ಬೆಂಗಳೂರು:ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ವೈರಲ್ ಆಗಿದ್ದ ‘ಜೋಡೆತ್ತು’, ‘ಕಳ್ಳೆತ್ತು’ ಮತ್ತು ‘ಎಲ್ಲಿದ್ದೀಯಪ್ಪಾ..’ ಹೆಸರಿನ ಸಿನಿಮಾ ಟೈಟಲ್‌ಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಯಾಗಿವೆ.
ನಿರ್ಮಾಪಕ ವಿಜಯ್ ಕುಮಾರ್ ಅವರು ‘ಕಳ್ಳೆತ್ತು’ ಟೈಟಲ್ ನೋಂದಾಯಿಸಿದ್ದಾರೆ. ನಿರ್ಮಾಪಕ ಎ. ಗಣೇಶ್ ಅವರಿಗೆ ‘ಎಲ್ಲಿದ್ದೀಯಪ್ಪಾ...’ ಟೈಟಲ್ ಸಿಕ್ಕಿದೆ. ಶ್ರೀಚಾಮುಂಡೇಶ್ವರಿ ಫಿಲಂಸ್ ಬ್ಯಾನರ್‌ನಡಿ ಈ ಸಿನಿಮಾ ಮಾಡಲು ಅವರು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಾನೇ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಸಿನಿಮಾ ಮಾಡುತ್ತೇನೆ. ಸಚಿವ ಪುಟ್ಟರಾಜು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎಂದು ಹೇಳಿದ್ದರು. ಹಾಗಾಗಿ, ‘ಎಲ್ಲಿದ್ದೀಯಪ್ಪಾ...’ ಚಿತ್ರದ ಟೈಟಲ್‌ನ ಹಿಂದೆ, ಮುಂದೆ ಯಾವುದೇ ಹೆಸರನ್ನು ನೀಡಬಾರದು. ಇದು ವಿವಾದಾತ್ಮಕ ಟೈಟಲ್ ಅಲ್ಲ ಎಂದು ಗಣೇಶ್ ಮಂಡಳಿಗೆ ಕೋರಿದ್ದಾರೆ ಎನ್ನಲಾಗಿದೆ.
‘ಜೋಡೆತ್ತು’ ಟೈಟಲ್ ಎ.ಜಿ. ರಾಮಮೂರ್ತಿ ಅವರ ಪಾಲಾಗಿದೆ. ಕುಟೀರ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ನಟ ದರ್ಶನ್ ಅವರೇ ಈ ಸಿನಿಮಾದ ನಾಯಕ ನಟರಾಗಿ ನಟಿಸಲಿದ್ದಾರೆ. ಕಥೆ ಕೂಡ ಸಿದ್ಧವಾಗುತ್ತಿದೆ ಎಂದು ರಾಮಮೂರ್ತಿ ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ವೈರಲ್ ಆದ ಈ ಪದಗಳನ್ನೇ ಸಿನಿಮಾದ ಟೈಟಲ್ ಆಗಿ ನೀಡುವಂತೆ ಹಲವು ಮಂದಿ ಚೇಂಬರ್ ಅರ್ಜಿ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಯಾರೊಬ್ಬರಿಗೂ ಟೈಟಲ್ ನೀಡುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿತ್ತು.
ಈ ಕುರಿತು ಅಧಿಕೃತ ಮಾಹಿತಿ ನೀಡಲು ಮಂಡಳಿಯ ಅಧ್ಯಕ್ಷ ಚಿನ್ನೇಗೌಡ ನಿರಾಕರಿಸಿದರು. ‘ಟೈಟಲ್‌ಗಳು ಇನ್ನೂ ಯಾವೊಬ್ಬ ನಿರ್ಮಾಪಕರಿಗೂ ನೀಡಿಲ್ಲ. ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.