಬಂದಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2013ನೇ ಸಾಲಿನಲ್ಲಿ ತಮ್ಮ ಪತ್ನಿ ನಟಿಸಿರುವ ಸಿನಿಮಾವೇ ಸಹಾಯಧನದ ಸಮಿತಿಗೆ ಅರ್ಜಿ ಸಲ್ಲಿಸಿದ್ದರಿಂದ ಸುಂದರ್‌ರಾಜ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
‘ನಾನು ಎರಡು ಕನಸು ಚಿತ್ರದ ಮುಹೂರ್ತಕ್ಕೆ ಹೋದ ವೇಳೆ ಚಿತ್ರೀಕರಿಸಿದ ದೃಶ್ಯವನ್ನೇ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಅದು 14 ಸೆಕೆಂಡ್ ಇರುವ ದೃಶ್ಯವಷ್ಟೇ. ಸರ್ಕಾರ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ನಿರ್ಧಾರ ಕೈಗೊಂಡರೂ ಅದಕ್ಕೆ ನಾನು ಬದ್ಧ. ಸ್ವಜನಪಕ್ಷಪಾತ ಮಾಡುವ ಉದ್ದೇಶ ನನಗಿಲ್ಲ. ಕೋರಂ ಇದ್ದರೆ ಸಿನಿಮಾಗಳನ್ನು ವೀಕ್ಷಿಸಬಹುದು. ಅಧ್ಯಕ್ಷರು ಪ್ರತಿಯೊಂದು ಸಿನಿಮಾವನ್ನೂ ವೀಕ್ಷಿಸಬೇಕು ಎಂಬ ನಿಯಮವಿಲ್ಲ’ ಎಂದು ಭಗವಾನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.