ಮುಂಬೈ: ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಡೆಲ್ಲಿ ಫೈಲ್ಸ್’ ಚಿತ್ರಕ್ಕೆ ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ.
ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ‘ಸಮಾಜದಲ್ಲಿ ಶಾಂತಿಗೆ ಭಂಗ ತರುವುದನ್ನು ನಿಲ್ಲಿಸಬೇಕು’ ಎಂದು ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್ ಆಗ್ರಹಿಸಿದೆ.
ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಇತ್ತೀಚೆಗೆ ದೇಶದಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ದಿ ಕಾಶ್ಮೀರ್ ಫೈಲ್ಸ್’ಯಶಸ್ಸಿನ ಬೆನ್ನಲ್ಲೇ ಅಗ್ನಿಹೋತ್ರಿ ಅವರು ಹೊಸ ಸಿನಿಮಾ ‘ದಿ ಡೆಲ್ಲಿ ಫೈಲ್ಸ್' ತಯಾರಿ ಶುರು ಮಾಡಿರುವುದಾಗಿ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಸಿಖ್ ಅಸೋಸಿಯೇಷನ್ ಪ್ರಕಟಣೆ ಹೊರಡಿಸಿದೆ.
‘ದಿ ಡೆಲ್ಲಿ ಫೈಲ್ಸ್’ನಲ್ಲಿ 1984ರ ಸಿಖ್ ವಿರೋಧಿ ದಂಗೆಗಳ ಕುರಿತಾದ ಕಥಾಹಂದರವನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ನಿರ್ದೇಶಕ ಅಗ್ನಿಹೋತ್ರಿ ಇದುವರೆಗೆ ಚಿತ್ರಕಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.
ಸೃಜನಶೀಲ ಅಭಿವ್ಯಕ್ತಿ ಮತ್ತುವೈಯಕ್ತಿಕ ಲಾಭದ ಉದ್ದೇಶದಿಂದ ಸಿಖ್ ದಂಗೆಗಳಂತಹ ಮನುಕುಲದ ದುರದೃಷ್ಟಕರಘಟನೆಗಳನ್ನು ವ್ಯಾಪಾರೀಕರಣ ಮಾಡುವುದನ್ನು ವಿರೋಧಿಸುವುದಾಗಿ ಸಿಖ್ ಅಸೋಸಿಯೇಷನ್ ಪ್ರತಿಕಾ ಪ್ರಕಟಣೆ ಹೊರಡಿಸಿದೆ.
‘ಸಮಾಜದಲ್ಲಿ ಈಗಾಗಲೇ ಧ್ರುವೀಕರಣವಿದೆ ಮತ್ತು ವಿವಿಧ ಸಮುದಾಯಗಳ ಮಧ್ಯೆ ದ್ವೇಷವೂ ಇದೆ. ಇತಿಹಾಸದ ದುರದೃಷ್ಟಕರದುರಂತಗಳನ್ನು ವಾಣಿಜ್ಯಾತ್ಮಕ ಉದ್ದೇಶದಿಂದ (ಸಿನಿಮಾ) ಚಿತ್ರೀಕರಿಸುವುದುಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ’ ಎಂಬುದು ಸಿಖ್ ಅಸೋಸಿಯೇಷನ್ ವಾದವಾಗಿದೆ.
ಅಗ್ನಿಹೋತ್ರಿ ಹೇಳಿದ್ದೇನು?
ಸಿಖ್ ಅಸೋಸಿಯೇಷನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ವಿವೇಕ್ ಅಗ್ನಿಹೋತ್ರಿ, ನಿರ್ಮಾಪಕನಾಗಿ ಮತ್ತು ನನ್ನಆತ್ಮಸಾಕ್ಷಿಗೆ ಅನುಗುಣವಾಗಿ ಸಿನಿಮಾ ಮಾಡುವ ಹಕ್ಕು ಹೊಂದಿದ್ದೇನೆ. ಚಿತ್ರ ಶೀರ್ಷಿಕೆ ಹೊರತಾಗಿ ಕಥೆಯ ಬಗ್ಗೆ ಬಹಿರಂಗಪಡಿಸಿಲ್ಲ ಎಂದು ಹೇಳಿದ್ದಾರೆ.
‘ಇದು ಯಾವ ಸಂಘಟನೆ ಎಂದು ನನಗೆ ತಿಳಿದಿಲ್ಲ. ನಾನು ಭಾರತೀಯ.ದೇಶ ನನಗೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ನನ್ನ ಆತ್ಮಸಾಕ್ಷಿಯು ಏನು ಹೇಳುತ್ತದೋ ಅದನ್ನು ಮಾಡುತ್ತೇನೆ. ನಾನು ಯಾರ ಬೇಡಿಕೆ ಅಥವಾ ಸಂಘಟನೆಯ ಸೇವಕನಲ್ಲ’ಎಂದು ಅಗ್ನಿಹೋತ್ರಿ ತಿಳಿಸಿದ್ದಾರೆ.
ಹೊಸ ಚಿತ್ರದ ಕಥೆಯನ್ನು ಬಹಿರಂಗಪಡಿಸಿಲ್ಲ. ಕಥೆಯ ಬಗ್ಗೆ ಜನರೇ ಊಹೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನಾನು ಮಾಡುವ ಸಿನಿಮಾವನ್ನು ಪ್ರದರ್ಶಿಸಬೇಕೆ ಅಥವಾ ಬೇಡವೆ ಎಂಬುದನ್ನು ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ನಿರ್ಧರಿಸುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.