ಹೊಸಬರ ಹೊಸ ಪ್ರಯೋಗವಾದ ‘ಬಿಟಿಎಸ್’ ಸಿನಿಮಾ ಇಂದು (ನ.8) ತೆರೆಕಾಣುತ್ತಿದ್ದು, ಜೊತೆಗೆ ದಿನಕರ್ ತೂಗುದೀಪ ನಿರ್ದೇಶನದ ‘ನವಗ್ರಹ’ ಸಿನಿಮಾ ರಿರಿಲೀಸ್ ಆಗುತ್ತಿದೆ.
ಬಿಟಿಎಸ್: ಇದು ಐವರು ಸಿನಿಮೋತ್ಸಾಹಿಗಳ ಕನಸು. ‘ಬಿಟಿಎಸ್’ ಎಂದರೆ ‘ಬಿಹೈಂಡ್ ದಿ ಸೀನ್ಸ್’ ಎಂದರ್ಥ. ತೆರೆಯ ಹಿಂದಿನ ಕಥೆಗಳು ಈ ಸಿನಿಮಾ. ಐದು ಕಥೆಗಳು ಈ ಸಿನಿಮಾದಲ್ಲಿವೆ. ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ಕಾಫಿ, ಸಿಗರೇಟ್ಸ್ ಅಂಡ್ ಲೈನ್ಸ್’, ‘ಹೀರೋ’, ‘ಬ್ಲ್ಯಾಕ್ ಬಸ್ಟರ್’ ಹಾಗೂ ‘ಸುಮೋಹ’ ಎಂಬ ಕಥೆಗಳ ಸಮ್ಮಿಲನ ಇದು. ಬಿಟಿಎಸ್ ಚಿತ್ರವನ್ನು ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್.ಶಂಕದ್, ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರೇ ಸಿನಿಮಾಗೆ ಬಂಡವಾಳ ಹಾಕಿರುವುದು ವಿಶೇಷ. ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ಮೇದಿನಿ ಕೆಳಮನೆ, ಆಹನ್, ಜಹಾಂಗೀರ್ ನೀನಾಸಂ ಸೇರಿದಂತೆ ಮತ್ತಿತರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ನವಗ್ರಹ’: ದಿನಕರ್ ತೂಗುದೀಪ ನಿರ್ದೇಶಿಸಿದ ದರ್ಶನ್ ಅಭಿನಯದ ಈ ಸಿನಿಮಾ ಮರುಬಿಡುಗಡೆಯಾಗುತ್ತಿದೆ. 2008ರ ನವೆಂಬರ್ 7ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ 16 ವರ್ಷಗಳ ಬಳಿಕ ರಿರಿಲೀಸ್ ಆಗುತ್ತಿದೆ. ಇದು ದಿನಕರ್ ನಿರ್ದೇಶನದ ಎರಡನೇ ಸಿನಿಮಾ. ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳಿತೆರೆಯ ಮೇಲೆ ತಂದಿದ್ದರು ದಿನಕರ್. ಚಿನ್ನದ ಅಂಬಾರಿಯನ್ನು ಕದಿಯಲು ಯತ್ನಿಸುವ ಕಥೆಯನ್ನೊಳಗೊಂಡ ಈ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್, ಶರ್ಮಿಳಾ ಮಾಂಡ್ರೆ, ತರುಣ್ ಸುಧೀರ್, ಸೃಜನ್ ಲೋಕೇಶ್ ಮತ್ತಿತರರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.