ಇತ್ತೀಚೆಗೆ ಸದ್ದಿಲ್ಲದೇ ಮರೆಯಾಗಿದ್ದ ಮೀ ಟೂ ಪ್ರಕರಣ ಕಳೆದೆರಡು ದಿನಗಳಿಂದ ಮತ್ತೆ ಸದ್ದು ಮಾಡುತ್ತಿದೆ. ಈ ವಿಷಯವನ್ನು ಮತ್ತೆ ಮುಖ್ಯಭೂಮಿಕೆಗೆ ತಂದವರು ನಟಿ ಪಾಯಲ್ ಘೋಷ್. ತೆಲುಗು, ಇಂಗ್ಲಿಷ್, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಪಾಯಲ್ ಘೋಷ್ ‘ವರ್ಷಧಾರೆ’ ಸಿನಿಮಾದ ಮೂಲಕ ಚಂದನವನಕ್ಕೂ ಕಾಲಿರಿಸಿದ್ದರು. ಹಿಂದಿ ಕಿರುತೆರೆಯಲ್ಲೂ ಕಮಾಲ್ ಮಾಡಿದ್ದಾರೆ ಈ ನಟಿ.
ಪಾಯಲ್ ಈಗ ನಟ, ನಿರ್ಮಾಪಕ ಅನುರಾಗ್ ಕಶ್ಯಪ್ ಮೇಲೆ ಮೀ ಟೂ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಪಾಯಲ್ ಘೋಷ್ ‘ಅನುರಾಗ್ ಕಶ್ಯಪ್ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರೇ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಈ ಸೃಜನಶೀಲ ವ್ಯಕ್ತಿಯ ಹಿಂದಿನ ಮುಖದ ಬಗ್ಗೆ ದೇಶಕ್ಕೆ ಅರಿವಾಗಲಿ. ನನಗೆ ಗೊತ್ತು ಇದರಿಂದ ನನಗೆ ತೊಂದರೆಯಾಗಲಿದೆ. ನನ್ನ ಸುರಕ್ಷತೆಗೆ ಅಪಾಯವಿದೆ. ದಯವಿಟ್ಟು ಸಹಾಯ ಮಾಡಿ’ ಎಂದು ಬರೆದುಕೊಂಡಿದ್ದರು.
ಈ ಬಗ್ಗೆ ಸಂದರ್ಶನವೊಂದರಲ್ಲೂ ಹೇಳಿರುವ ಪಾಯಲ್ 'ಬಾಂಬೆ ವೆಲ್ವೆಟ್’ ಸಿನಿಮಾ ಮಾಡುವಾಗ ಈ ಘಟನೆ ನಡೆದಿತ್ತು ಎಂದಿದ್ದರು.
ಪಾಯಲ್ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನುರಾಗ್ ಕಶ್ಯಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಹಿಂದಿಯಲ್ಲಿ ಬರೆದುಕೊಂಡಿರುವ ಅನುರಾಗ್ ‘ನೀವು ನನ್ನ ಮೇಲೆ ಆರೋಪ ಹೊರಿಸಲು ತುಂಬಾ ಸಮಯ ತೆಗೆದುಕೊಂಡಿದ್ದೀರಾ. ಅದರ ಬಗ್ಗೆ ನನಗೆ ಬೇಸರವಿಲ್ಲ. ನನ್ನ ಮೇಲೆ ಆರೋಪ ಹೊರಿಸುವ ನೆಪದಲ್ಲಿ ಇತರ ಮಹಿಳೆಯರ ಹೆಸರನ್ನು ಎಳೆದು ತರುತ್ತಿದ್ದೀರಿ. ಒಬ್ಬ ಹೆಣ್ಣಾಗಿ ನೀವು ಇತರ ಹೆಣ್ಣುಮಕ್ಕಳ ಹೆಸರನ್ನು ಹಾಳು ಮಾಡುವುದು ಘನತೆಯಲ್ಲ. ಅದೇನೆ ಇರಲಿ, ನಾನು ಹೇಳುವುದು ಏನೆಂದರೆ ನನ್ನ ಮೇಲಿನ ಆರೋಪ ಎಲ್ಲವೂ ಆಧಾರರಹಿತವಾದದ್ದು’ ಎಂದಿದ್ದಾರೆ.
‘ನಾನು ಎಂದೂ ಅಂತಹ ನಡವಳಿಕೆ ತೋರಿದವನಲ್ಲ. ಅಂತಹ ಕೃತ್ಯಗಳನ್ನು ನಾನು ಸಹಿಸುವುದಿಲ್ಲ. ನೋಡೋಣ ಮುಂದೇನಾಗುತ್ತದೆ ಎಂದು. ನಿಮ್ಮ ವಿಡಿಯೊಗಳನ್ನು ನೋಡುವಾಗ ನೀವು ಹೇಳಿರುವುದರಲ್ಲಿ ಎಷ್ಟು ಸತ್ಯವಿದೆ, ಎಷ್ಟು ಅಸತ್ಯವಿದೆ ಎಂಬುದು ಅರ್ಥವಾಗುತ್ತದೆ. ನಾನು ಪ್ರೀತಿ ಹಾಗೂ ಹಾರೈಕೆಯನ್ನು ಮುಂದುವರೆಸಲು ಬಯಸುತ್ತೇನೆ. ನೀವು ಇಂಗ್ಲಿಷ್‌ನಲ್ಲಿ ಮಾತನಾಡುವಾಗ ನಾನು ಹಿಂದಿಯಲ್ಲಿ ಉತ್ತರಿಸಿದ್ದಕ್ಕೆ ಕ್ಷಮೆ ಇರಲಿ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.