1980ರ ದಶಕದಲ್ಲಿ ಬಾಲಿವುಡ್‌ನಲ್ಲಿ ‘ಅರ್ಜುನ್’, ‘ಬೇತಾಬ್’ನಂತಹ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ರಾಹುಲ್ ರಾವೈಲ್ ಆರ್.ವಿ ವಿಶ್ವವಿದ್ಯಾಲಯವು ಇತ್ತೀಚೆಗಷ್ಟೇ ತನ್ನ ಸಿನಿಮಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಾಸ್ಟರ್ ಕ್ಲಾಸ್‌ನಲ್ಲಿ ಭಾಗಿಯಾಗಿದ್ದರು. ಬಳಿಕ ಮಾತಿಗೆ ಸಿಕ್ಕ ಅವರು ಇಂದಿನ ಸಿನಿಮಾ ಜಗತ್ತಿನ ಟ್ರೆಂಡ್‌ನ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು...
‘ಸಿನಿಮಾ ಜಗತ್ತಿನಲ್ಲಿ ಎಐ ತಂತ್ರಜ್ಞಾನದ ಬಳಕೆ ಕುರಿತು ಬಹಳ ಚರ್ಚೆ ನಡೆಯುತ್ತಿದೆ. ಹೊಸ ತಂತ್ರಜ್ಞಾನಗಳು ಬಂದಾಗ ಈ ರೀತಿ ಚರ್ಚೆ ಸಹಜ. ಬಾಹುಬಲಿಯಲ್ಲಿ ರಾಜಮೌಳಿ ವಿಎಫ್‌ಎಕ್ಸ್, ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸರಿಯಾದ ಜಾಗದಲ್ಲಿ ಬಳಸಿದ್ದರು. ಹೀಗಾಗಿ ಸಿನಿಮಾ ದೃಶ್ಯ ವೈಭವದಿಂದ ಕೂಡಿದೆ ಎನಿಸಿತು. ಮನುಷ್ಯನಿಲ್ಲದೆ ಎಐ ಬಳಸಲು ಸಾಧ್ಯವಿಲ್ಲ. ನಿರ್ದೇಶಕ ಅವನ ಕಲ್ಪನೆಯನ್ನು ಎಐಗೆ ಹೇಳಬೇಕು. ಅದನ್ನು ಸರಿಯಾಗಿ ಬಳಸಿಕೊಂಡರೆ ಲಾಭವಿದೆ. ಎಐನಿಂದ ಹಾನಿಯಿಲ್ಲ. ಎಐಗೆ ಸ್ಕ್ರಿಪ್ಟ್ ಬರೆಯಲು ಹೇಳಿದರೆ ಅದು ಟೆರಿಬಲ್ ಆಗಿರುತ್ತದೆ. ಯಾಕೆಂದರೆ ಅದಕ್ಕೆ ಮೆದುಳಿಲ್ಲ. ಮಕ್ಕಳು ಪರೀಕ್ಷೆಯಲ್ಲಿ ಎಐ ಬಳಸಲು ಸಾಧ್ಯವಿಲ್ಲ. ಹೀಗಾಗಿ ಎಐನಿಂದ ಚಿತ್ರರಂಗ ಮುಳುಗುತ್ತದೆ ಎಂದು ಭಯಪಡುವ ಅಗತ್ಯವಿಲ್ಲ’ ಎಂದು ಚಿತ್ರರಂಗದ ಇತ್ತೀಚಿನ ತಂತ್ರಜ್ಞಾನದ ಕುರಿತು ಅವರು ವಿವರಿಸಿದರು.
‘ರಾಜ್‌ಕಪೂರ್ ನನ್ನ ಗುರು. ಅವರು ಅಂದು ನೀಡಿದ ಮಾರ್ಗದರ್ಶನ ನನ್ನ ಕೆಲಸದಲ್ಲಿ ಕಾಣುತ್ತದೆ. ಅವರ ‘ಸಂಗಂ’ ರೀತಿಯ ಕ್ಲೈಮ್ಯಾಕ್ಸ್ ನನಗೆ ಈವರೆಗೆ ಸಿಕ್ಕಿಲ್ಲ. ಅದನ್ನೇ ‘ಲವ್‌ಸ್ಟೋರಿ’ಯಲ್ಲಿ ಯತ್ನಿಸಿದೆ. ಆದರೆ ಅದನ್ನು ಪ್ರಸ್ತುತಪಡಿಸುವಲ್ಲಿ ವಿಫಲವಾದೆ. ಎಷ್ಟೋ ಜನ ಅಂದುಕೊಂಡ ಆಲೋಚನೆಯನ್ನು ದೃಶ್ಯವಾಗಿ ಪ್ರಸ್ತುತಪಡಿಸುವಲ್ಲಿ ಎಡವುತ್ತಾರೆ. ಅನುಭವ ಎಂಬುದು ಸಿನಿಮಾದ ಟೇಬಲ್‌ನಲ್ಲಿ ಮುಖ್ಯವಾಗುತ್ತದೆ. 1980ರ ದಶಕದವರೆಲ್ಲ ವಿಭಿನ್ನ ಮಟ್ಟದ ಅನುಭವ ಹೊಂದಿದ್ದರು. ಹೀಗಾಗಿ ಯಾವ ತಂತ್ರಜ್ಞಾನದ ಸಹಾಯವಿಲ್ಲದೆ ಅದ್ಭುತ ಸಿನಿಮಾಗಳನ್ನು ನೀಡಿದರು. ನಿಮ್ಮ ಸ್ವಂತ ಅನುಭವ ಮುಖ್ಯವಾಗುತ್ತದೆ. ಅದೇ ಕಥೆಯಾಗುತ್ತದೆ’ ಎಂದು ನಾಲ್ಕು ದಶಕಗಳ ಹಿಂದಿನ ಚಿತ್ರರಂಗವನ್ನು ನೆನಪಿಸಿಕೊಂಡರು.
‘ಒಂದು ಸಿನಿಮಾ ಜನಕ್ಕೆ ಯಾಕೆ ಇಷ್ಟವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಯಾ ಕಾಲಘಟ್ಟದಲ್ಲಿ ನೋಡುಗನ ದೃಷ್ಟಿಕೋನ ಬದಲಾಗುತ್ತದೆ. ಆದರೆ ಭಾವನೆಗಳು ಎಲ್ಲ ಕಾಲಕ್ಕೂ ಒಂದೆ. ಸಿನಿಮಾ ಗೆಲುವಿಗೆ ಸಿದ್ಧಸೂತ್ರವಿಲ್ಲ. ಜನ ಫ್ಯಾಂಟಸಿಯನ್ನು ತೆರೆಯ ಮೇಲೆ ಹೆಚ್ಚು ನೋಡಲು ಇಷ್ಟಪಡುತ್ತಾರೆ ಎನ್ನಿಸುತ್ತದೆ. ಇತ್ತೀಚೆಗೆ ಹಿಂದಿಯ ‘ಸ್ತ್ರೀ–2’ ಸಿನಿಮಾ ನೋಡಿದೆ. ಇಷ್ಟವಾಯ್ತು. ಇವತ್ತಿಗೆ ಬೇಕಾದ ಫ್ಯಾಂಟಸಿ ಅದರಲ್ಲಿದೆ’ ಎಂದು ಅಭಿಪ್ರಾಯಪಟ್ಟರು.
‘ಇವತ್ತು ನಿರ್ದೇಶಕನಿಗೆ ಹೆಚ್ಚು ಸ್ವತಂತ್ರವಿಲ್ಲ. ಸಹ ಕಲಾವಿದರಿಂದ ಹಿಡಿದು ಎಲ್ಲರನ್ನೂ ಸೂಪರ್‌ಸ್ಟಾರ್ ನಿರ್ಧಾರ ಮಾಡುತ್ತಾನೆ. ಸೂಪರ್‌ಸ್ಟಾರ್ ಸಿನಿಮಾಗಳು ಬಿಸಿನೆಸ್. ಹೀಗಾಗಿ 2007ರ ನಂತರ ಮತ್ತೆ ಸಿನಿಮಾ ಮಾಡುವ ಸಾಹಸ ಮಾಡಲಿಲ್ಲ. ನಟನೆ ಶಾಲೆ ಪ್ರಾರಂಭಿಸಿದೆ. ಆದರೆ ಅಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದು ಹೆಚ್ಚು. ಹೀಗಾಗಿ ಅದನ್ನು ಮುಂದುವರಿಸಲು ಸಾಧ್ಯವಿಲ್ಲ ಎನ್ನಿಸಿತು. ಕನ್ನಡದಲ್ಲಿ ‘ಕಾಂತಾರ’, ‘ಕೆಜಿಎಫ್’ ಚಿತ್ರಗಳನ್ನು ನೋಡಿದ್ದೇನೆ. ಇವತ್ತು ಸಿನಿಮಾ ಎಂಬುದು ಗಡಿಗಳನ್ನು ದಾಟಿದೆ. ಕನ್ನಡ ಚಿತ್ರರಂಗ, ತೆಲುಗು ಸಿನಿಮಾ, ದಕ್ಷಿಣದ ಇಂಡಸ್ಟ್ರಿ ಎಂದೆಲ್ಲ ಇಲ್ಲ. ಇವತ್ತೇನಿದ್ದರೂ ಇದು ಭಾರತೀಯ ಚಿತ್ರರಂಗವಾಗಿದೆ. ಒಟಿಟಿಯಿಂದ ನಾವು ಜಾಗತಿಕ ಸಿನಿಮಾಗಳಿಗೆ ತೆರೆದುಕೊಂಡಿದ್ದೇವೆ. ಹಾಗಂತ ಚಿತ್ರಮಂದಿರದ ಸಂಸ್ಕೃತಿ ನಿಲ್ಲುವುದಿಲ್ಲ. ಮನರಂಜಿಸುವ ಸಿನಿಮಾಗಳನ್ನು ಜನ ಥಿಯೇಟರ್‌ನಲ್ಲಿಯೇ ನೋಡುತ್ತಾರೆ’ ಎಂದು ಅವರು ತಮ್ಮ ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.