ನವದೆಹಲಿ: 'ಮಿ.ಇಂಡಿಯಾ', 'ಬ್ಯಾಂಡಿಟ್ ಕ್ವೀನ್', 'ಎಲಿಜಬೆತ್' ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿರುವ ನಿರ್ದೇಶಕ ಶೇಖರ್ ಕಪೂರ್ ಅವರನ್ನು ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
'ಸಂಬಂಧ ಪಟ್ಟ ಇಲಾಖೆಯು ಅನುಮೋದನೆಯೊಂದಿಗೆ, ಶೇಖರ್ ಕಪೂರ್ ಅವರನ್ನು ಗೋವಾದಲ್ಲಿ ನಡೆಯಲಿರುವ 55ನೇ ಹಾಗೂ 56ನೇ ಆವೃತ್ತಿಯ ಐಎಫ್‌ಎಫ್‌ಐ ಚಿತ್ರೋತ್ಸವಗಳಿಗೆ ನಿರ್ದೇಶಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ' ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ 78 ವರ್ಷದ ಕಪೂರ್, ‘ಇಂದೊಂದು ಗೌರವ, ಜವಾಬ್ದಾರಿ. ನಿಮ್ಮ ವಿಶ್ವಾಸಕ್ಕೆ ನಾನು ಯೋಗ್ಯ ಎಂದು ಪರಿಗಣಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ ಭಾರತೀಯ ನಿರ್ದೇಶಕರಲ್ಲಿ ಕಪೂರ್ ಪ್ರಮುಖರು. ಅವರು ನಿರ್ದೇಶಿಸಿದ್ದ ‘ಎಲಿಜಬೆತ್’ (1998) ಮತ್ತು ‘ಎಲಿಜಬೆತ್: ದಿ ಗೋಲ್ಡನ್ ಏಜ್’ (2007) ಪ್ರಸಿದ್ಧಿ ಪಡೆದಿವೆ.
ಕಪೂರ್ ಅವರು 54ನೇ ಆವೃತ್ತಿಯ ಐಎಫ್‌ಎಫ್‌ಐನ ‘ಅಂತರರಾಷ್ಟ್ರೀಯ ಸ್ಪರ್ಧೆ’ ವಿಭಾಗದ ತೀರ್ಪುಗಾರ ಮುಖ್ಯಸ್ಥರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.