ಮುಂಬೈ: ಬುಡಕಟ್ಟು ಸಮುದಾಯದವರ ಉಡುಪು ಧರಿಸಿ ಅಪಹಾಸ್ಯ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಜಯ್ ಟಿರ್ಕಿ ಎಂಬುವವರು ಜಾರ್ಖಂಡ್‌ನಲ್ಲಿ ರಾಖಿ ಸಾವಂತ್ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಖಿ ಸಾವಂತ್ ಇತ್ತೀಚೆಗೆ ಬುಡಕಟ್ಟು ಮಹಿಳೆಯರ ಉಡುಪು ಧರಿಸಿದ್ದ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
‘ರಾಖಿ, ಬುಡಕಟ್ಟು ಸಮುದಾಯದವರ ವೇಷ ಭೂಷಣಕ್ಕೆ ಅಪಮಾನ ಮಾಡಿದ್ದಾರೆ. ಬಟ್ಟೆಗಳನ್ನು ಅವರು ಅರೆ ನಗ್ನ ರೀತಿಯಲ್ಲಿ ಧರಿಸಿದ್ದಾರೆ. ಇದರಿಂದ ನಮ್ಮ ಸಮುದಾಯದ ಮಹಿಳೆಯರಿಗೆ ಅವಮಾನವಾಗಿದೆ. ನಾವು ಗೌರವಿಸುವ ಸಂಪ್ರದಾಯಕ್ಕೆ ಧಕ್ಕೆಯಾಗಿದ್ದು, ರಾಖಿ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳಬೇಕು’ ಎಂದು ಅಜಯ್ ಟಿರ್ಕಿ ದೂರಿನಲ್ಲಿ ವಿವರಿಸಿದ್ದಾರೆ.
1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ರಾಖಿ ಸಾವಂತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಜತೆಗೆ ರಾಖಿ ಕೂಡಲೇ ಕ್ಷಮೆ ಯಾಚಿಸುವಂತೆ ಟಿರ್ಕಿ ಒತ್ತಾಯಿಸಿದ್ದರು.
ಕ್ಷಮೆ ಕೋರಿದ ರಾಖಿ: ‘ಬುಡಕಟ್ಟು ಸಮುದಾಯದವರ ಭಾವನೆಗಳಿಗೆ ದಕ್ಕೆಯಾಗಿರುವುದಕ್ಕೆ ಕ್ಷಮೆ ಕೋರುತ್ತೇನೆ. ನನ್ನನ್ನು ಸಹೋದರಿ ಎಂದು ಭಾವಿಸಿ ಕ್ಷಮಿಸಿ’ ಎಂದು ಬುಡಕಟ್ಟು ಸಮುದಾಯದ ಸದಸ್ಯರಿಗೆ ರಾಖಿ ಸಾವಂತ್ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.