ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ನಡೆಸಿರುವ ಸೂಕ್ಷ್ಮ ಸಂವೇದನೆಯುಳ್ಳ ನಟಿ ಶ್ವೇತಾ ಶ್ರೀವಾಸ್ತವ್ ಈ ಬಾರಿ ದೀಪಾವಳಿಯ ಆಚರಣೆಯಿಂದ ಪಟಾಕಿಗಳನ್ನು ದೂರವಿಡುವ ಸಂಕಲ್ಪ ಮಾಡಿದ್ದಾರೆ. ಜತೆಗೆ ಇಸ್ಕಾನ್ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ದೀಪದಾರತಿ ಬೆಳಗುವ ವಿಶೇಷ ಅವಕಾಶ ಪಡೆದ ಖುಷಿಯಲ್ಲಿ ಜೀಕುತ್ತಿದ್ದಾರೆ.
‘ದೀಪಾವಳಿ ಅಂದರೆ ಮೊದಲಿನಿಂದಲೂ ನಮಗೆ ಸಡಗರ ತರುವ ಹಬ್ಬ. ಈ ವರ್ಷದ ದೀಪಾವಳಿ ಆಚರಣೆ ವೇಳೆ ಪಟಾಕಿ ಹಚ್ಚದಿರುವ ತೀರ್ಮಾನಕ್ಕೆ ಬಂದಿದ್ದೇನೆ. ಹೆಚ್ಚು ಸದ್ದು ಮಾಡುವ ಪಟಾಕಿಗಳನ್ನು ಮೊದಲಿನಿಂದಲೂ ಬಳಸಿದ್ದಿಲ್ಲ. ಸುರ್‌ಸುರ್ ಬತ್ತಿ, ಫ್ಲವರ್ ಪಾಟ್‌ಗಳನ್ನು ಹಚ್ಚಿ ಹಬ್ಬವನ್ನು ಸಂಭ್ರಮಿಸುತ್ತಿದ್ದೆವು. ಆದರೆ, ಕೊರೊನಾ ಕಾರಣದಿಂದಾಗಿ ಈ ಬಾರಿ ಪಟಾಕಿ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡುವ ಸಂಕಲ್ಪ ಮಾಡಿದ್ದೇನೆ. ಈಗಾಗಲೇ ವಾಯುಮಾಲಿನ್ಯದ ಮಟ್ಟ ಮಿತಿ ಮೀರಿದೆ. ಹಬ್ಬದ ನೆಪದಲ್ಲಿ ನಾವು ಅದನ್ನು ಮತ್ತಷ್ಟು ಹಾಳು ಮಾಡಬಾರದು ಎಂಬ ಕಾಳಜಿಯೂ ಈ ನಿರ್ಧಾರದ ಹಿಂದಿದೆ’ ಎನ್ನುತ್ತಾರೆ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಾಯಕಿ ಶ್ವೇತಾ.
‘ಮನೆಯಲ್ಲಿ ಮಕ್ಕಳು, ಹಿರಿಯರು ಇರುತ್ತಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿ ತುಂಬ ಜಾಗರೂಕತೆಯಿಂದ ಇರಬೇಕು. ಹಾಗಾಗಿ, ಈ ಸಲದ ಹಬ್ಬದಲ್ಲಿ ಪಟಾಕಿ ಹಚ್ಚದೇ; ದೀಪ ಬೆಳಗಿಸುವುದು ಮತ್ತು ಮನೆ ತುಂಬ ರಂಗೋಲಿ ಬಿಡುವ ಯೋಜನೆ ಇದೆ. ಈ ಎರಡೂ ಚಟುವಟಿಕೆಗಳು ನನ್ನ ಮಗಳಿಗೆ ತುಂಬ ಖುಷಿ ನೀಡುತ್ತವೆ’ ಎನ್ನುತ್ತಾರೆ ನಟಿ ಶ್ವೇತಾ.
‘ನಮ್ಮ ಮನೆಯಲ್ಲಿ ದೀಪಾವಳಿ ಹಬ್ಬದ ವಿಶೇಷ ತಿನಿಸು ಎಂದರೆ ಕಜ್ಜಾಯ. ಪತಿ ಮತ್ತು ನನಗೆ ಇಬ್ಬರಿಗೂ ಸಿಹಿ ತಿನಿಸುಗಳೆಂದರೆ ತುಂಬ ಇಷ್ಟ. ಹಬ್ಬದ ನೆಪದಲ್ಲಾದರೂ ಮನಸ್ಸಿಗೆ ತೃಪ್ತಿ ನೀಡುವಷ್ಟು ಸಿಹಿ ತಿನ್ನುವ ಅವಕಾಶ ಒದಗಿ ಬರಲಿದೆ. ಏಕೆಂದರೆ, ಈಗಾಗಲೇ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಹಬ್ಬದ ನಂತರ ಸಿನಿಮಾಗಳ ಚಿತ್ರೀಕರಣ ಆರಂಭಗೊಳ್ಳಲಿದೆ. ಆಗ ಡಯಟ್‌ನಲ್ಲಿ ಇರಬೇಕಿರುವುದರಿಂದ ಸಿಹಿ ತಿನ್ನಲಿಕ್ಕೆ ಅವಕಾಶವೇ ಸಿಗುವುದಿಲ್ಲ’ ಎಂದು ಹೇಳಿ ನಕ್ಕರು ಅವರು.
‘ಈ ದೀಪಾವಳಿಯಂದು ಇಸ್ಕಾನ್ ದೇವಸ್ಥಾನದವರು ದೀಪೋತ್ಸವದಲ್ಲಿ ಕೃಷ್ಣನಿಗೆ ಆರತಿ ಬೆಳಗಲು ಆಹ್ವಾನಿಸಿದ್ದಾರೆ. ಹಾಗಾಗಿ, ಈ ಬಾರಿಯ ನಮ್ಮ ದೀಪಾವಳಿ ಆಚರಣೆ ತುಂಬ ವಿಶೇಷವಾಗಿ ಇರಲಿದೆ’ ಎಂದು ಹೇಳುವ ಶ್ವೇತಾ ಅವರ ಮನೆಯಲ್ಲಿ ಹಬ್ಬದ ದಿನ ಬಂಧುಗಳು, ಸ್ನೇಹಿತರನ್ನು ಕರೆದು ಊಟ ನೀಡುವ ಸಂಪ್ರದಾಯ ಇದೆಯಂತೆ. ದಾನ, ಧರ್ಮ ಮಾಡುವುದರಲ್ಲಿ ಸಿಗುವ ಖುಷಿ ಮತ್ತೆ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಪ್ರಾಣಿ, ಪಕ್ಷಿ, ಗಿಡ– ಮರಗಳಿಗೆ ತೊಂದರೆ ಆಗದಂತೆ ಹಬ್ಬ ಮಾಡುವುದು ಹೆಚ್ಚು ಅರ್ಥಪೂರ್ಣ ಎಂಬುದು ಶ್ವೇತಾ ನಿಲುವು.
ಬಾಂಧವ್ಯ ಗಟ್ಟಿಗೊಳಿಸುವ ಬೆಳಕಿನ ಹಬ್ಬ
ನಟಿ ಚಂದನಾ ಗೌಡ ಫ್ಯಾಷನ್, ಸಿನಿಮಾ, ಕಿಕ್ ಬಾಕ್ಸಿಂಗ್ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಕಲಾವಿದೆ. ‘ಮುಂದುವರಿದ ಅಧ್ಯಾಯ’ ಮತ್ತು ‘ರಂಗೀಲಾಲ’ ಕನ್ನಡ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಚಂದನಾ, ಈ ಸಲದ ದೀಪಾವಳಿ ಹಬ್ಬದ ಸಂಭ್ರಮವನ್ನು ವಿವರಿಸುವುದು ಹೀಗೆ:
‘ದೀಪಾವಳಿ ಅಂದರೆ ನಮಗೆ ಸಡಗರದ ಹಬ್ಬ. ಬೆಳಕಿನ ಹಬ್ಬವನ್ನು ಪ್ರತಿವರ್ಷ ಕೂಡ ಅದ್ಧೂರಿಯಾಗಿಯೇ ಆಚರಿಸುತ್ತೇವೆ. ಹಬ್ಬದ ದಿನ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆಗಳನ್ನು ಧರಿಸುವುದು, ಸ್ನೇಹಿತರು– ಸಂಬಂಧಿಕರೊಂದಿಗೆ ಊಟ ಸವಿಯುವುದು ರೂಢಿ. ನಮ್ಮ ಮನೆಯಲ್ಲಿ ಕಜ್ಜಾಯ ದೀಪಾವಳಿ ಸ್ಪೆಷಲ್ ಸಿಹಿ ತಿನಿಸು.
ದೀಪಾವಳಿಯಂದು ಲಕ್ಷ್ಮೀ ಪೂಜೆ ನಡೆಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹೆಣ್ಣುಮಕ್ಕಳಿಗೆ ಹಬ್ಬ ಹಾಗೂ ಶುಭ ಸಮಾರಂಭಗಳಲ್ಲಿ ವಿಶೇಷವಾಗಿ ರೆಡಿ ಆಗುವುದೆಂದರೆ ಅಚ್ಚುಮೆಚ್ಚು. ಅದೇರೀತಿ ನಾನು ಕೂಡ ಚೆನ್ನಾಗಿ ರೆಡಿಯಾಗಿ, ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇನೆ. ದೀಪಾವಳಿ ಹಬ್ಬದಲ್ಲಿ ನೆಂಟರು, ಆತ್ಮೀಯರ ನಡುವೆ ಶುಭಾಶಯ ವಿನಿಮಯ ಆಗುತ್ತದೆ. ಮೊದಲಿನಿಂದಲೂ ಪಟಾಕಿ ಸಿಡಿಸುವುದೆಂದರೆ ಇಷ್ಟ ಇಲ್ಲ. ಅದರ, ಬದಲಿಗೆ ಮನೆ ತುಂಬ ದೀಪಗಳನ್ನು ಬೆಳಗಿಸುವ ಆಸೆ ನನ್ನದು’ ಎಂದು ಹೇಳಿದ ಚಂದನಾ, ಬೆಳದಿಂಗಳಿನಂತಹ ನಗು ತುಳುಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.