ADVERTISEMENT

'ಬಿಸಿಬಿಸಿ Ice-Cream' ಸೇರಿದಂತೆ ಈ ವಾರ ನಾಲ್ಕು ಚಿತ್ರಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 0:34 IST
Last Updated 5 ಜುಲೈ 2024, 0:34 IST
ಸಿರಿ ರವಿಕುಮಾರ್‌
ಸಿರಿ ರವಿಕುಮಾರ್‌   

ಬಿಸಿಬಿಸಿ Ice-Cream:

ಅರವಿಂದ್ ಅಯ್ಯರ್-ಸಿರಿ ರವಿಕುಮಾರ್‌ ಜೋಡಿಯಾಗಿ ನಟಿಸಿರುವ ‘ಬಿಸಿಬಿಸಿ Ice-Cream’ ಇಂದು (ಜುಲೈ 5) ತೆರೆ ಕಾಣುತ್ತಿದೆ. ‘ಕಹಿ’, ‘ಅಳಿದು ಉಳಿದವರು’ ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರಿ ಈ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾ ನಿರ್ದೇಶಿಸಿದ್ದಾರೆ.

‘ಕ್ಯಾಬ್ ಡ್ರೈವರ್ ಕಥೆಯನ್ನು ನಾವು ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ. ಒಬ್ಬ ಒಂಟಿ ಕ್ಯಾಬ್ ಚಾಲಕನ ಜೀವನದಲ್ಲಿ ಮಿಸ್ಟೀರಿಯಸ್ ಹುಡುಗಿ ಬಂದಾಗ ಏನಾಗುತ್ತದೆ ಎನ್ನುವುದೇ ಸಿನಿಮಾದ ಕಥೆ’ ಎನ್ನುತ್ತಾರೆ ನಿರ್ದೇಶಕ ಅರವಿಂದ್‌.

ಡಾರ್ಕ್ ಕಾಮಿಡಿ ರೊಮ್ಯಾನ್ಸ್ ಕಥಾಹಂದರದ ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರೂ ಬಣ್ಣಹಚ್ಚಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ADVERTISEMENT

ಕಾಗದ:

ಅರುಣ್ ಕುಮಾರ್ ಆಂಜನೇಯ ನಿರ್ಮಿಸಿ, ರಂಜಿತ್ ನಿರ್ದೇಶಿಸಿರುವ ‘ಕಾಗದ’ ಇಂದು ತೆರೆ ಕಾಣುತ್ತಿರುವ ಮತ್ತೊಂದು ಚಿತ್ರ. ಮೊಬೈಲ್ ಬರುವ ಮುಂಚೆ, 2005ರ ಕಾಲಘಟ್ಟದಲ್ಲಿ ನಡೆಯುವ ಪ್ರೇಮಕಥೆ. 

ನವನಟ ಆದಿತ್ಯ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಬಾಲನಟಿಯಾಗಿ ಜನಪ್ರಿಯರಾಗಿರುವ ಅಂಕಿತ ಜಯರಾಂ ಚಿತ್ರದ ನಾಯಕಿ. ನೇಹಾ ಪಾಟೀಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಲ ರಾಜವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾಲ್ಕು ಹಾಡುಗಳಿಗೆ ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಛಾಯಾಚಿತ್ರಗ್ರಹಣ ಹಾಗೂ ಪವನ್ ಗೌಡ ಸಂಕಲನ ಈ ಚಿತ್ರಕ್ಕಿದೆ.

ಜಿಗರ್:

ಯು.ಕೆ .ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ನಿರ್ಮಿಸಿ, ಸೂರಿ ಕುಂದರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಜಿಗರ್’ ಇಂದು ತೆರೆ ಕಾಣುತ್ತಿದೆ. ಪ್ರವೀಣ್ ತೇಜ್ ಅವರಿಗೆ ನಾಯಕಿಯಾಗಿ ವಿಜಯಶ್ರೀ ನಟಿಸಿದ್ದಾರೆ. ವಿನಯಪ್ರಸಾದ್, ಯಶ್ವಂತ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಿತ್ವಿಕ್ ಮುರಳಿಧರ್ ಸಂಗೀತ, ಶಿವಸೇನ ಛಾಯಾಚಿತ್ರಗ್ರಹಣ, ಜ್ಞಾನೇಶ್ ಮಠದ್ ಸಂಕಲನವಿದೆ.

ಕಾದಾಡಿ:

ನಟ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ ‘ಕಾದಾಡಿ’ ಚಿತ್ರ ಈ ವಾರ ತೆರೆ ಕಾಣುತ್ತಿದೆ.  ಸತೀಶ್ ಮಾಲೆಂಪಾಟಿ ನಿರ್ದೇಶಿಸಿರುವ ಚಿತ್ರವನ್ನು ಅರುಣಂ ಫಿಲ್ಮ್ಸ್‌ನಿರ್ಮಾಣ ಮಾಡಿದೆ. 

‘ಜೀವನದಲ್ಲಿನ ತ್ಯಾಗ ಮತ್ತು ಕಾದಾಟದ ಕುರಿತ ಕಥೆ ಇದೆ. ಥ್ರಿಲ್ಲರ್‌ ಜಾನರ್‌ನ ಸಿನಿಮಾವಿದು’ ಎಂದರು ನಿರ್ದೆಶಕರು.

ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರು. ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಛಾಯಾಚಿತ್ರಗ್ರಹಣ ಡಿ.ಯೋಗಿಪ್ರಸಾದ್ ಅವರದ್ದು. ಪ್ರಕಾಶ್‌ತೋಟ ಸಂಕಲನವಿದೆ. ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಮೊದಲಾದೆಡೆ ಚಿತ್ರೀಕರಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.