ADVERTISEMENT

ಇಂದು ಕನ್ನಡದ ನಾಲ್ಕು ಚಿತ್ರಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 19:58 IST
Last Updated 17 ಅಕ್ಟೋಬರ್ 2024, 19:58 IST
<div class="paragraphs"><p>ರಾಧಿಕಾ ಮಾಲಿ ಪಾಟೀಲ</p></div>

ರಾಧಿಕಾ ಮಾಲಿ ಪಾಟೀಲ

   

ಮರ್ಫಿ:

ಪ್ರಭು ಮುಂಡ್ಕೂರ್, ರೋಶಿನಿ ಪ್ರಕಾಶ್‌ ಜೋಡಿಯಾಗಿ ನಟಿಸಿರುವ ಚಿತ್ರ ಇಂದು (ಅ.18) ಬಿಡುಗಡೆಗೊಳ್ಳುತ್ತಿದೆ. ಸ್ಯಾಂಡಲ್‌ವುಡ್‌ನ ಹಲವು ನಟ,ನಟಿಯರು ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು. ಬಿ.ಎಸ್.ಪ್ರದೀಪ್‌ ವರ್ಮಾ ಚಿತ್ರವನ್ನು ನಿರ್ದೇಶಿಸಿರುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. 

ADVERTISEMENT

‘ಕೆಲವೊಮ್ಮೆ ನಟರಿಗೆ ಒಂದು ಕಥೆ ಕಾಡುತ್ತಿರುತ್ತದೆ. ಈ ರೀತಿ ಕಥೆ ಮಾಡಬೇಕು ಎನ್ನಿಸುತ್ತದೆ. ‘ಮರ್ಫಿ’ ಕಥೆ ಕೂಡ ನನ್ನನ್ನು ತುಂಬಾ ಕಾಡಿತ್ತು. ಈ ಚಿತ್ರ ಜನರಿಗೆ ಸಿನಿಮ್ಯಾಟಿಕ್ ಫೀಲ್ ಕೊಡುತ್ತದೆ. ಇದಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ’ ಎಂದಿದ್ದಾರೆ ನಟ ಪ್ರಭು.

‘ಪ್ರೀತಿ, ಭಾವನೆ, ನೆನಪುಗಳ ಸುತ್ತ ಸಾಗುವ ರೋಮ್ಯಾಂಟಿಕ್‌ ಪ್ರೇಮಕಥಾಹಂದರವಿದೆ. ಕನ್ನಡದ ಬಹುತೇಕ ನಟ, ನಟಿಯರು ನಮ್ಮ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ’ ಎಂದು ಬಿ.ಎಸ್.ಪ್ರದೀಪ್‌ ವರ್ಮಾ ಹೇಳಿದ್ದಾರೆ. 

ಇಳಾ ವೀರಮಲ್ಲ, ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹಿರೇಮಠ, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಹೇಶ ತೊಗಟ ಸಂಕಲನ, ಆದರ್ಶ ಆರ್ ಛಾಯಾಚಿತ್ರಗ್ರಹಣವಿದೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಅರ್ಜುನ್ ಜನ್ಯ, ರಜತ್ ಹೆಗಡೆ, ಕೀರ್ತನ್ ಹೊಳ್ಳ ಮತ್ತು ಸಿಲ್ವೆಸ್ಟರ್ ಪ್ರದೀಪ್ ಸಂಗೀತ ನಿರ್ದೇಶನ ಮಾಡಿದ್ದು, ಸಿಲ್ವೆಸ್ಟರ್ ಪ್ರದೀಪ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. 

ಮಾಂತ್ರಿಕ:

ಆತ್ಮದ ಕಥೆಯನ್ನು ಹೊಂದಿರುವ ಸಾಕಷ್ಟು ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಅಂಥದ್ದೇ ಕಥೆ ಹೊಂದಿರುವ ಚಿತ್ರ ‘ಮಾಂತ್ರಿಕ’. ವ್ಯಾನವರ್ಣ ಜಮ್ಮುಲ ಈ ಚಿತ್ರಕ್ಕೆ ಆ್ಯಕ್ಷನ್‌–ಕಟ್‌ ಹೇಳುವುದರ ಜೊತೆಗೆ ಬಂಡವಾಳವನ್ನೂ ಹೂಡಿದ್ದಾರೆ. ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. 

‘ಇದೊಂದು ಆತ್ಮ, ದೆವ್ವದ ಹುಡುಕಾಟದ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥೆ. ದೆವ್ವ ಎಂಬುದು ಇದೆಯೋ, ಇಲ್ಲವೋ ಅಥವಾ ಅದೆಲ್ಲ ನಮ್ಮ ಭ್ರಮೆಯೋ ಎಂಬ ವಿಷಯದ ಮೇಲೆ ಈ ಚಿತ್ರ ಸಾಗುತ್ತದೆ’ ಎಂದಿದ್ದಾರೆ ನಿರ್ದೇಶಕರು. 

ರಾಧಿಕಾ ಮಾಲಿ ಪಾಟೀಲ ಹಾಗೂ ಮೈಥಿಲಿ ನಾಯಕ್ ಚಿತ್ರದ ನಾಯಕಿಯರು. ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಸ್ಟಾಲಿನ್ ಸಂಗೀತ, ಅನಿಲ್ ಆಂಟೋನಿ ಹಾಗೂ ರಮೇಶ್ ಮರ‍್ರಿಪಲ್ಲಿ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ.

ಪ್ರಕರಣ ತನಿಖಾ ಹಂತದಲ್ಲಿದೆ: 

ಬಹುತೇಕ ರಂಗಭೂಮಿ ಕಲಾವಿದರೇ ಸೇರಿ ನಿರ್ಮಿಸಿರುವ ಚಿತ್ರವಿದು. ಸುಂದರ್.ಎಸ್ ನಿರ್ದೇಶನವಿರುವ ಚಿತ್ರವನ್ನು ಚಿಂತನ್ ಕಂಬಣ್ಣ ನಿರ್ಮಾಣ ಮಾಡಿದ್ದಾರೆ.

‘ಕ್ರೈಂ ಕಥಾಹಂದರ ಹೊಂದಿರುವ ಚಿತ್ರವಿದು. ಒಂದು ಪ್ರಕರಣದ ತನಿಖೆಯ ಸುತ್ತಾ ಸಾಗುವ ಕಥೆ. ಸಿದ್ಧಸೂತ್ರದಾಚೆಗೆ ಏನೋ ಮಾಡಬೇಕೆಂಬ ಕನಸಿನೊಂದಿಗೆ ಚಿತ್ರ ತಯಾರಾಗಿದೆ’ ಎಂದಿದ್ದಾರೆ ಚಿತ್ರದ ನಿರ್ದೇಶಕರು.

ಮಹೀನ್ ಕುಬೇರ್ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ, ಮುತ್ತುರಾಜ್.ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ಮುಂತಾದವರ ತಾರಾಗಣವಿದೆ. ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್.ಜೆ ಛಾಯಾಚಿತ್ರಗ್ರಹಣ, ಶಿವೋಂ ಸಂಗೀತ ನಿರ್ದೇಶನ ಮತ್ತು ನಾನಿಕೃಷ್ಣ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಕನಕಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣಗೊಂಡಿದೆ. 

ಸಿಂಹರೂಪಿಣಿ:

ಮಾರಮ್ಮ ದೇವಿ ಕುರಿತಾದ ಕಥೆ ಹೊಂದಿರುವ ಭಕ್ತಿ ಪ್ರಧಾನ ಚಿತ್ರವಿದು. ಕೆ.ಎಂ.ನಂಜುಂಡೇಶ್ವರ ಕಥೆ ಬರೆದು, ಶ್ರೀಚಕ್ರ ಫಿಲ್ಮ್ಸ್‌ ಲಾಂಛನದಲ್ಲಿ ನಿರ್ಮಿಸಿರುವ ಚಿತ್ರಕ್ಕೆ ಕಿನ್ನಾಳ್‌ ರಾಜ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 

‘ಏನೇ ಕಷ್ಟ ಎದುರಾದರೂ ಗ್ರಾಮೀಣ ಭಾಗದಲ್ಲಿ ಅವರು ನಂಬಿರುವಂತಹ ದೇವರ ಮೊರೆ ಹೋಗುತ್ತಾರೆ. ಜಾತ್ರೆ, ಉತ್ಸವಗಳಲ್ಲಿ ಇನ್ನೂ ನಂಬಿಕೆ ಇದೆ ಎನ್ನುವಂಥ ಸಣ್ಣ ಸಣ್ಣ ವಿಷಯಗಳನ್ನು ಹೆಕ್ಕಿ ಪಾತ್ರಗಳ ಮೂಲಕ ತೋರಿಸಲಾಗಿದೆ. ಪ್ರತಿಯೊಂದು ದೇವರಿಗೂ ಹಿನ್ನೆಲೆ ಇರುತ್ತದೆ. ಹಾಗೆಯೇ ದೇವಿಯು ಮಹಾಲಕ್ಷ್ಮಿ ರೂಪದಲ್ಲಿ ಭೂಮಿಗೆ ಬರುತ್ತಾಳೆ. ಮುಂದೆ ಏಕೆ ಮಾರಮ್ಮ ಆಗುತ್ತಾಳೆ ಎಂಬುದಕ್ಕೆ ಚಿತ್ರದಲ್ಲಿ ಉತ್ತರ ನೀಡಲಾಗಿದೆ’ ಎಂದಿದ್ದಾರೆ ನಿರ್ದೇಶಕರು. 

ಯಶ್‌ ಶೆಟ್ಟಿ, ಯಶಸ್ವಿನಿ, ಅಂಕಿತಾ ಗೌಡ, ದಿವ್ಯ ಆಲೂರು, ನೀನಾಸಂ ಅಶ್ವಥ್, ಹರೀಶ್ ರಾಯ್, ವಿಜಯ್‌ ಚೆಂಡೂರು ಮುಂತಾದವರು ಚಿತ್ರದಲ್ಲಿದ್ದಾರೆ. ಆಕಾಶ್‌ಪರ್ವ ಸಂಗೀತ, ಕಿರಣ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.