ಕೋಮಲ್ ನಟನೆಯ ‘ಯಲಾಕುನ್ನಿ’ ಸೇರಿದಂತೆ ಮೂರು ಸಿನಿಮಾಗಳು ಇಂದು (ಅ.25) ತೆರೆ ಕಾಣುತ್ತಿವೆ.
‘ಯಲಾಕುನ್ನಿ’: ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್‌ಕುಮಾರ್, ಸಹನಾಮೂರ್ತಿ ನಿರ್ಮಿಸಿರುವ ಚಿತ್ರ ಇದಾಗಿದೆ. ನಟ ಕೋಮಲ್‌ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎನ್.ಆರ್. ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೋಮಲ್ ನಟ ದಿವಂಗತ ವಜ್ರಮುನಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ‘ಕೆ.ಡಿ.ನಾಗಪ್ಪ’ ಅವರ ಪಾತ್ರದ ಹೆಸರು. ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರಪ್ರಸಾದ್, ಶಿವರಾಜ್ ಕೆ.ಆರ್. ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ‘ಗಿಚ್ಚಿಗಿಲಿಗಿಲಿ’ಯ ಅಮೃತಾ ಬಣ್ಣಹಚ್ಚಿದ್ದಾರೆ. ವಜ್ರಮುನಿಯವರ ಮೊಮ್ಮೊಗ ಆಕರ್ಷ್ ಈ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸುತ್ತಿದ್ದಾರೆ.
ಎಲ್ಲಿಗೆ ಪಯಣ ಯಾವುದೋ ದಾರಿ: ನಿರ್ದೇಶಕ, ನಟ ದಿವಂಗತ ಕಾಶಿನಾಥ್ ಅವರ ಪುತ್ರ ಅಭಿಮನ್ಯು ನಟಿಸಿರುವ ಚಿತ್ರವಿದು. ಸಿನಿಮಾವನ್ನು ಕಿರಣ್ ಎಸ್. ಸೂರ್ಯ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಅವರದ್ದೆ. ಚಿತ್ರದ ಪ್ರಧಾನ ಪಾತ್ರದಲ್ಲಿ ವಿಜಯಶ್ರೀ ಕಲಬುರ್ಗಿ ನಟಿಸಿದ್ದು, ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ಜೋಡಿಯಾಗಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಪ್ರಮೋದ್ ಮರವಂತೆ ಸಾಹಿತ್ಯವಿದೆ.
ಮೂಕ ಜೀವ: ಇದು ಜೆ.ಎಂ.ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ಚಿತ್ರ. ಹಳ್ಳಿಯಲ್ಲಿ ಜೀವಿಸುತ್ತಿರುವ ಒಂದು ಬಡ ಕುಟುಂಬದ ಕಥೆಯೇ ಈ ‘ಮೂಕ ಜೀವ’.
ಅಂಗವಿಕಲರು ಅಂಗವಿಕಲತೆಯನ್ನು ನ್ಯೂನತೆ ಎಂದು ಭಾವಿಸದೆ ಅದರ ಜೊತೆಗೆ ಸಮಾಜದಲ್ಲಿ ತಾವು ಎಲ್ಲರಂತೆ ಬದುಕಬಹುದು ಎಂಬ ಆತ್ಮಸ್ಥೈರ್ಯವನ್ನು ತುಂಬುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ ಎಂದಿದೆ ಚಿತ್ರತಂಡ. ಎ.ವಿ.ಎಂ ಎಂಟರ್‌ಟೈನರ್ಸ್ ಮೂಲಕ ಎಂ.ವೆಂಕಟೇಶ ಮತ್ತು ಮಂಜುಳಾ ಅವರು ನಿರ್ಮಾಣ ಮಾಡಿದ್ದಾರೆ. ಶ್ರೀನಾಥ್ ವಸಿಷ್ಠ ಚಿತ್ರದ ನಿರ್ದೇಶಕರು. ಬಿಗ್‌ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ಶ್ರೀಹರ್ಷ, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.